📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Sedam

ಕನ್ನಡ ಗಜಲಕಾರರ ಬದ್ಧತೆ

- ಡಾ. ಮಲ್ಲಿನಾಥ ಎಸ್. ತಳವಾರ

- ಡಾ. ಮಲ್ಲಿನಾಥ ಎಸ್. ತಳವಾರ

ಸಹಾಯಕ ಪ್ರಾಧ್ಯಾಪಕರು

ಶುಕ್ರವಾರ, ಆಗಸ್ಟ್ 7, 20262 ನಿಮಿಷ ಓದು4 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಕನ್ನಡ ಗಜಲಕಾರರ ಬದ್ಧತೆ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಇಂದಿನ ಕನ್ನಡ ಸಾಹಿತ್ಯದಲ್ಲಿ ಗಜಲ್ ಒಂದು ಅನ್ಯಭಾಷೆ ಸಾಹಿತ್ಯರೂಪವಾಗಿ ಉಳಿಯದೆ, ಕನ್ನಡದ ಭಾವಲೋಕಕ್ಕೆ ತನ್ನದೇ ಆದ ಸ್ವರೂಪವನ್ನು ಪಡೆದುಕೊಂಡಿರುವ ಪ್ರಮುಖ ಕಾವ್ಯಪ್ರಕಾರವಾಗಿ ಬೆಳೆದಿದೆ. ಕನ್ನಡದಲ್ಲಿ ಗಜಲ್ ಪ್ರವೇಶಿಸಿದ ಆರಂಭಿಕ ಹಂತದಲ್ಲಿ ಅದು ಉರ್ದು ಗಜಲ್‌ನ ಪ್ರಭಾವವನ್ನು ಹೆಚ್ಚಾಗಿ ಅನುಸರಿಸಿತು. ಆದರೆ ಯಾವುದೇ ಸಾಹಿತ್ಯರೂಪವು ಒಂದು ಭಾಷೆಗೆ ಪ್ರವೇಶಿಸಿದಾಗ ಅದು ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಬೆರೆತಾಗ ಮಾತ್ರ ಜೀವಂತವಾಗುತ್ತದೆ. ಈ ಅರ್ಥದಲ್ಲಿ ಕನ್ನಡ ಗಜಲ್ ತನ್ನ ಮೂಲ ಪರಂಪರೆಯನ್ನು ಗೌರವಿಸುತ್ತಲೇ ಕನ್ನಡದ ಸ್ವಂತ ಅನುಭವಲೋಕವನ್ನು ಒಳಗೊಳ್ಳುವ ಹಂತಕ್ಕೆ ಬಂದಿದೆ. ಇಂದು ಕನ್ನಡದ ವಚನ, ಕೀರ್ತನೆ, ತ್ರಿಪದಿ, ಭಾವಗೀತೆ ಮೊದಲಾದ ಪರಂಪರೆಗಳೊAದಿಗೆ ಗಜಲ್ ಸಂವಾದ ನಡೆಸಬೇಕಾಗಿದೆ. ಗಜಲ್ ಉರ್ದು ಸಾಹಿತ್ಯದ ನೆರಳಾಗಿ ಉಳಿಯದೆ, ತನ್ನ ಮೂಲ ಸ್ವರೂಪ-ಲಕ್ಷಣಗಳನ್ನು ಕಡೆಗಣಿಸದೆ, ಕನ್ನಡದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನುಭವಗಳ ಅಭಿವ್ಯಕ್ತಿಯಾಗುವ ಅವಶ್ಯಕತೆಯಿದೆ. ಇದು ಕನ್ನಡ ಗಜಲ್ ಎದುರಿಸುತ್ತಿರುವ ಪ್ರಮುಖ ಸೃಜನಾತ್ಮಕ ಸವಾಲಾಗಿದೆ. ಉರ್ದು ಪರ್ಷಿಯನ್ ಪರಂಪರೆಯಿAದ ಕನ್ನಡಕ್ಕೆ ಬಂದ ಈ ಪ್ರಕಾರವು ಪ್ರೇಮ, ವಿರಹ, ನೋವು, ಬದುಕಿನ ಏಕಾಂತ, ಸಾಮಾಜಿಕ ತಲ್ಲಣ, ಮಾನವೀಯತೆ, ಅಸ್ತಿತ್ವದ ಪ್ರಶ್ನೆ ಮುಂತಾದ ವೈವಿಧ್ಯಮಯ ಅನುಭವಗಳನ್ನು ಅಭಿವ್ಯಕ್ತಿಸುವ ಸಾಮರ್ಥ್ಯವನ್ನು ತೋರಿಸಿದೆ. ಗಜಲ್‌ನ ಮೂಲ ಬೇರುಗಳು ಅರೇಬಿಕ್ ಪರ್ಷಿಯನ್ ಸಾಹಿತ್ಯದಲ್ಲಿದ್ದರೂ, ಉರ್ದು ಸಾಹಿತ್ಯದಲ್ಲಿ ಅದು ಅತ್ಯಂತ ಸಮೃದ್ಧ ರೂಪವನ್ನು ಪಡೆದುಕೊಂಡಿದೆ. ಮಿರ್ಜಾ ಗಾಲಿಬ್, ಮೀರ್ ತಕಿ ಮೀರ್ ರಂತಹ ಮೊದಲಾದ ಶಾಯರ್‌ಗಳ ಮೂಲಕ ಗಜಲ್ ವಿಶ್ವಸಾಹಿತ್ಯದ ಗಮನ ಸೆಳೆಯಿತು. ನಂತರ ಭಾರತೀಯ ಭಾಷೆಗಳಲ್ಲಿಯೂ ಗಜಲ್‌ನ ಪ್ರಭಾವ ಕಂಡುಬAದಿತು. ಕನ್ನಡದಲ್ಲಿ ಗಜಲ್ ತನ್ನ ಮೂಲ ರೂಪದ ಅನುಕರಣದಿಂದ ಆರಂಭಗೊAಡು, ಕ್ರಮೇಣ ಕನ್ನಡದ ಭಾಷೆ, ಸಂಸ್ಕೃತಿ, ಸಾಮಾಜಿಕ ಅನುಭವ ಮತ್ತು ಸ್ಥಳೀಯ ಭಾವಜಗತ್ತನ್ನು ಒಳಗೊಳ್ಳುವ ಸ್ವತಂತ್ರ ಅಭಿವ್ಯಕ್ತಿಯಾಗಿ ರೂಪುಗೊಳ್ಳುತ್ತಿದೆ. ಆದರೆ ಗಜಲ್‌ನ ಭವಿಷ್ಯ ಅದರ ಸಂಖ್ಯಾಬಲದಿAದ ಮಾತ್ರ ನಿರ್ಧಾರವಾಗುವುದಿಲ್ಲ; ಗಜಲ್‌ಕಾರರ ಸೃಜನಾತ್ಮಕ, ಭಾಷಿಕ, ಶಿಲ್ಪಾತ್ಮಕ, ಸಾಮಾಜಿಕ ಮತ್ತು ಮಾನವೀಯ ಬದ್ಧತೆ ಅದರ ಗುಣಮಟ್ಟವನ್ನು ನಿರ್ಧರಿಸುತ್ತದೆ. ಹೀಗಾಗಿ ಕನ್ನಡ ಗಜಲ್‌ನ ಇಂದಿನ ಸ್ಥಾನಮಾನವನ್ನು ಅರ್ಥಮಾಡಿಕೊಳ್ಳಬೇಕಾದರೆ ಅದರ ಸ್ವರೂಪ, ಶಿಲ್ಪ, ಭಾಷೆ, ವಸ್ತು, ಓದುಗರ ಸ್ವೀಕಾರ, ಜನಪ್ರಿಯತೆ, ವಿಮರ್ಶೆ, ಸಂಶೋಧನೆ ಹಾಗೂ ಗಜಲ್‌ಕಾರರ ಬದ್ಧತೆಗಳನ್ನು ಏಕಕಾಲದಲ್ಲಿಯೇ ಪರಿಶೀಲಿಸುವ ಅಗತ್ಯವಿದೆ. ಕನ್ನಡ ಗಜಲ್ ಎದುರಿಸುತ್ತಿರುವ ಇಂದಿನ ಪ್ರಮುಖ ಸಮಸ್ಯೆಯೆಂದರೆ ‘ಗಜಲ್ ಎಂದರೇನು?’ ಎಂಬ ಮೂಲಭೂತ ತಿಳಿವಳಿಕೆಯ ಕೊರತೆ. ದ್ವಿಪದಿಗಳಲ್ಲಿ ಪ್ರಾಸ ಹೊಂದಿದ ಯಾವುದೇ ಕವಿತೆಯನ್ನು ‘ಗಜಲ್’ ಎಂದು ಕರೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ಗಜಲ್‌ನ ನಿಜವಾದ ಸ್ವರೂಪದ ಬಗ್ಗೆ ಗೊಂದಲ ಉಂಟಾಗುತ್ತಿದೆ. ಮೂಲಭೂತವಾಗಿ ಗಜಲ್‌ಗೆ ತನ್ನದೇ ಆದ ಶಿಲ್ಪವಿದೆ. ಶೇರ್, ಮತ್ಲಾ, ಮಕ್ತಾ, ರದೀಫ್, ಕಾಫಿಯಾ, ಮೀಟರ್, ಬೆಹರ್ ಮೊದಲಾದ ತಾಂತ್ರಿಕ ಅಂಶಗಳ ಅರಿವು ಗಜಲ್ ರಚನೆಗೆ ಅಗತ್ಯ ಹಾಗೂ ಅನಿವಾರ್ಯ. ಇವುಗಳ ಅರಿವಿಲ್ಲದೆ ಕೇವಲ ಪ್ರಾಸ, ಲಯ ಮತ್ತು ಭಾವನಾತ್ಮಕತೆಯ ಆಧಾರದ ಮೇಲೆ ರಚಿಸಿದ ಪದ್ಯಗಳನ್ನು ಗಜಲ್ ಎಂದು ಗುರುತಿಸುವುದು ಅದರ ಸ್ವರೂಪವನ್ನೇ ದುರ್ಬಲಗೊಳಿಸಿದಂತಾಗುತ್ತದೆ. ಗಜಲ್ ಎಂದರೆ ಕೇವಲ ಎರಡು ಸಾಲುಗಳ ಪ್ರಾಸಬದ್ಧ ಪದ್ಯವಲ್ಲ. ಗಜಲ್‌ನ ಪ್ರತಿಯೊಂದು ಶೇರ್ ತನ್ನದೇ ಆದ ಅರ್ಥಪೂರ್ಣ ಘಟಕವಾಗಿದ್ದರೂ, ಒಟ್ಟಾರೆ ಗಜಲ್ ಒಂದು ವಿಶಿಷ್ಟ ಕಲಾತ್ಮಕ ಅನುಭವವನ್ನು ಕಟ್ಟಿಕೊಡುತ್ತದೆ. ಆದ್ದರಿಂದ ಗಜಲ್‌ಕಾರರ ಮೊದಲ ಬದ್ಧತೆ ಗಜಲ್‌ನ ಮೂಲ ಸ್ವರೂಪ ಮತ್ತು ಶಿಲ್ಪದ ಬಗ್ಗೆ ಇರಬೇಕು. ಗಜಲ್‌ನ ಶಿಲ್ಪನಿಯಮಗಳನ್ನು ತಿಳಿದುಕೊಂಡ ನಂತರವೇ ಅವುಗಳೊಂದಿಗೆ ಸೃಜನಾತ್ಮಕವಾಗಿ ಪ್ರಯೋಗ ಮಾಡುವುದು ಸಾಧ್ಯ. ನಿಯಮಜ್ಞಾನವಿಲ್ಲದ ಸ್ವೇಚ್ಛೆ ಗಜಲ್‌ನ ಸ್ವಾತಂತ್ರ‍್ಯವಲ್ಲ; ಅದು ಶಿಲ್ಪದ ಅಜ್ಞಾನವಾಗುತ್ತದೆ. ಉತ್ತಮ ಗಜಲ್ ಬರೆಯಲು ಕೇವಲ ಭಾವನೆ ಸಾಕಾಗುವುದಿಲ್ಲ. ಭಾವನೆ ಗಜಲ್‌ನ ಆರಂಭಿಕ ಶಕ್ತಿ ಆಗಬಹುದು; ಆದರೆ ಅದನ್ನು ಕಲಾತ್ಮಕ ಕಾವ್ಯಾನುಭವವಾಗಿ ರೂಪಿಸಲು ವ್ಯಾಪಕ ಓದು ಮತ್ತು ಅಧ್ಯಯನ ಅಗತ್ಯ. ಗಜಲ್‌ಕಾರರು ಉರ್ದು ಗಜಲ್ ಪರಂಪರೆ, ಪರ್ಷಿಯನ್ ಸಾಹಿತ್ಯ, ಕನ್ನಡ ಕಾವ್ಯಪರಂಪರೆ ಮತ್ತು ಸಮಕಾಲೀನ ವಿಶ್ವಸಾಹಿತ್ಯವನ್ನು ಓದಬೇಕು. ತಮ್ಮ ಪೂರ್ವಸೂರಿಗಳನ್ನು ಓದಬೇಕು; ಸಮಕಾಲೀನ ಸಾಹಿತ್ಯದ ಚಲನೆಗಳನ್ನು ಗಮನಿಸಬೇಕು; ಭಾಷೆಯ ಹೊಸ ಸಾಧ್ಯತೆಗಳನ್ನು ಅರಿಯಬೇಕು. ಓದು ಗಜಲ್‌ಕಾರನ ದೃಷ್ಟಿಯನ್ನು ವಿಸ್ತರಿಸುತ್ತದೆ. ಓದಿನ ಮೂಲಕ ಅವರು ಕೇವಲ ಗಜಲ್‌ನ ಶಿಲ್ಪವನ್ನಷ್ಟೇ ಅಲ್ಲ, ಮನುಷ್ಯನ ಸಂಕೀರ್ಣ ಅನುಭವಗಳನ್ನು ನೋಡುವ ವಿವಿಧ ದೃಷ್ಟಿಕೋನಗಳನ್ನು ಪಡೆಯುತ್ತಾರೆ. ಹೀಗಾಗಿ ಉತ್ತಮ ಗಜಲ್‌ಕಾರರ ಸೃಜನಾತ್ಮಕ ಬದ್ಧತೆಯ ಮೂಲದಲ್ಲಿ ನಿರಂತರ ಓದು ಮತ್ತು ಅಧ್ಯಯನ ಇರಬೇಕು. ಇದರಿಂದ ಉರ್ದು ಗಜಲ್ ಪರಂಪರೆಯನ್ನು ಗೌರವಿಸುವುದರ ಜೊತೆಗೆ ಕನ್ನಡದ ಸ್ವಂತ ಧ್ವನಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಗಜಲ್‌ನ ಅತ್ಯಂತ ಸಮೃದ್ಧ ಪರಂಪರೆ ಉರ್ದು ಭಾಷೆಯಲ್ಲಿ ಇರುವುದರಿಂದ ಉರ್ದು ಗಜಲ್‌ನ ಪರಂಪರೆಯನ್ನು ಗೌರವಿಸುವುದು ಇಂದಿನ ಅಗತ್ಯವಾಗಿದೆ. ಹಾಗಂತ, ಅದನ್ನು ಅಕ್ಷರಶಃ ಅನುಕರಿಸುವುದರಿಂದ ಕನ್ನಡ ಗಜಲ್ ತನ್ನದೇ ಆದ ವ್ಯಕ್ತಿತ್ವವನ್ನು ಪಡೆದುಕೊಳ್ಳಲಾರದು. 'ಪೂರ್ವಸೂರಿಗಳಂತೆ ಬರೆಯುವುದು’ಕ್ಕಿಂತ ‘ತಮ್ಮದೇ ರೀತಿಯಲ್ಲಿ ಬರೆಯುವುದು’ ಗಜಲ್‌ಕಾರರ ಸೃಜನಾತ್ಮಕ ಬದ್ಧತೆಯಾಗಬೇಕು. ಹೀಗಾಗಿ ಪರಂಪರೆಯ ಅರಿವು ಅನುಕರಣೆಗೆ ದಾರಿ ಮಾಡಿಕೊಡದೆ, ಸೃಜನಾತ್ಮಕ ಸ್ವಾತಂತ್ರ‍್ಯಕ್ಕೆ ದಾರಿ ಮಾಡಿಕೊಡಬೇಕು. ಉರ್ದು ಪರ್ಷಿಯನ್ ಗಜಲ್‌ನ ಆತ್ಮವನ್ನು ಅರಿತುಕೊಂಡು, ಅದರ ಶಿಲ್ಪಸೌಂದರ್ಯವನ್ನು ಗೌರವಿಸಿ, ಕನ್ನಡದ ಬದುಕಿಗೆ ತಕ್ಕಂತೆ ಹೊಸ ರೂಪಕ, ಹೊಸ ಪ್ರತಿಮೆ, ಹೊಸ ಭಾಷಾ ವಿನ್ಯಾಸ ಮತ್ತು ಹೊಸ ದೃಷ್ಟಿಕೋನಗಳನ್ನು ಕಂಡುಕೊಳ್ಳುವುದು ಕನ್ನಡ ಗಜಲ್‌ಕಾರರ ಸೃಜನಾತ್ಮಕ ಹೊಣೆಗಾರಿಕೆಯಾಗಿದೆ. ಗಜಲ್ ಮುಕ್ತ ಛಂದಸ್ಸಿನ ಸಾಹಿತ್ಯಪ್ರಕಾರವಲ್ಲ. ಇದರಲ್ಲಿ ಶಿಲ್ಪಕ್ಕೆ ಹೆಚ್ಚಿನ ಮಹತ್ವವಿದೆ. ಕಾಫಿಯಾ, ರದೀಫ್, ಲಯ, ಪ್ರಾಸ, ಮಾತ್ರೆ ಅಥವಾ ಬೆಹರ್‌ಗಳನ್ನು ಪಾಲಿಸುವ ಪ್ರಯತ್ನದಲ್ಲಿ ಕೆಲವೊಮ್ಮೆ ಭಾವದ ಸಹಜತೆ ಮತ್ತು ಅರ್ಥದ ಆಳ ಕಳೆದುಹೋಗುವ ಸಾಧ್ಯತೆ ಇದೆ. ಇನ್ನೊಂದೆಡೆ, ಭಾವವನ್ನು ಮಾತ್ರ ಮುಖ್ಯವಾಗಿಸಿಕೊಂಡು ಶಿಲ್ಪನಿಯಮಗಳನ್ನು ನಿರ್ಲಕ್ಷಿಸಿದರೆ ಗಜಲ್‌ನ ವಿಶಿಷ್ಟತೆಯೇ ಕುಂದುತ್ತದೆ. ಹೀಗಾಗಿ ‘ಶಿಲ್ಪದ ಶಿಸ್ತು + ಭಾವದ ಸಹಜತೆ’ ಎರಡನ್ನೂ ಸಮನ್ವಯಗೊಳಿಸುವುದು ಗಜಲ್‌ಕಾರರ ಮುಂದಿರುವ ದೊಡ್ಡ ಸವಾಲಾಗಿದೆ. ಶಿಲ್ಪವು ಭಾವಕ್ಕೆ ಅಡ್ಡಿಯಾಗಬಾರದು; ಭಾವವೂ ಶಿಲ್ಪವನ್ನು ನಿರ್ಲಕ್ಷಿಸಬಾರದು. ಶಿಲ್ಪ ಮತ್ತು ಭಾವ ಪರಸ್ಪರ ವಿರೋಧಿಗಳಲ್ಲ; ಅವು ಪರಸ್ಪರ ಪೂರಕವಾಗಬೇಕು. ಉತ್ತಮ ಗಜಲ್‌ಗಳಲ್ಲಿ ನಿಯಮವು ಕಾವ್ಯವನ್ನು ಬಂಧಿಸುವುದಿಲ್ಲ; ಬದಲಾಗಿ ಕಾವ್ಯಕ್ಕೆ ಕಲಾತ್ಮಕವಾದ ಆಕಾರ ಮತ್ತು ಸಂಗೀತಾತ್ಮಕ ಚಲನೆ ನೀಡುತ್ತದೆ. ಗಜಲ್‌ನ ಪ್ರಮುಖ ವಸ್ತು ಪ್ರೇಮ ಮತ್ತು ವಿರಹ. ಆದರೆ ಇಂದಿನ ಗಜಲ್ ಕೇವಲ ‘ನೀನು-ನಾನು’, ಪ್ರೀತಿ- ವಿರಹ, ಕಣ್ಣೀರು-ನೋವು ಇವುಗಳಲ್ಲೇ ಸುತ್ತಾಡಿದರೆ ಅದರ ವಸ್ತುಪ್ರಪಂಚ ಸೀಮಿತವಾಗುತ್ತದೆ. ಸಮಕಾಲೀನ ಜೀವನದಲ್ಲಿ ಜಾತಿ, ವರ್ಗ, ರಾಜಕೀಯ, ನಿರುದ್ಯೋಗ, ರೈತರ ಸಂಕಟ, ನಗರೀಕರಣ, ಪರಿಸರ, ತಂತ್ರಜ್ಞಾನ, ಯುದ್ಧ, ವಲಸೆ, ಏಕಾಂತ, ಅಸ್ತಿತ್ವದ ಬಿಕ್ಕಟ್ಟು ಮುಂತಾದ ಅನೇಕ ಪ್ರಶ್ನೆಗಳಿವೆ. ಸಮಕಾಲೀನ ಬದುಕಿನ ಈ ಸಂಕೀರ್ಣತೆಯನ್ನು ಗಜಲ್ ಹೇಗೆ ತನ್ನ ಅಶರ್‌ನಲ್ಲಿ ಹಿಡಿದಿಡುತ್ತದೆ ಎಂಬುದು ಮಹತ್ವದ ಸವಾಲು. ಗಜಲ್ ತನ್ನ ಮೂಲದಲ್ಲಿ ಭಾವನಾತ್ಮಕ ಕಾವ್ಯವಾದರೂ, ಅದು ಕೇವಲ ವೈಯಕ್ತಿಕ ಭಾವನೆಯಲ್ಲೇ ನಿಲ್ಲಬೇಕೆಂದಿಲ್ಲ. ಇಂದಿನ ಕನ್ನಡ ಗಜಲ್ ಸಮಾಜದ ನೋವು, ಶೋಷಣೆ ಮತ್ತು ಅನ್ಯಾಯಗಳತ್ತಲೂ ಮುಖ ಮಾಡಬೇಕಾಗಿದೆ; ಮುಖ ಮಾಡಿದೆ ಕೂಡ. ಹಸಿವು, ಬಡತನ, ಜಾತೀಯತೆ, ಕೋಮುವಾದ, ಭ್ರಷ್ಟಾಚಾರ, ಮಹಿಳಾ ಶೋಷಣೆ, ಅಸಮಾನತೆ ಮುಂತಾದ ಸಮಸ್ಯೆಗಳಿಗೆ ಗಜಲ್ ಇಂದು ಧ್ವನಿಯಾಗುತ್ತಿದೆ. ಆದರೆ ಇಲ್ಲಿ ಅಗತ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ಗಜಲ್‌ನ ಮೂಲಭೂತ ಮೃದುತ್ವ ಮರೆಯಾಗಬಾರದು ಹಾಗೂ ಬಂಡಾಯದ ಛಾಪು ಗಜಲ್‌ನ ಮೂಲವನ್ನು ಹಾಳುಗೆಡವಬಾರದು. ಅಂದರೆ ಸಾಮಾಜಿಕ ಬದ್ಧತೆ ಗಜಲ್‌ನ ಕಾವ್ಯಾತ್ಮಕತೆಯನ್ನು ನಾಶಮಾಡಬಾರದು. ಸಾಮಾಜಿಕ ಕಳಕಳಿಯೂ ಇರಬೇಕು; ಆದರೆ ಅದು ಘೋಷಣೆಯಾಗಿ ಮಾತ್ರ ಉಳಿಯದೆ, ಕಾವ್ಯಾನುಭವವಾಗಿ ಪರಿವರ್ತನೆಯಾಗಬೇಕು. ಇದೇ ಗಜಲ್‌ನ ಸಾಮಾಜಿಕ ಸೃಜನಶೀಲತೆಯ ನಿಜವಾದ ಪರೀಕ್ಷೆ. ಕನ್ನಡದ ಕಾದಂಬರಿ, ಕಥೆ, ಕವಿತೆ, ಕಾದಂಬರಿಯೇತರ ಸಾಹಿತ್ಯಗಳಿಗೆ ಹೋಲಿಸಿದರೆ ಗಜಲ್‌ಗೆ ಇನ್ನೂ ವ್ಯಾಪಕ ಓದುಗರ ಸಮುದಾಯ ರೂಪುಗೊಳ್ಳಬೇಕಿದೆ. ಗಜಲ್‌ಗಳನ್ನು ಓದುವವರಿಗಿಂತ ಕೇಳುವವರ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದೆ. ಗಜಲ್ ಗಾಯನದಿಂದ ಅದು ಜನಪ್ರಿಯವಾಗುತ್ತಿದ್ದರೂ, ಗಜಲ್‌ನ ಸಾಹಿತ್ಯಿಕ ಶಿಲ್ಪ ಮತ್ತು ತಾತ್ವಿಕ ಅರ್ಥಗಳನ್ನು ಓದುವ ಸಂಸ್ಕೃತಿಯೂ ಬೆಳೆಯಬೇಕಾಗಿದೆ. ಇಂದು ಕನ್ನಡದಲ್ಲೂ ಗಜಲ್‌ಗಳನ್ನು ಹಾಡಲಾಗುತ್ತಿದೆ; ಸಂಗೀತದ ಬಂಧದಲ್ಲಿ ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ನಾವು ಕ್ರಮಿಸಬೇಕಾದ, ತಲುಪಬೇಕಾದ ದಾರಿ ಬಹುದೂರವಿದೆ. ಏಕೆಂದರೆ ಕನ್ನಡ ಗಜಲ್‌ಗಳು ‘ಭಾವಗೀತೆ’ಯ ನೆರಳಲ್ಲಿ ಮುದುಡುತ್ತಿವೆ. ಗಜಲ್ ಸಂಗೀತ ಮತ್ತು ಗಾಯನದಿಂದ ಜನಪ್ರಿಯವಾಗುತ್ತದೆ. ಹಾಗಂತ, ಜನಪ್ರಿಯತೆಯ ಉದ್ದೇಶದಿಂದ ಕೇವಲ ಮಧುರತೆ, ಪ್ರೇಮ, ಭಾವೋದ್ರೇಕ ಮತ್ತು ಸುಲಭ ಪದಗಳನ್ನೇ ಅವಲಂಬಿಸಿದರೆ ಗಜಲ್‌ನ ಸಾಹಿತ್ಯಿಕ ಆಳ ಕಡಿಮೆಯಾಗಬಹುದು. ಆದ್ದರಿಂದ ಜನಪ್ರಿಯತೆ ಮತ್ತು ಸಾಹಿತ್ಯಿಕ ಗುಣಮಟ್ಟದ ನಡುವೆ ಸಮತೋಲನ ಸಾಧಿಸುವ ಅವಶ್ಯಕತೆಯಿದೆ. ಗಜಲ್ ಹಾಡಬಹುದಾದದ್ದಾಗಿರಬೇಕು ಎಂಬುದು ಅದರ ಒಂದು ಶಕ್ತಿ; ಆದರೆ ಹಾಡಲು ಸುಲಭವಾಗಿರುವುದೇ ಅದರ ಸಾಹಿತ್ಯಿಕ ಮೌಲ್ಯದ ಏಕೈಕ ಮಾನದಂಡವಾಗಬಾರದು. ಕನ್ನಡ ಗಜಲ್‌ನ ಭಾಷೆಯಲ್ಲಿಯೂ ಒಂದು ಸೂಕ್ಷ್ಮ ಸಮಸ್ಯೆ ಇದೆ. ಗಜಲ್‌ನ ಭಾಷೆ ಅತಿಯಾಗಿ ಕೃತಕವಾಗಬಾರದು. ಅದೇ ಸಂದರ್ಭದಲ್ಲಿ ಅತಿಯಾದ ಆಡುಮಾತಿನ ಬಳಕೆಯಿಂದ ಕಾವ್ಯಾತ್ಮಕತೆ ನಷ್ಟವಾಗಬಾರದು. ಉರ್ದು ಪರ್ಷಿಯನ್ ಪದಗಳನ್ನು ಅತಿಯಾಗಿ ಬಳಸಿದರೆ ಗಜಲ್ ಕನ್ನಡದ ಓದುಗರಿಗೆ ದೂರವಾಗಬಹುದು. ಮತ್ತೊಂದೆಡೆ, ಕನ್ನಡದ ಸಹಜ ನುಡಿಗಟ್ಟು ಮತ್ತು ಲಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೇವಲ ಅನುವಾದದ ಭಾಷೆಯನ್ನು ಬಳಸಿದರೆ ಗಜಲ್‌ನ ಸ್ವಾಭಾವಿಕತೆ ನಷ್ಟವಾಗುತ್ತದೆ. ಕನ್ನಡದ ಸಹಜ ಪದಗಳೊಂದಿಗೆ ಅಗತ್ಯವಿದ್ದಲ್ಲಿ ಉರ್ದು ಪರ್ಷಿಯನ್ ಮೂಲದ ಪದಗಳನ್ನು ಬಳಸಬಹುದು. ಆದರೆ ಪದವು ಕೇವಲ ಅಲಂಕಾರಕ್ಕಾಗಿ ಬರಬಾರದು; ಭಾವಕ್ಕೆ ಅನಿವಾರ್ಯವಾದಾಗ ಮಾತ್ರ ಬರಬೇಕು. ಹೀಗಾಗಿ ಕನ್ನಡದ ಸಹಜ ಭಾಷೆ, ಉರ್ದು ಗಜಲ್‌ನ ಸೌಂದರ್ಯ ಮತ್ತು ಸಮಕಾಲೀನ ಸಂವೇದನೆಗಳ ನಡುವೆ ಸಮತೋಲನ ಅಗತ್ಯವಿದೆ. ಗಜಲ್‌ನ ಭಾಷೆ ಓದುಗರಿಗೆ ಹತ್ತಿರವಾಗಿರಬೇಕು; ಆದರೆ ಸರಳತೆ ಎಂದರೆ ಸಾಮಾನ್ಯತೆ ಎಂದಲ್ಲ. ಸರಳವಾದ ಪದಗಳಲ್ಲಿಯೇ ಆಳವಾದ ಭಾವ, ಸೂಕ್ಷ್ಮವಾದ ಸೂಚನೆ ಮತ್ತು ಬಹುಸ್ತರದ ಅರ್ಥಗಳನ್ನು ಸೃಷ್ಟಿಸುವ ಸಾಮರ್ಥ್ಯ ಗಜಲ್‌ಕಾರರಿಗೆ ಇರಬೇಕು. ಈ ಹಿನ್ನೆಲೆಯಲ್ಲಿ ಕನ್ನಡ ಗಜಲ್‌ನ ಬಹುದೊಡ್ಡ ಸವಾಲು ಅದರ ಕನ್ನಡೀಕರಣ. ಉರ್ದು ಗಜಲ್‌ನ ಬಾಹ್ಯ ರೂಪವನ್ನು ಮಾತ್ರ ಅನುಕರಿಸದೆ, ಕನ್ನಡದ ನುಡಿಗಟ್ಟು, ಜನಪದ ಪ್ರತಿಮೆ, ಗ್ರಾಮೀಣ ಬದುಕು, ನಗರ ಸಂವೇದನೆ, ಕನ್ನಡದ ಸಾಂಸ್ಕೃತಿಕ ಸ್ಮೃತಿ ಮತ್ತು ಸ್ಥಳೀಯ ಅನುಭವ ಗಜಲ್‌ನೊಳಗೆ ಪ್ರವೇಶಿಸಬೇಕು. ಆಗ ಮಾತ್ರ ಅದು ಕನ್ನಡದಲ್ಲಿ ಬರೆಯಲ್ಪಟ್ಟ ಗಜಲ್ ಮಾತ್ರವಲ್ಲ, ಕನ್ನಡದ ಅನುಭವದಿಂದ ಹುಟ್ಟಿದ ಗಜಲ್ ಆಗುತ್ತದೆ. ಉರ್ದು ಗಜಲ್‌ನ ಭಾವ, ಪ್ರತಿಮೆ, ಶಬ್ದಸಂಪತ್ತು ಮತ್ತು ಶೈಲಿಯನ್ನು ಯಥಾವತ್ತಾಗಿ ಅನುಕರಿಸಬಾರದು. ‘ಸಾಕಿ’, ‘ಮಯಖಾನಾ’, ‘ಶರಾಬ್’, ‘ಆಶಿಕ್’, ‘ಮಾಶೂಕ್’ ಮುಂತಾದ ಸಾಂಪ್ರದಾಯಿಕ ಪ್ರತಿಮೆಗಳನ್ನು ಕನ್ನಡದ ಸಾಮಾಜಿಕ-ಸಾಂಸ್ಕೃತಿಕ ಪರಿಸರಕ್ಕೆ ಹೊಂದಿಸದೆ ಬಳಸಿದರೆ, ಅದು ಕನ್ನಡದ ಸ್ವಂತ ಗಜಲ್ ಆಗುವುದಕ್ಕಿಂತ ಅನುವಾದಿತ ಅಥವಾ ಅನುಕರಣಾತ್ಮಕ ಬರಹದಂತೆ ಭಾಸವಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಕನ್ನಡ ಗಜಲ್‌ಕಾರು ತಮ್ಮ ಸುತ್ತಲಿನ ಮಣ್ಣು, ಮಳೆ, ಹಸಿವು, ರೈತ, ಬಡವ, ಮನೆ, ತಾಯಿ, ನದಿ, ಹಳ್ಳಿ, ನಗರ, ಬೀದಿ ಮುಂತಾದ ಪ್ರತಿಮೆಗಳನ್ನು ಬಳಸಬೇಕು. ಕನ್ನಡದ ಜನಜೀವನದ ಅನುಭವಗಳು, ಸ್ಥಳೀಯ ರೂಪಕಗಳು, ನುಡಿಗಟ್ಟುಗಳು, ಸಾಂಸ್ಕೃತಿಕ ಸ್ಮೃತಿಗಳು ಗಜಲ್‌ನೊಳಗೆ ಜೀವಂತವಾಗಿ ಪ್ರವೇಶಿಸಿದಾಗ ಮಾತ್ರ ಕನ್ನಡ ಗಜಲ್‌ಗೆ ತನ್ನದೇ ಆದ ಸಾಂಸ್ಕೃತಿಕ ನೆಲೆ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಉರ್ದು ಗಜಲ್‌ನ ದೇಹ ಮತ್ತು ಆತ್ಮವನ್ನು ಉಳಿಸಿಕೊಂಡು, ಕನ್ನಡದ ನೆಲದ ಅನುಭವವನ್ನು ಅದರಲ್ಲಿ ತುಂಬುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಒಬ್ಬ ಗಜಲ್‌ಕಾರನ ಜವಾಬ್ದಾರಿ ತನ್ನ ಗಜಲ್‌ಗಳ ಪ್ರಕಟಣೆಯೊಂದಿಗೆ ಮುಗಿಯುವುದಿಲ್ಲ. ಹೊಸ ತಲೆಮಾರಿನ ಗಜಲ್‌ಕಾರರನ್ನು ರೂಪಿಸುವುದು, ಗಜಲ್‌ನ ಶಿಲ್ಪದ ಬಗ್ಗೆ ಚರ್ಚೆ ನಡೆಸುವುದು, ಕಾರ್ಯಾಗಾರಗಳನ್ನು ನಡೆಸುವುದು, ಗಜಲ್‌ನ ಕುರಿತು ವಿಮರ್ಶೆ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು ಕೂಡ ಅಗತ್ಯ. ಗಜಲ್ ಒಬ್ಬೊಬ್ಬ ಕವಿಯ ವೈಯಕ್ತಿಕ ಪ್ರಯತ್ನದಿಂದ ಸಮೃದ್ಧ ಸಾಹಿತ್ಯ ಪರಂಪರೆಯಾಗಿ ಬೆಳೆಯಬೇಕಾದರೆ ಗಜಲ್‌ಕಾರರ ನಡುವೆ ಸಂವಾದವೂ ಬೇಕು. ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು; ಕಿರಿಯರು ಪ್ರಶ್ನಿಸುವ, ಪ್ರಯೋಗಿಸುವ ಮತ್ತು ಹೊಸ ದಾರಿಗಳನ್ನು ಕಂಡುಕೊಳ್ಳುವ ಅವಕಾಶ ಪಡೆಯಬೇಕು. ಗಜಲ್‌ನ ಶಿಲ್ಪ, ಇತಿಹಾಸ, ಸೌಂದರ್ಯಶಾಸ್ತ್ರ ಮತ್ತು ಕನ್ನಡೀಕರಣದ ಕುರಿತು ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ಸಂವಾದಗಳು ಮತ್ತು ಸಂಶೋಧನೆಗಳು ನಡೆಯಬೇಕು. ಇದರಿಂದ ಗಜಲ್ ಒಂದು ಕ್ಷಣಿಕ ಸಾಹಿತ್ಯಪ್ರವಾಹವಾಗದೆ, ಬಲವಾದ ಸಾಹಿತ್ಯ ಪರಂಪರೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಯಾವುದೇ ಸಾಹಿತ್ಯಪ್ರಕಾರ ಬೆಳೆಯಬೇಕಾದರೆ ಸೃಷ್ಟಿಯ ಜೊತೆಗೆ ಗಂಭೀರ ವಿಮರ್ಶೆಯೂ ಬೇಕು. ಕನ್ನಡದಲ್ಲಿ ಗಜಲ್ ಕುರಿತ ಸೈದ್ಧಾಂತಿಕ ಚರ್ಚೆ, ಗಜಲ್‌ನ ಶಿಲ್ಪ, ಕನ್ನಡ ಗಜಲ್‌ನ ಬೆಳವಣಿಗೆ, ವಿವಿಧ ಗಜಲ್‌ಕಾರರ ಕೃತಿಗಳ ವಿಮರ್ಶೆ, ಉರ್ದು-ಕನ್ನಡ ಗಜಲ್‌ಗಳ ತೌಲನಿಕ ಅಧ್ಯಯನ ಮುಂತಾದ ಕ್ಷೇತ್ರಗಳಲ್ಲಿ ವ್ಯವಸ್ಥಿತ ಸಂಶೋಧನೆ ಮತ್ತು ವಿಮರ್ಶೆಯ ಅಗತ್ಯವಿದೆ. ಗಜಲ್ ಬರೆಯುವವರ ಸಂಖ್ಯೆ ಹೆಚ್ಚುವುದಕ್ಕಿಂತ ಗಜಲ್ ಕುರಿತು ಗಂಭೀರವಾಗಿ ಚಿಂತಿಸುವವರ ಸಂಖ್ಯೆ ಹೆಚ್ಚುವುದು ಮುಖ್ಯ. ಸೃಷ್ಟಿ, ವಿಮರ್ಶೆ ಮತ್ತು ಸಂಶೋಧನೆ ಪರಸ್ಪರ ಪೂರಕವಾಗಬೇಕು. ಗಜಲ್‌ಕಾರರಿಗೆ ತಮ್ಮ ಕೃತಿಯ ಬಗ್ಗೆ ಬರುವ ವಿಮರ್ಶೆಯನ್ನು ಸಹಿಸಿಕೊಳ್ಳುವ ಮನೋಭಾವವೂ ಅಗತ್ಯ. ಪ್ರಶಂಸೆಯನ್ನು ಮಾತ್ರ ಸ್ವೀಕರಿಸಿ ವಿಮರ್ಶೆಯನ್ನು ತಿರಸ್ಕರಿಸಿದರೆ ಸಾಹಿತ್ಯ ಬೆಳೆಯುವುದಿಲ್ಲ. ಗಜಲ್‌ನ ದೋಷಗಳನ್ನು ಗುರುತಿಸುವ ವಿಮರ್ಶಕರೂ ಗಜಲ್‌ನ ಬೆಳವಣಿಗೆಗೆ ಸಹಾಯಕರೇ. ಹೀಗಾಗಿ ಗಜಲ್‌ಕಾರರು ತಮ್ಮ ಕೃತಿಯ ಬಗ್ಗೆ ಆತ್ಮವಿಮರ್ಶೆಯನ್ನೂ ಮಾಡಿಕೊಳ್ಳಬೇಕು. ಗಂಭೀರ ವಿಮರ್ಶೆ ಗಜಲ್‌ನ ಶಿಲ್ಪದ ದೋಷಗಳನ್ನು ಗುರುತಿಸುವುದರಲ್ಲಷ್ಟೇ ಸೀಮಿತವಾಗಬಾರದು. ಅದರ ಭಾಷೆ, ರೂಪಕ, ಸಾಮಾಜಿಕ ದೃಷ್ಟಿ, ಸೌಂದರ್ಯಶಾಸ್ತ್ರ, ತಾತ್ವಿಕತೆ, ಸಾಂಸ್ಕೃತಿಕ ನೆಲೆ ಮತ್ತು ಕಾಲಪ್ರಜ್ಞೆಗಳನ್ನು ಪರಿಶೀಲಿಸುವಂತಿರಬೇಕು. ಉರ್ದು ಮತ್ತು ಕನ್ನಡ ಗಜಲ್‌ಗಳ ತೌಲನಿಕ ಅಧ್ಯಯನ, ಕನ್ನಡದಲ್ಲಿ ಗಜಲ್‌ನ ಚರಿತ್ರೆ ಮತ್ತು ಬೆಳವಣಿಗೆಯ ದಾಖಲೀಕರಣವೂ ಅಗತ್ಯವಾಗಿದೆ. ಸಾಮಾಜಿಕ ಮಾಧ್ಯಮಗಳು ಗಜಲ್‌ಗೆ ದೊಡ್ಡ ವೇದಿಕೆಯನ್ನು ಒದಗಿಸಿವೆ. ‘ಗಜಲ್’ ಎಂಬ ಹೆಸರಿನ ವ್ಯಾಪ್ತಿ ವಿಸ್ತರಿಸುವುದರ ಜೊತೆಗೆ ಅದರ ಸ್ವರೂಪದ ಬಗ್ಗೆ ಗೊಂದಲವನ್ನೂ ಮೂಡಿಸಿವೆ. ‘ಎರಡೆರಡು ಸಾಲುಗಳು + ಪ್ರಾಸ + ಭಾವನಾತ್ಮಕ ಮಾತು = ಗಜಲ್’ ಎಂಬ ಸರಳೀಕರಣದಿಂದ ಗಜಲ್‌ನ ಶಿಲ್ಪದ ಕುರಿತ ತಪ್ಪು ಕಲ್ಪನೆಗಳು ಎಲ್ಲೆಡೆಯೂ ಹರಡುತ್ತಿವೆ. ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ತಕ್ಷಣದ ಪ್ರತಿಕ್ರಿಯೆ, ‘ಲೈಕ್’, ‘ಶೇರ್’ ಮತ್ತು ಜನಪ್ರಿಯತೆಯ ಆಕರ್ಷಣೆ ಗಜಲ್‌ಕಾರರನ್ನೂ ಕಾಡುತ್ತಿದೆ. ಆದರೆ ಗಜಲ್‌ಕಾರರ ನಿಜವಾದ ಗುರಿ ತಕ್ಷಣದ ಜನಪ್ರಿಯತೆಯಲ್ಲ; ದೀರ್ಘಕಾಲದ ಸಾಹಿತ್ಯಿಕ ಮೌಲ್ಯ. ಒಂದು ಗಜಲ್ ಇಂದು ನೂರಾರು ಜನರಿಂದ ಹಂಚಲ್ಪಡುವುದಕ್ಕಿAತ, ವರ್ಷಗಳ ನಂತರವೂ ಓದುಗರ ಮನಸ್ಸಿನಲ್ಲಿ ಉಳಿಯುವುದು ಮುಖ್ಯವಾಗಬೇಕು. ತಕ್ಷಣದ ಮೆಚ್ಚುಗೆ, ಲೈಕ್, ಕಾಮೆಂಟ್, ಶೇರ್‌ಗಳಿಗಾಗಿ ಬರೆಯುವ ಪ್ರವೃತ್ತಿಗಿಂತ ಸಾಹಿತ್ಯಿಕ ಗುಣಮಟ್ಟಕ್ಕೆ ಆದ್ಯತೆ ನೀಡುವುದು ಗಜಲ್‌ನ ಹಾಗೂ ಗಜಲ್‌ಕಾರರ ಮುಂದಿರುವ ಪ್ರಮುಖ ಪರೀರಕ್ಷೆಯಾಗಿದೆ. ಆದ್ದರಿಂದ ಕನ್ನಡದಲ್ಲಿ ಗಜಲ್ ರಚಿಸುವವರು ಅದರ ಪರಂಪರೆ ಮತ್ತು ತಾಂತ್ರಿಕ ಲಕ್ಷಣಗಳನ್ನು ಅರಿತುಕೊಂಡು, ಕನ್ನಡದ ಸ್ವಭಾವಕ್ಕೆ ಹೊಂದುವAತೆ ಅದನ್ನು ಸೃಜನಾತ್ಮಕವಾಗಿ ಬಳಸಬೇಕಾಗಿದೆ. ಕನ್ನಡ ಗಜಲ್‌ನ ಭವಿಷ್ಯ ಗಜಲ್‌ಕಾರರ ಬದ್ಧತೆಯ ಮೇಲೆ ನಿಂತಿದೆ. ಗಜಲ್‌ಕಾರರು ಕೇವಲ ಪ್ರಾಸಬದ್ಧ ಎರಡು ಸಾಲುಗಳನ್ನು ಕಟ್ಟುವವರು ಅಲ್ಲ; ಅವರು ತಮ್ಮ ಕಾಲದ ಸಂವೇದನಾಶೀಲ ಸಾಕ್ಷಿ, ಭಾಷೆಯ ಸೃಜನಶೀಲ ಶಿಲ್ಪಿ ಮತ್ತು ಮಾನವೀಯ ಮೌಲ್ಯಗಳ ಪ್ರತಿನಿಧಿ. ಗಜಲ್‌ಕಾರರ ಮೊದಲ ಬದ್ಧತೆ ಗಜಲ್‌ನ ಮೂಲ ಸ್ವರೂಪ ಮತ್ತು ಶಿಲ್ಪದ ಬಗ್ಗೆ ಇರಬೇಕು. ಶಿಲ್ಪದ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಸೃಜನಾತ್ಮಕವಾಗಿ ಬಳಸಬೇಕು. ಎರಡನೆಯದಾಗಿ ಅವರ ಬದ್ಧತೆ ಕನ್ನಡದ ಭಾಷೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಬಗ್ಗೆ ಇರಬೇಕು. ಮೂರನೆಯದಾಗಿ ತಮ್ಮ ಕಾಲದ ಸಾಮಾಜಿಕ ವಾಸ್ತವದ ಬಗ್ಗೆ ಇರಬೇಕು. ಅಂತಿಮವಾಗಿ ಅವರ ಬದ್ಧತೆ ಮನುಷ್ಯ ಮತ್ತು ಮಾನವೀಯತೆಯ ಬಗ್ಗೆ ಇರಬೇಕು. ಸಾಮಾಜಿಕ ಸಮಸ್ಯೆಗಳನ್ನು ಬರೆಯಬೇಕು; ಆದರೆ ಕಾವ್ಯವನ್ನು ಘೋಷಣೆಯಾಗಿ ಪರಿವರ್ತಿಸಬಾರದು. ಪ್ರೇಮವನ್ನು ಬರೆಯಬೇಕು; ಆದರೆ ಅದನ್ನು ಕೇವಲ ಭಾವೋದ್ರೇಕಕ್ಕೆ ಸೀಮಿತಗೊಳಿಸಬಾರದು. ಭಾಷೆಯನ್ನು ಸರಳವಾಗಿಡಬೇಕು; ಆದರೆ ಕಾವ್ಯಾತ್ಮಕತೆಯನ್ನು ಕಳೆದುಕೊಳ್ಳಬಾರದು. ಶಿಲ್ಪವನ್ನು ಪಾಲಿಸಬೇಕು; ಆದರೆ ಶಿಲ್ಪದ ಬಂಧನದಲ್ಲಿ ಭಾವವನ್ನು ಉಸಿರುಗಟ್ಟಿಸಬಾರದು. ಕನ್ನಡ ಗಜಲ್‌ನ ಗುಣಮಟ್ಟವನ್ನು ಹೆಚ್ಚಿಸಬೇಕಾದರೆ ಪ್ರತಿಯೊಬ್ಬ ಗಜಲ್‌ಕಾರರೂ ತಮ್ಮ ಕೃತಿಯ ಮುಂದೆ ಆತ್ಮಪರಿಶೀಲನೆಯೊಂದಿಗೆ ನಿಲ್ಲಬೇಕಾಗಿದೆ. ಅವರು ತಮ್ಮನ್ನು ತಾವೇ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: * ತಾವು ಬರೆಯುತ್ತಿರುವುದು ನಿಜಕ್ಕೂ ಗಜಲ್‌ನ ಶಿಲ್ಪವನ್ನು ಹೊಂದಿದೆಯೇ? * ತಮ್ಮ ಗಜಲ್‌ಗಳಲ್ಲಿ ಕನ್ನಡದ ನೆಲದ ವಾಸನೆ ಇದೆಯೇ? * ತಾವು ಕೇವಲ ಉರ್ದು ಗಜಲ್‌ಳನ್ನು ಅನುಕರಿಸುತ್ತಿದ್ದೇವೆಯೇ? * ತಮ್ಮ ಗಜಲ್‌ಗಳಲ್ಲಿ ತಮ್ಮ ಕಾಲದ ಬದುಕು ಮಾತನಾಡುತ್ತಿದೆಯೇ? * ತಮ್ಮ ಪ್ರೇಮದ ಹಿಂದೆ ಮಾನವೀಯತೆ ಇದೆಯೇ? * ತಮ್ಮ ಭಾಷೆ ಸಹಜವಾಗಿದೆಯೇ? * ತಮ್ಮ ಗಜಲ್‌ಗಳಲ್ಲಿ ಹೊಸ ರೂಪಕ ಅಥವಾ ಹೊಸ ದೃಷ್ಟಿಕೋನವಿದೆಯೇ? * ಸಾಮಾಜಿಕ ಮಾಧ್ಯಮದ ಮೆಚ್ಚುಗೆಗಾಗಿ ಬರೆಯುತ್ತಿದ್ದೇವೆಯೇ? * ತಮ್ಮ ಗಜಲ್ ಕಾಲವನ್ನು ಪ್ರಶ್ನಿಸುತ್ತದೆಯೇ? * ತಮ್ಮ ಗಜಲ್ ಓದುಗರ ಮನಸ್ಸಿನಲ್ಲಿ ಉಳಿಯುವಷ್ಟು ಕಾವ್ಯಾತ್ಮಕವಾಗಿದೆಯೇ? ಈ ಪ್ರಶ್ನೆಗಳು ಕೇವಲ ಗಜಲ್‌ಕಾರರ ಆತ್ಮಪರಿಶೀಲನೆಯ ಪ್ರಶ್ನೆಗಳಲ್ಲ; ಅವು ಕನ್ನಡ ಗಜಲ್‌ನ ಭವಿಷ್ಯದ ಪ್ರಶ್ನೆಗಳೂ ಹೌದು. ಕನ್ನಡ ಗಜಲ್ ಎದುರಿಸುತ್ತಿರುವ ಸಮಸ್ಯೆಗಳು ಕೇವಲ ರೂಪ ಅಥವಾ ಭಾಷೆಗೆ ಸಂಬAಧಿಸಿದವುಗಳಲ್ಲ; ಅವು ಅದರ ಅಸ್ತಿತ್ವ, ಸ್ವರೂಪ, ಸೌಂದರ್ಯಶಾಸ್ತ್ರ ಮತ್ತು ಭವಿಷ್ಯಕ್ಕೆ ಸಂಬAಧಿಸಿದ ಪ್ರಶ್ನೆಗಳಾಗಿವೆ. ಒಂದು ಕಡೆ ಗಜಲ್‌ನ ಮೂಲ ಪರಂಪರೆಯನ್ನು ಉಳಿಸಿಕೊಳ್ಳಬೇಕು. ಇನ್ನೊಂದು ಕಡೆ ಕನ್ನಡದ ಭಾಷಾ-ಸಾಂಸ್ಕೃತಿಕ ಪರಿಸರಕ್ಕೆ ಅದನ್ನು ಹೊಂದಿಸಬೇಕು. ಒಂದು ಕಡೆ ಶಿಲ್ಪದ ನಿಯಮಗಳನ್ನು ಪಾಲಿಸಬೇಕು; ಇನ್ನೊಂದು ಕಡೆ ಭಾವದ ಸಹಜತೆಯನ್ನು ಉಳಿಸಿಕೊಳ್ಳಬೇಕು. ಒಂದು ಕಡೆ ಪ್ರೇಮ, ವಿರಹ, ನೋವು ಮುಂತಾದ ಗಜಲ್‌ನ ಮೂಲ ಭಾವಲೋಕವನ್ನು ಉಳಿಸಬೇಕು; ಇನ್ನೊಂದು ಕಡೆ ಸಮಕಾಲೀನ ಸಾಮಾಜಿಕ ಬದುಕಿನ ಸಂಕೀರ್ಣತೆಯನ್ನು ಒಳಗೊಳ್ಳಬೇಕು. ಒಂದು ಕಡೆ ಸಂಗೀತ ಮತ್ತು ಗಾಯನದ ಮೂಲಕ ಜನಪ್ರಿಯತೆಯನ್ನು ಪಡೆಯಬೇಕು; ಇನ್ನೊಂದು ಕಡೆ ‘ಭಾವಗೀತೆ’ಯ ನೆರಳಿನಲ್ಲಿ ತನ್ನ ವಿಶಿಷ್ಟತೆಯನ್ನು ಕಳೆದುಕೊಳ್ಳಬಾರದು. ಒಂದು ಕಡೆ ಸಾಮಾಜಿಕ ಮಾಧ್ಯಮಗಳ ವ್ಯಾಪಕ ವೇದಿಕೆ ಬಳಸಿಕೊಳ್ಳಬೇಕು; ಇನ್ನೊಂದು ಕಡೆ ಲೈಕ್, ಕಾಮೆಂಟ್, ಶೇರ್‌ಗಳ ತಾತ್ಕಾಲಿಕ ಜನಪ್ರಿಯತೆಯ ಮೋಹಕ್ಕೆ ಸಿಲುಕಬಾರದು. ಒಂದು ಕಡೆ ಉರ್ದು-ಪರ್ಷಿಯನ್ ಪರಂಪರೆಯನ್ನು ಗೌರವಿಸಬೇಕು; ಇನ್ನೊಂದು ಕಡೆ ಕನ್ನಡದ ಸ್ವಂತ ಧ್ವನಿಯನ್ನು ಕಂಡುಕೊಳ್ಳಬೇಕು. ಈ ಎಲ್ಲ ದ್ವಂದ್ವಗಳ ನಡುವೆ ಸಮತೋಲನ ಸಾಧಿಸುವುದೇ ಕನ್ನಡ ಗಜಲ್‌ಗೆ ಇರುವ ನಿಜವಾದ ಚಾಲೆಂಜ್ ಆಗಿದೆ. ಕನ್ನಡ ಗಜಲ್ ಇಂದು ತನ್ನದೇ ಆದ ಒಂದು ಸ್ಥಾನವನ್ನು ನಿರ್ಮಿಸಿಕೊಂಡಿದ್ದರೂ, ಅದರ ಬೆಳವಣಿಗೆಯ ಹಾದಿ ಸಂಪೂರ್ಣವಾಗಿ ಸುಗಮವಾಗಿಲ್ಲ. ಗಜಲ್‌ನ ಮೂಲ ಪರಂಪರೆ, ಕನ್ನಡದ ಭಾಷಾ-ಸಾಂಸ್ಕೃತಿಕ ಪರಿಸರ, ಅದರ ಶಿಲ್ಪನಿಯಮಗಳು, ಓದುಗರ ಸ್ವೀಕಾರ ಮತ್ತು ಸಮಕಾಲೀನ ಸಾಹಿತ್ಯದ ಬದಲಾದ ಸ್ವರೂಪ,ಇವೆಲ್ಲವೂ ಗಜಲ್ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳೊಂದಿಗೆ ಸಂಬAಧಿಸಿವೆ. ಗಜಲ್ ಕನ್ನಡದಲ್ಲಿ ಉಳಿಯಬೇಕಾದರೆ ಉರ್ದು ಗಜಲ್‌ನ ಪರಂಪರೆಯನ್ನು ಗೌರವಿಸುವುದರ ಜೊತೆಗೆ ಕನ್ನಡದ ಮಣ್ಣಿನಲ್ಲಿ ತನ್ನದೇ ಆದ ಬೇರುಗಳನ್ನು ಬೆಳೆಸಿಕೊಳ್ಳಬೇಕಿದೆ. ಜನಪ್ರಿಯತೆಯೊಂದಿಗೆ ಸಾಹಿತ್ಯಿಕ ಗಂಭೀರತೆಯನ್ನೂ ಉಳಿಸಿಕೊಳ್ಳಬೇಕು. ಶಿಲ್ಪದ ಶಿಸ್ತಿನೊಂದಿಗೆ ಭಾವದ ಸಹಜತೆಯನ್ನು ಕಾಪಾಡಬೇಕು. ಕನ್ನಡದ ಭಾಷೆ ಮತ್ತು ಸಂಸ್ಕೃತಿಯೊAದಿಗೆ ಬೆರೆತು, ಸಮಕಾಲೀನ ಬದುಕಿನ ಸಂಕೀರ್ಣತೆಯನ್ನು ಅಭಿವ್ಯಕ್ತಿಸಬೇಕು. ಗಜಲ್ ಸೃಷ್ಟಿಯ ಜೊತೆಗೆ ಅದರ ವಿಮರ್ಶೆ, ಸಂಶೋಧನೆ ಮತ್ತು ಸೈದ್ಧಾಂತಿಕ ಚರ್ಚೆಗಳೂ ಬೆಳೆಯಬೇಕು. ಕನ್ನಡ ಗಜಲ್‌ನ ಭವಿಷ್ಯ ಕೇವಲ ಗಜಲ್ ಬರೆಯುವವರ ಸಂಖ್ಯೆಯಲ್ಲಿ ಇಲ್ಲ; ಉತ್ತಮ ಗಜಲ್ ಬರೆಯುವವರ ಗುಣಮಟ್ಟದಲ್ಲಿ ಇದೆ. ಗಜಲ್‌ಕಾರರು ಕೇವಲ ಎರಡು ಸಾಲುಗಳಲ್ಲಿ ಪ್ರಾಸವನ್ನು ಕಟ್ಟುವ ಶಾಯರ್ ಅಲ್ಲ. ಅವರು ತಮ್ಮ ಕಾಲದ ನೋವು-ನಲಿವುಗಳಿಗೆ ಕಿವಿಗೊಡುವ ಸಂವೇದನಾಶೀಲ ಸಾಕ್ಷಿ; ಕನ್ನಡ ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸುವ ಸೃಜನಶೀಲ ಶಿಲ್ಪಿ; ತಮ್ಮ ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಲೇಖಕರು; ಅಂತಿಮವಾಗಿ ಮನುಷ್ಯನ ಪರವಾಗಿ ನಿಲ್ಲುವ ಮಾನವೀಯ ಧ್ವನಿ. ಆದ್ದರಿಂದ ಕನ್ನಡ ಗಜಲ್‌ಕಾರರ ಬದ್ಧತೆ ಒಂದೆಡೆ ಗಜಲ್‌ನ ಶಿಲ್ಪಶಿಸ್ತಿಗೆ, ಮತ್ತೊಂದೆಡೆ ಕನ್ನಡದ ಭಾಷಾ-ಸಾಂಸ್ಕೃತಿಕ ಅಸ್ಮಿತೆಗೆ, ಇನ್ನೊಂದೆಡೆ ತನ್ನ ಕಾಲದ ಸಾಮಾಜಿಕ ವಾಸ್ತವಕ್ಕೆ, ಅಂತಿಮವಾಗಿ ಮನುಷ್ಯ ಮತ್ತು ಮಾನವೀಯತೆಗೆ ಇರಬೇಕಾಗಿದೆ. ಕನ್ನಡ ಗಜಲ್‌ನ ಮುಂದಿರುವ ನಿಜವಾದ ಸವಾಲು ‘ಗಜಲ್ ಬರೆಯುವುದು’ ಅಲ್ಲ; ‘ಕನ್ನಡದ ಆತ್ಮವನ್ನು ಹೊತ್ತ ಉತ್ತಮ ಗಜಲ್ ಬರೆಯುವುದು’. ಈ ಸವಾಲನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಕನ್ನಡ ಗಜಲ್ ಒಂದು ಆಮದುಗೊಂಡ ಸಾಹಿತ್ಯರೂಪದಿಂದ ಕನ್ನಡದ ಸೃಜನಶೀಲ ಕಾವ್ಯಪರಂಪರೆಯಾಗಿ ಇನ್ನಷ್ಟು ಬಲವಾಗಿ ಸ್ಥಾಪಿತವಾಗಲು ಸಾಧ್ಯ!
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads