Literature
ಕಗ್ಗ ದರ್ಶನ

ಡಾ. ಜಗನ್ನಾಥ ತರನಳ್ಳಿ
ಕನ್ನಡ ವಿದ್ವಾಂಸರು, ವಕೀಲರು
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು4 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
೧೫೯. ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ ಭೂಪುಟದಿ ಜೀವರಸಗಳ ಪಚಿಸುವಂತೆ ಪಾಪಿಯಂ ಪ್ರೋತ್ಸಹಿಸಿ ಸುಕೃತಿಯ ಪರೀಕ್ಷಿಸುತ ವೇಪಿಪನು
ವಿಧಿ ನಮ್ಮ ಮಂಕುತಿಮ್ಮ.
ಈ ಪದ್ಯದಲ್ಲಿ ವಿಧಿಯು ಮನುಷ್ಯನ ಜೀವನವನ್ನು ಹೇಗೆ ಪರೀಕ್ಷಿಸುತ್ತದೆ ಮತ್ತು ಪಕ್ವಗೊಳಿಸುತ್ತದೆ ಎಂಬುದನ್ನು ಋತುಚಕ್ರ ಹಾಗೂ ಪ್ರಕೃತಿಯ ಚಿಕಿತ್ಸೆಯ ರೂಪಕದ ಮೂಲಕ ತಿಳಿಸಲಾಗಿದೆ. ಪ್ರಕೃತಿಯಲ್ಲಿ ಋತುಗಳು ಬಿಸಿ ಮಾಡುತ್ತವೆ; ತಂಪು ನೀಡುತ್ತವೆ.ಗಾಳಿಯಿಂದ ಅಲುಗಾಡಿಸುತ್ತವೆ. ಹೀಗೆ ಭೂಮಿಯಲ್ಲಿರುವ ಜೀವಿಗಳ ಮತ್ತು ಸಸ್ಯಗಳ ರಸಗಳನ್ನು ಪಕ್ವಗೊಳಿಸುವಂತೆ, ವಿಧಿಯು ಮನುಷ್ಯನ ಜೀವನದಲ್ಲಿ ಸುಖ-ದುಃಖ, ಏರಳಿತ ಕಷ್ಟ, ನಷ್ಟಗಳನ್ನು ಉಂಟು ಮಾಡಿ ಅವನನ್ನು ಪಕ್ವಗೊಳಿಸುತ್ತದೆ. ಪಾಪಿಯನ್ನು ಕೆಲವೊಮ್ಮೆ? ಉತ್ತೇಜಿಸಿ, ಅವನಿಗೆ ಅವಕಾಶಗಳನ್ನು ನೀಡುತ್ತದೆ. ಸುಕೃತಿಯನ್ನೂ ಪರೀಕ್ಷಿಸುತ್ತದೆ. ಈ ರೀತಿಯಾಗಿ ವಿಧಿಯು ಎಲ್ಲರನ್ನೂ ತನ್ನ ಪರೀಕ್ಷೆಗೆ ಒಳಪಡಿಸುತ್ತದೆ ಎಂಬುದು ಪದ್ಯದ ಭಾವ. "ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ"- ಬೇಸಿಗೆಯ ಬಿಸಿಯಿಂದ ತಾಪಿಸುವುದು, ಚಳಿಯಿಂದ ತಣಿಸುವುದು ಗಾಳಿ ಮಳೆಯ ಮೂಲಕ ಕುಲುಕುವುದು ಇವೆಲ್ಲ ಪ್ರಕೃತಿಯ ಕಾರ್ಯಗಳು. ಕವಿ ಋತುಗಳನ್ನು ಒಬ್ಬ ವೈದ್ಯನಂತೆ ಕಲ್ಪಿಸಿದ್ದಾರೆ.
"ಭೂಪಟದಿ ಜೀವರಸಗಳ ಪಚಿಸುವಂತೆ"-ವೈದ್ಯನು ಔಷಧಿ ನೀಡಿ ದೇಹವನ್ನು ಗುಣಪಡಿಸುವಂತೆ, ಋತುಗಳು ಭೂಮಿಯ ಮೇಲಿನ ಸಸ್ಯ,ಜೀವಿಗಳ ಬೆಳವಣಿಗೆ ಮತ್ತು ಪಕ್ವತೆಗೆ ಕಾರಣವಾಗುತ್ತದೆ.ಬಿಸಿಲು, ಮಳೆ,ಚಳಿ ಮುಂತಾದ ವೈವಿಧ್ಯಮಯ ಪರಿಸ್ಥಿತಿಗಳು ಜೀವ ಜಗತ್ತನ್ನು ರೂಪಿಸುತ್ತವೆ.
"ಪಾಪಿಯಂ ಪ್ರೋತ್ಸಹಿಸಿ ಸುಕೃತಿಯ ಪರೀಕ್ಷಿಸುತ"-ಜೀವನದಲ್ಲಿ ಕೆಲವೊಮ್ಮೆ ತಪ್ಪು ಮಾಡುವವನಿಗೂ ಅವಕಾಶ, ಯಶಸ್ಸು ದೊರೆಯಬಹುದು. ಅದೇ ಸಮಯದಲ್ಲಿ ಒಳ್ಳೆಯವನಿಗೆ ಕಷ್ಟಗಳು ಎದುರಾಗಬಹುದು. ಆದ್ದರಿಂದ ಸುಖ ಬಂದರೆ ಅದು ಪುಣ್ಯದ ಖಚಿತ ಗುರುತು, ದುಃಖ ಬಂದರೆ ಪಾಪದ ಖಚಿತಫಲ ಎಂದು ಸರಳವಾಗಿ ನಿರ್ಧರಿಸಲಾಗದು. "ವೇಪಿಪನು ವಿಧಿ ನಮ್ಮ ಮಂಕುತಿಮ್ಮ"-ವಿಧಿಯು ಮನುಷ್ಯರನ್ನು ವಿವಿಧ ಅನುಭವಗಳ ಮೂಲಕ ಬೆಳೆಸುತ್ತದೆ; ಪರೀಕ್ಷಿಸುತ್ತದೆ ಮತ್ತು ಪಕ್ವಗೊಳಿಸುತ್ತದೆ. ಜೀವನವೇ ಒಂದು ಪರೀಕ್ಷಾ ಕ್ಷೇತ್ರ ಎಂಬ ವಿಚಾರವನ್ನು ಈ ಕಗ್ಗದಲ್ಲಿ ವ್ಯಕ್ತವಾಗಿದೆ. ಪ್ರಕೃತಿ ಒಂದೇ ರೀತಿಯಾಗಿ ಇರುವುದಿಲ್ಲ.ಬೇಸಿಗೆ,ಮಳೆ, ಚಳಿ ಹೀಗೆ ಬದಲಾಗುತ್ತದೆ. ಅದೇ ರೀತಿ ಮನುಷ್ಯನ ಜೀವನದಲ್ಲಿಯೂ ಸುಖ-ದುಃಖಗಳು ಪರ್ಯಾಯವಾಗಿ ಬರುತ್ತವೆ. ವಿಧಿಯ ಪರೀಕ್ಷೆಯ ಉದ್ದೇಶ ಕೇವಲ ಶಿಕ್ಷಿಸುವುದಲ್ಲ; ಅದು ಮನುಷ್ಯನ ಅನುಭವ, ಸಹನೆ, ವಿವೇಕ ಮತ್ತು ಆತ್ಮಶಕ್ತಿಯನ್ನು ಬೆಳೆಸುವುದಾಗಿದೆ.ಕಷ್ಟಗಳು ಬಂದಾಗ ಕುಗ್ಗಿದೆ, ಸುಖ ಬಂದಾಗ ಅಹಂಕಾರ ಪಡೆದೆ ಎರಡನ್ನೂ ಜೀವನದ ಪಾಠಗಳೆಂದು ಸ್ವೀಕರಿಸುವುದು ಕಗ್ಗದ ಪ್ರಮುಖ ಆಶಯವಾಗಿದೆ. ಇದನ್ನು ಭಗವದ್ಗೀತೆಯ ನೆಲೆಯಲ್ಲಿ ನೋಡಿದರೂ, "ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಖದು:ಖದಾ:ಆಗಮಾಪಾಯಿನೋನಿತ್ಯಾ:ತಾಂಸ್ತಿತಿಕ್ಷಸ್ವಭಾರತ" ಎಂದರೆ, ಹೇ ಕೌಂತೇಯನೇ! ಇಂದ್ರಿಯ ಮತ್ತು ವಿಷಯಗಳ ಸಂಪರ್ಕದಿAದ ಶೀತ,ಉಷ್ಣ ಸುಖ, ದುಃಖಗಳು ಉಂಟಾಗುತ್ತವೆ.ಅವು ಬಂದು ಹೋಗುವವು; ಶಾಶ್ವತವಲ್ಲ. ಆದ್ದರಿಂದ ಅವುಗಳನ್ನು ಸಹನೆಯಿಂದ ಎದುರಿಸು ಎನ್ನಲಾಗಿದೆ.ಪ್ರಕೃತಿಯ ವಿವಿಧ ಋತುಗಳು ಜೀವ ಜಗತ್ತನ್ನು ಬೆಳೆಸಿ ಪಕ್ವಗೊಳಿಸುವಂತೆ, ಜೀವನದ ಅನುಭವಗಳು ಮನುಷ್ಯನ ಮನಸ್ಸು,ವಿವೇಕ ಮತ್ತು ವ್ಯಕ್ತಿತ್ವವನ್ನು ಪಕ್ವಗೊಳಿಸುತ್ತವೆ. ಅವುಗಳನ್ನು ಸಮಚಿತ್ತದಿಂದ ಸಹಿಸಿ, ಕರ್ತವ್ಯದಲ್ಲಿ ಸ್ಥಿರವಾಗಿ ಇರಬೇಕು ಎಂಬುದನ್ನು ಗೀತೆಯಲ್ಲಿಯೂ ಹೇಳಲಾಗಿದೆ. ಈ ಪದ್ಯದ ವಿಶೇಷತೆ ಎಂದರೆ ಪ್ರಕೃತಿಯ ಋತುಚಕ್ರವನ್ನು ಮಾನವ ಜೀವನದ ವಿಧಿಚಕ್ರಕ್ಕೆ ಹೋಲಿಸಿರುವುದರಲ್ಲಿದೆ.
`ಋತು ವೈದ್ಯ'ಎಂಬ ಪದ ಪ್ರಯೋಗ ಅತ್ಯಂತ ಅರ್ಥಪೂರ್ಣ. ವೈದ್ಯನು ಕೆಲವೊಮ್ಮೆ ಕಹಿಯಾದ ಔಷಧಿ ನೀಡಿದರೂ ಅದು ಆರೋಗ್ಯಕ್ಕಾಗಿ ಇರುತ್ತದೆ.ಹಾಗೆಯೇ ಜೀವನದ ಕಹಿ ಅನುಭವಗಳು ವ್ಯಕ್ತಿಯ ಬೆಳವಣಿಗೆಗೆ ಕಾರಣವಾಗಬಹುದು. ಆದರೆ ಈ ಕಗ್ಗವನ್ನು ಎಲ್ಲವೂ ವಿಧಿಯೇ, ಮನುಷ್ಯನ ಪ್ರಯತ್ನಕ್ಕೆ ಸ್ಥಾನವಿಲ್ಲ ಎಂಬ ಅರ್ಥದಲ್ಲಿ ತೆಗೆದುಕೊಳ್ಳಬಾರದು.
ಇಲ್ಲಿ ವಿಧಿಯ ಪರೀಕ್ಷೆಯ ಜೊತೆಗೆ ಅದನ್ನು ಎದುರಿಸುವ ಮನುಷ್ಯನ ವಿವೇಕ, ಧೈರ್ಯ ಮತ್ತು ಪೌರುಷಕ್ಕೂ ಮಹತ್ವವಿದೆ. ಜೀವನದ ಸುಖ ದುಃಖಗಳು ಮನುಷ್ಯನನ್ನು ಪರೀಕ್ಷಿಸಿ, ಪಕ್ವಗೊಳಿಸುವ ವಿಧಿಯ ಸಾಧನಗಳು. ಆದ್ದರಿಂದ ಏರಿಳಿತಗಳಲ್ಲಿ ಸಮ ಚಿತ್ತದಿಂದ ಇದ್ದು, ಅನುಭವಗಳಿಂದ ಪಾಠ ಕಲಿಯಬೇಕು ಎಂಬುವ ತತ್ವವನ್ನು ಸಾರಿರುವುದು ಈ ಕಗ್ಗದ ವಿಶೇಷತೆಯಾಗಿದೆ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads