Literature
ಕಲ್ಯಾಣಮ್ಮನ ಕಾಯಕ ಪ್ರೀತಿ

ಪ್ರೊ.ಶೋಭಾದೇವಿ ಚೆಕ್ಕಿ ಸೇಡಂ
ನಿವೃತ್ತ ಉಪನ್ಯಾಸಕಿ
ಶುಕ್ರವಾರ, ಸೆಪ್ಟೆಂಬರ್ 18, 20262 ನಿಮಿಷ ಓದು3 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಕಲ್ಯಾಣಮ್ಮ ತನ್ನ ಎಪ್ಪತ್ತೈದರ ಇಳಿ ವಯಸ್ಸಿನಲ್ಲೂ ಸುಮ್ಮನೆ ಕುಳಿತವಳಲ್ಲ. ಸದಾ ಕಾಯಕ ನಿರತೆ. ಅವಳು ಮೇದಾರ ಕುಟುಂಬಕ್ಕೆ ಸೇರಿದವಳು. ಹಣೆಯ ಮೇಲೆ ಢಾಳಾಗಿ ಮೂರು ಬಟ್ಟು ವಿಭೂತಿಯನ್ನು, ಅಗಲವಾದ ಕುಂಕುಮವನ್ನು ಧರಿಸಿ ಅಣ್ಣ ಬಸವಣ್ಣನವರನ್ನು ಮನ:ಪೂರ್ವಕವಾಗಿ ನೆನೆದು ಶರಣು ಸಮರ್ಪಿಸುವಳು. ಮೇದಾರ ಕೇತಯ್ಯ ಮೇದಾರ ಸಾತವ್ವೆ ಶರಣ ದಂಪತಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾಯಕದಲ್ಲಿ ನಿರತಳಾಗುವಳು. ಬಿದಿರಿನ ನಾನಾ ತರಹದ ಬುಟ್ಟಿಗಳನ್ನು, ಬೆತ್ತಗಳನ್ನು, ಹೂದಾನಿಗಳನ್ನು ತಯಾರಿಸಿ ಮಾರಾಟ ಮಾಡುವಳು. ರಸ್ತೆ ಬದಿಯ ತನ್ನ ಮನೆಯ ಮುಂಭಾಗದಲ್ಲಿ ಕುಳಿತು ಬುಟ್ಟಿ ಹೆಣೆಯುವುದು, ದಾರಿಹೋಕರನ್ನು ಆಕರ್ಶಿಸದೆ ಬಿಡದು. ಆಕೆಯ ಕೈಚಳಕ ಚಾಕಚಕ್ಯತೆಯನ್ನು ಕಂಡು ಗ್ರಾಹಕರು ಚಕಿತರಾಗಿಬಿಡುವರು. ತಾಸಬುಟ್ಟಿ, ರೊಟ್ಟಿಬುಟ್ಟಿ, ಹಣ್ಣಿನಬುಟ್ಟಿ, ತರಕಾರಿ ಬುಟ್ಟಿ ಗಳನ್ನು ಖರೀದಿಸಲು ಜನರು ನಾ ಮುಂದು ತಾ ಮುಂದು ಎಂದು ಮುಗಿಬೀಳುವರು.
ಕಲ್ಯಾಣಮ್ಮನಿಗೆ ಈ ಇಳಿವಯಸ್ಸಿನಲ್ಲಿ ತನ್ನ ಉಪಜೀವನಕ್ಕೆ ಕಾಯಕ ಮಾಡಬೇಕೆಂಬ ಅನಿವಾರ್ಯತೆಯೇನಿಲ್ಲ. ಅವಳ ಪತಿ ಹಾಗೂ ಇಬ್ಬರು ಗಂಡು ಮಕ್ಕಳು ವ್ಯಾಪಾರ ವ್ಯವಹಾರದಿಂದ ಸಾಕಷ್ಟು ಹಣ ಗಳಿಸಿದ್ದಾರೆ. ಸ್ವಂತ ಮನೆಯನ್ನೂ ಕಟ್ಟಿ ಕೊಂಡಿದ್ದಾರೆ. ಒಂದಷ್ಟು ಬಾಡಿಗೆ ಹಣವೂ ಬರುತ್ತದೆ. ಆದರೆ ಕಲ್ಯಾಣಮ್ಮನಿಗೆ ಕುಳಿತು ಉಣ್ಣುವುದು ಸುತಾರಾಂ ಇಷ್ಟವಿಲ್ಲ. ಕಾಯಕ ಮಾಡುವ ಮನಸ್ಸು ಸದಾ ಜಾಗೃತವಾಗಿದೆ. ದೇಹದಲ್ಲಿ ಶಕ್ತಿ ಇರುವವರೆಗೂ ದುಡಿದು ಉಣ್ಣಬೇಕು. ಮತ್ತು ತನ್ನಿಂದಾದಷ್ಟು ದಾಸೋಹ ಮಾಡಬೇಕು ಎನ್ನುವುದು ಕಲ್ಯಾಣಮ್ಮನ ಮಹದಾಸೆ. ತಾನು ತಯಾರಿಸಿದ ಬಿದಿರಿನ ವಸ್ತುಗಳನ್ನು ಗ್ರಾಹಕರ ಜೊತೆಗೆ ಚೌಕಾಶಿಗಿಳಿಯದೆ ಅವರು ಕೇಳಿದ್ದಷ್ಟಕ್ಕೆ ಕೊಟ್ಟು ಬಿಡುವಳು. ಬಡ ಗಿರಾಕಿಗಳಿಗೆ ಕೆಲವೊಮ್ಮೆ ಉಚಿತವಾಗಿಯೂ ಕೊಟ್ಟು ಬಿಡುವಳು. ಜಾನಪದ ಕಲಾವಿದರನ್ನು ಕಂಡರೆ ಕಲ್ಯಾಣಮ್ಮನಿಗೆ ಅಗಾಧವಾದ ಪ್ರೀತಿ ಮತ್ತು ಗೌರವ. ದಾರಿಗುಂಟ ಹೋಗುವ ಕಲಾವಿದರನ್ನು ಕರೆದು ಟುಂಟುಣಿ ನುಡಿಸಿ ಅವರ ಕಲಾ ಪ್ರದರ್ಶನಗಕ್ಕೆ ಅವಕಾಶ ನೀಡಿ ಭಕ್ಷೀಸನ್ನು ಕೊಟ್ಟು ಕಳಿಸುವಳು. ಉದಾರ ಹೃದಯಿಯಾದ ಕಲ್ಯಾಣಮ್ಮ ಬಡ ಹೆಣ್ಣು ಮಕ್ಕಳ ಓದಿಗಾಗಿ, ಅವರ ಮದುವೆಗಾಗಿ ಸಹಾಯ ಹಸ್ತವನ್ನು ಚಾಚುವಳು. ಕಂಡ ಭಕ್ತರಿಗೆ ಕೈ ಮುಗಿವಾತನೆ ಭಕ್ತ, ಮೃದುವಚನವೇ ಸಕಲ ಜಪಂಗಳಯ್ಯ, ಮೃದು ವಚನವೇ ಸಕಲ ತಪಂಗಳಯ್ಯ , ಮೃದುವಚನವೇ ಸದಾ ಶಿವನ ಒಲುಮೆಯಯ್ಯ, ಕೂಡಲ ಸಂಗಯ್ಯನAತಲ್ಲದೊಲ್ಲನಯ್ಯ ಎಂಬ ಜಗಜ್ಯೋತಿ ಬಸವಣ್ಣನವರ ವಚನದಂತೆ ಮೃದುವಾದ ಮಾತುಗಳಿಂದ ಗ್ರಾಹಕರನ್ನು ತನ್ನೆಡೆಗೆ ಸೆಳೆದುಬಿಡುವಳು.
ಯಾವ ಕೆಲಸವೂ ಮೇಲಲ್ಲ ಯಾವ ಕೆಲಸವೂ ಕೀಳಲ್ಲ. ಕಾಯಕ ಪ್ರಾಮಾಣಿಕತೆಯಿಂದ ಕೂಡಿರಬೇಕು. ಧನದಾಸೆಯಿಂದ ಯಾರಿಗೂ ಮೋಸ ಮಾಡಬಾರದು ಎಂಬುದು ಕಲ್ಯಾಣಮ್ಮನ ಅಭಿಮತ. ಕಾಯಕವೇ ಕೈಲಾಸ ಎಂಬ ತತ್ವವನ್ನರಿತ ಕಲ್ಯಾಣಮ್ಮ ಬಿದಿರಿನ ಕಾಯಕದಲ್ಲಿ ನೆಮ್ಮದಿಯನ್ನು ಕಂಡುಕೊAಡಿದ್ದಾಳೆ. ಇಂದಿನ ಅದೆಷ್ಟೋ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರೇರಣಾದಾಯಿಯಾಗಿದ್ದಾಳೆ. ಹೆಣ್ಣು ಮಕ್ಕಳು ವಿದ್ಯಾವಂತರು, ಆರ್ಥಿಕವಾಗಿ ಸಬಲರೂ ಆಗಬೇಕು. ಕುಟುಂಬಕ್ಕೂ ಸಮಾಜಕ್ಕೂ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂಬುದು ಕಲ್ಯಾಣಮ್ಮನ ಸ್ಪಷ್ಟ ನಿಲುವು. ತನ್ನ ಮಗಳು ಸಾವಿತ್ರಿಯನ್ನು ಮದುವೆ ಮಾಡಿ ಕೊಟ್ಟ ಮೇಲೂ ಅವಳಿಗೊಂದು ಪ್ರೊವಿಜನಲ್ ಸ್ಟೋರ್ ಹಾಕಿ ಕೊಟ್ಟು ಆರ್ಥಿಕ ಸಬಲತೆಗಾಗಿ ದಾರಿಮಾಡಿಕೊಟ್ಟಿದ್ದಾಳೆ.
ಅಂದಹಾಗೆ ಕಲ್ಯಾಣಮ್ಮ ಓದು ಬರಹ ಬಲ್ಲವಳಲ್ಲ. ಆದರೆ ಅವಳ ವಿವೇಕ ದೊಡ್ಡದು. ದುಡಿದು ಉಣ್ಣುವ ಜಾಯಮಾನ ಅವಳದು. ಕಾಯಕದಿಂದ ಹಣ ಗಳಿಸಿ ಸ್ವಾಭಿಮಾನದ ಬದುಕನ್ನು ನಡೆಸಿ ಇತರರಿಗೆ ಆದರ್ಶವಾಗಿದ್ದಾಳೆ. ಕಲ್ಯಾಣಮ್ಮನಂತಹ ಕಾಯಕ ಜೀವಿಗಳು ಹೆಚ್ಚಾದರೆ ಸಮಾಜದಲ್ಲಿ ಬಡತನ ನಿರುದ್ಯೋಗ ಸಮಸ್ಯೆಗಳು ಕಣ್ಮರೆಯಾಗುತ್ತವೆ. ಎಲ್ಲೆಡೆ ಸುಖ ಶಾಂತಿ ನೆಮ್ಮದಿ ನೆಲೆಯೂರುತ್ತದೆ.
-
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads