Kalaburagi
ಕನ್ನೇರಿ ಶ್ರೀಗಳ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ವಿರೋಧ

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರು
ಭಾನುವಾರ, ಸೆಪ್ಟೆಂಬರ್ 20, 20262 ನಿಮಿಷ ಓದು11 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಕಲಬುರ್ಗಿ, ಸೆ.೧೯- ಇದೇ ಸೆಪ್ಟೆಂಬರ್ ೨೭ರಂದು ಕನ್ನೇರಿ ಶ್ರೀಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬಸವಾದಿ ಶಿವಶರಣ ಹಿಂದೂ ಸಮಾವೇಶವು ಬಸವತತ್ವ ವಿರೋಧಿಯಾಗಿದೆ. ಹೀಗಾಗಿ ಆ ಸಮಾವೇಶವನ್ನು ಖಂಡಿಸಿ ಇದೇ ಸೆಪ್ಟೆಂಬರ್ ೨೫ರಂದು ನಗರದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲಿಸಲಾಗುವುದು ಎಂದು ಆಳಂದ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನೇರಿ ಶ್ರೀಗಳ ಮಠವು ವಿರಕ್ತಮಠವಾಗಿದೆ. ಆ ಮಠದಲ್ಲಿ ಬಸವಣ್ಣನವರು ಜನಿವಾರ ತೆಗೆದೊಗೆದು ಹಿಂದೂ ಸಮಾಜದಿಂದ ಹೊರಬಂದರು. ಆದಾಗ್ಯೂ, ಕನ್ನೇರಿ ಶ್ರೀಗಳು ಜನಿವಾರದ ಸಂಸ್ಕಾರ ಮಠದಲ್ಲಿ ಬಳಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ವೇದವನೋದುವರೆಲ್ಲ ಬಂಜೆಯ ಮಕ್ಕಳು. ಶಾಸ್ತ್ರವನೋದುವರೆಲ್ಲ ಸೂಳೆಯ ಮಕ್ಕಳು, ಪುರಾಣವ ಹೇಳುವರೆಲ್ಲ ಕುಂಟಲಗಿತ್ತಿಯ ಮಕ್ಕಳು. ಆಗಮವ ನೋಡುವರೆಲ್ಲ ಹಾರುತಿಯ ಮಕ್ಕಳು. ತರ್ಕ ತಂತ್ರಗಳ ನೋಡಿ ಹೇಳುವರೆಲ್ಲ ವೈದ್ಯಗಾರತಿಯ ಮಕ್ಕಳು. ಇಂತೀ ವೇದಾಗಮಶಾಸ್ತ್ರ ಪುರಾಣ ತರ್ಕ ತಂತ್ರAಗಳೆಲ್ಲ ಕೇಳಿ ಆಚರಿಸುವವರೆಲ್ಲ ಡೊಂಬಜಾತಕಾರ್ತಿಯ ಮಕ್ಕಳು. ಇಂತಪ್ಪ ಜಡಮತಿ ವ್ರತಭ್ರಷ್ಟ ಮೂಳರಿಗೆ ಭವಬಂಧನ ಎಂದೂ ಹಿಂಗದು, ಮುಕ್ತಿ ದೋರದು. ಇಂತಿವರ ಪುಣ್ಯಕ್ಕೆ ಅಧಿಕಾರಿಗಳಾದ ಬ್ರಹ್ಮ, ವಿಷ್ಣು, ರುದ್ರ ಮೊದಲಾದ ದೇವತೆಗಳಿಗೆ ಮುನ್ನದೇ ಭವಹಿಂಗದು. ಕಾಡನೊಳಗಾದ ಶಂಕರಪ್ರಿಯ ಚೆನ್ನಕದಂಬಲಿAಗ ನಿರ್ಮಾಯಪ್ರಭುವೆ- ಕಾಡಸಿದ್ಧೇಶ್ವರರು ಎಂಬ ವಚನದ ಮೂಲಕ ಕನ್ನೇರಿ ಶ್ರೀಗಳ ವಿರುದ್ಧ ಅವರು ಹರಿಹಾಯ್ದರು.
೧೭ನೇ ಶತಮಾನದಲ್ಲಿ ಬಾಳಿದ್ದ ಮಹಾರಾಷ್ಟ್ರದಲ್ಲಿನ ಕಾಡಸಿದ್ದೇಶ್ವರರು ಬಸವಾದಿ ಶರಣ ಮಾರ್ಗದ ಉಪಾಸಕರಾಗಿದ್ದರು. ಅವರು ವೈದಿಕರ ಕರ್ಮಠತನವನ್ನು ತಮ್ಮ ವಚನಗಳಲ್ಲಿ ಖಂಡಿಸಿದ್ದಾರೆ. ೫೦೦ ವಚನಗಳನ್ನು ರಚಿಸಿ ಶುದ್ಧ ಲಿಂಗಾಯತ ತತ್ವವನ್ನು ಪ್ರತಿಪಾದಿಸಿದ್ದಾರೆ. ಅಂಥ ಪೀಠದ ಅಧಿಕಾರಿಗಳೆಂದು ಬಿಂಬಿಸಿಕೊಳ್ಳುತ್ತಿರುವ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಗಳು ಈಗ ಪೂರ್ತಿಯಾಗಿ ವೈದಿಕರಿಗೆ ಅರ್ಪಿಸಿಕೊಂಡು ಅವರ ಬಾಲಂಗೋಚಿಯಾಗಿ ಕೆಲಸ ಮಾಡುತ್ತಿದ್ದಾರೆ. ಲಿಂಗಾಯತ ತತ್ವಗಳನ್ನು ಗಾಳಿಗೆ ತೂರಿ ತಮ್ಮ ಮಠದಲ್ಲಿ ಯಜ್ಯೋಪವಿತ ಸಂಸ್ಕಾರ ಮಾಡುತ್ತಿದ್ದು, ಹೋಮ-ಹವನಗಳಲ್ಲಿ ನಿರತರಾಗಿದ್ದಾರೆ. ಇವರು ಮಾಡಿದ ಕರ್ಮಕಾಂಡದ ವೀಡಿಯೊ ವೈರಲ್ ಆಗಿದೆ ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಹಿಂದೂತ್ವವಾದಿಗಳು ಈವರೆಗೂ ತಪ್ಪಿಯೂ ಬಸವಾದಿ ಶರಣರನ್ನು ತಮ್ಮವರೆಂದು ಹೇಳಿಕೊಂಡಿಲ್ಲ. ತಪ್ಪಿಯೂ ತಮ್ಮ ಶಾಖೆಗಳಲ್ಲಿ ವಚನಗಳನ್ನು ಹೇಳಿಲ್ಲ. ಆದರೆ ಇದೀಗ ಅವರ ಕಾಕದೃಷ್ಟಿ ಬಸವಾದಿ ಶರಣರ ಮೇಲೆ ಬಿದ್ದಿದೆ. ಕಾರಣ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಟ್ಟದ್ದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕೆಂದು ಶಿಫಾರಸ್ಸು ಮಾಡಿದ್ದು ವೈದಿಕರಲ್ಲಿ ಭಯ ಮೂಡಿಸಿದೆ. ಲಿಂಗಾಯತರನ್ನು ತಮ್ಮ ಮತಬ್ಯಾಂಕ ಮಾಡಿಕೊಳ್ಳಲು ಹಾಗೂ ಎಲ್ಲ ಜಾತಿ, ಮತ, ಪಂಥದವರು ಬಸವಾದಿ ಶರಣರ ತತ್ವಾನುಯಾಯಿಗಳಾಗಿದ್ದರಿಂದ ಅವರೆಲ್ಲ ತಮ್ಮ ಕೈಬಿಟ್ಟು ಹೋಗುತ್ತಾರೆ ಎಂಬ ಆತಂಕದಿAದ ಅವರು ಶರಣರ ಹೆಸರು ಬಳಸಿಕೊಳ್ಳುವ ಮೂರ್ಖತನಕ್ಕೆ ಇಳಿದಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ವೈದಿಕರ ಕುತಂತ್ರದ ಫಲವಾಗಿ ಕನ್ನೇರಿ ಸ್ವಾಮಿಯನ್ನು ವೈದಿಕರು ಬಳಸಿಕೊಳ್ಳುತ್ತಿದ್ದಾರೆ. ಸದರಿ ಸ್ವಾಮಿಗಳು ತಮ್ಮ ಮೂಲ ತತ್ವಗಳನ್ನು ಗಾಳಿಗೆ ತೂರಿ ವೈದಿಕರ ಕೈಗೊಂಬೆಯಾಗಿ ವರ್ತಿಸುವುದಲ್ಲದೆ, ಅಡಿಯಾಳಾಗಿರುವುದು ನಿಜಕ್ಕೂ ಖೇದಕರ. ಅವರು ಹಿಂದೂ ಸಮ್ಮೇಳನ ಮಾಡಿಕೊಂಡು ಹೋಗಲಿ. ಅಥವಾ ಬಸವಾದಿ ಶರಣರನ್ನು ಕುರಿತೂ ಸಮಾವೇಶ ಮಾಡಲಿ. ಆದರೆ ಶಿವಶರಣರನ್ನು ವೈದಿಕರೊಂದಿಗೆ ಜೋಡಿಸುವ ಹುಂಬತನಕ್ಕೆ ಇಳಿಯಬಾರದು. ಅದು ಶರಣರಿಗೆ ಮಾಡುವ ದ್ರೋಹ. ಇಂಥ ದ್ರೋಹವನ್ನು ನೋಡಿ ಕಣ್ಣುಮುಚ್ಚಿ ಕೂಡುವಂತಿಲ್ಲ. ಬಸವ ತತ್ವನಿಷ್ಠರಾದ ನಾವು ಕನ್ನೇರಿ ಸ್ವಾಮಿಗಳು ಮಾಡುತ್ತಿರುವ ವೈದಿಕ ಕರ್ಮಠತೆಯನ್ನು ಖಂಡಿಸುತ್ತೇವೆ. ಅವರು ಹಿಂದುತ್ವ ವಿಷಾನೀಲದಿಂದ ಹೊರಬಂದು ನಿಜವಾದ ಬಸವ ತತ್ವಗಳ ಅನುಸಂಧಾನಿಗಳಾಗಬೇಕೆAದು ಆಗ್ರಹಿಸುತ್ತೇವೆ. ಇಲ್ಲವಾದರೆ ನಮ್ಮ ತಾತ್ವಿಕ ಹೋರಾಟ ನಿಲ್ಲದು ಎಂದು ಅವರು ಎಚ್ಚರಿಸಿದರು.
ಬಸವಕಲ್ಯಾಣದ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಅವರು ಮಾತನಾಡಿ, ಕನ್ನೇರಿ ಶ್ರೀಗಳು ಹಿಂದೂ ಸಮಾವೇಶ ಮಾಡುವುದಕ್ಕೆ ನಮ್ಮದು ಯಾವುದೇ ವಿರೋಧವಿಲ್ಲ. ಬದಲಾಗಿ ಬಸವಾದಿ ಶರಣರ ಹೆಸರನ್ನು ಹಿಂದೂ ಸಮಾವೇಶಕ್ಕೆ ಬಳಕೆ ಮಾಡುತ್ತಿರುವುದು ಖಂಡನಾರ್ಹ. ಅದಕ್ಕಾಗಿ ಅಂತಹ ಕಾರ್ಯಕ್ರಮಕ್ಕೆ ಅವಕಾಶ ಕೊಡಬಾರದು. ಆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೨೫ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲಿಸಲಾಗುವುದು ಎಂದರು.
ಈ ಹಿಂದೆ ಬಸವಕಲ್ಯಾಣದಲ್ಲಿ ಜರುಗಿದ ಬಸವಾದಿ ಶರಣರ ಹಿಂದೂ ಸಮಾವೇಶದ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ಕನ್ನೇರಿ ಶ್ರೀಗಳು ಮಾತನಾಡದಂತೆ ಕ್ರಮ ಕೈಗೊಳ್ಳಲಾಗಿತ್ತು. ಈಗ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಇಂತಹ ಅಸಂವಿಧಾನಿಕ ಸಮಾವೇಶ ಹಮ್ಮಿಕೊಂಡಿದ್ದು ಸರಿಯಲ್ಲ. ಕೂಡಲೇ ಜಿಲ್ಲಾಡಳಿತವು ಅನುಮತಿ ನಿರಾಕರಿಸಬೇಕು ಎಂದು ಒತ್ತಾಯಿಸಿದರು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads