Sedam
ಜಂಟಲ್ಮ್ಯಾನ್ ಅನಂತ್ನಾಗ್

ಪ್ರಭಾಕರ ಜೋಶಿ
ಮಾಜಿ ನಿರ್ದೇಶಕ, ರಂಗಾಯಣ ಕಲಬುರಗಿ
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು11 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
೧೯೮೨ ರ ಏಪ್ರಿಲ್ ತಿಂಗಳ ಮೊದಲವಾರ. ಅದೇ ಆಗ ಪಿಯುಸಿ ಎರಡನೇ ವರ್ಷದ ವಾರ್ಷಿಕ ಪರೀಕ್ಷೆ ಮುಗಿಸಿ ಶಂಕರನಾಗ್ ಅವರನ್ನು ಭೇಟಿಯಾಗಬೇಕು ಎಂದು ಬೆಂಗಳೂರಿಗೆ ಹೋಗಿದ್ದೆ.
ಹೋದ ಕೂಡಲೇ ಭೇಟಿಯಾಗಲು ಶಂಕರನಾಗ್ ಅವರೇನು ನನ್ನ ಸೋದರ ಮಾವನೇ?
ಅನಂತನಾಗ್ ಅವರಿಗಿಂತಲೂ ಪ್ರಖ್ಯಾತನಾದ ನಟ. ಗಾಂಧಿಬಜಾರಿನ ಕ್ರಾಸ್ ಒಂದರ ಮಹಡಿಯಲ್ಲಿ "ಸಂಕೇತ" ಎಂಬ ಬೋರ್ಡ್ ನೇತು ಹಾಕಿದ್ದರು. ಅದನ್ನು ನೋಡುತ್ತಾ ನಿಂತ ನನ್ನ ಹಿಂದೆ ಕಾರೊಂದು ಬಂದು ಹಾರ್ನ್ ಮಾಡಿತು. ನಾನು ಪಕ್ಕಕ್ಕೆ ಸರಿದು ನಿಂತೆ. ಕಾರಿಂದ ಇಳಿದು ಬಂದ ನಟ ಅನಂತನಾಗ್ ಕೈಯಲ್ಲೊಂದು ಸುತ್ತಿದ ಕಾಗದದ ಸುರುಳಿ ಮತ್ತೊಂದು ಬ್ರಿಫ್ ಕೇಸ್ ಹಿಡಿದು ಮಹಡಿಯ ಮೆಟ್ಟಿಲುಗಳನ್ನು ಏರತೊಡಗಿದರು. ಕಡುನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಆಕಾಶನೀಲಿ ಬಣ್ಣದ ಕಾಲರ್ ಇಲ್ಲದ ಟಿ.ಶರ್ಟ್, ಕೊಲ್ಹಾಪುರಿ ಚಪ್ಪಲಿ ಧರಿಸಿದ ಅನಂತನಾಗ ಅವರನ್ನೇ ಹಿಂಬಾಲಿಸುತ್ತಾ ನಾನೂ ಮೆಟ್ಟಲೇರಿದೆ.
ಬಾಗಿಲಬಳಿ ನಿಂತವರೇ, ಏನಾಗಬೇಕಿತ್ತು ? ಎಂದು ಕೇಳಿದರು.
"ನಾನು ಕಥೆ ಬರೆದೀನಿ. ಅದನ್ನು ಕೊಡಲು ಬಂದೀನಿ" ಅಂದೆ.
ಹಾಗೆಲ್ಲಾ ನಾವು ಕಥೆ ತೊಗೊಳ್ಳಲ್ಲ' ಎಂದವರೇ ಕಚೇರಿಯೊಳಗೆ ಹೋದರು.
ಅನಂತನಾಗ್ ಜತೆ ಮಾತಾಡಿದೆ ಎಂಬ ಸಂಭ್ರಮವೊAದೇ ಸಾಕು ಎಂದು ಖುಷಿಪಟ್ಟು ವಾಪಸ್ ಬಂದೆ. ನನ್ನ ತಾರುಣ್ಯದಲ್ಲಿ ಮೊಟ್ಟಮೊದಲ ಬಾರಿಗೆ ಶಂಕರನಾಗ ಹುಡುಕುತ್ತಾ ಹೋದವನಿಗೆ ಅನಂತನಾಗ ಸಿಕ್ಕಿದ್ದು ಹೀಗೆ.
ಬೆಂಗಳೂರಲ್ಲಿದ್ದಷ್ಟು ದಿನಗಳು ಗಾಂಧಿನಗರದ ಅವರ ಕಚೇರಿ ಸುತ್ತಮುತ್ತಲೇ ಓಡಾಡುತ್ತಿದ್ದೆ. ಶಂಕರನಾಗ್ ಅವರೂ ಹೀಗೆಯೇ ಸಿಗಬಹುದು ಎಂಬ ನಿರೀಕ್ಷೆ ಪ್ರಬಲವಾಗಿತ್ತು. ಆಗ ಕಣ್ಣಿಗೆ ಬಿತ್ತು ಆ ಪೋಸ್ಟರ್. ಅದೇ ಗಾಂಧಿನಗರದ ಮೂಲೆಯೊಂದರ ಗೋಡೆಗೆ ಒಂದು ಪೋಸ್ಟರ್ ಅಂಟಿಸಿತ್ತು. ಸಂಕೇತ್ ಅರ್ಪಿಸುವ ' ಬ್ಯಾರಿಸ್ಟರ್' ನಾಟಕ ಪ್ರದರ್ಶನ. ಮುಖ್ಯಭೂಮಿಕೆಯಲ್ಲಿ ಅನಂತ್ ನಾಗ್ ಇದ್ದಾರೆ ಅಂತ ಬರೆದಿತ್ತು. ರವೀಂದ್ರ ಕಲಾಕ್ಷೇತ್ರ ಹುಡುಕುತ್ತಾ ಹೋದೆ. ಮೊಟ್ಟಮೊದಲ ಬಾರಿಗೆ ಅಲ್ಲಿ ಕಂಡರು ನನ್ನ ಗುರು ಶಂಕರನಾಗ್ !
ಅವರು, ಆ ನಾಟಕದ ನಿರ್ಮಾಪಕ ನಿರ್ದೇಶಕರಾಗಿದ್ದರು.
ಅವರನ್ನು ನೋಡುತ್ತಿದ್ದಂತೆಯೇ ಕಣ್ಣಲ್ಲಿ ಮಿಂಚು, ನಗುತುಂಬಿದ ತುಟಿಯಂಚು. ಶಂಕರನಾಗ್ ನನ್ನ ಪರಮಫೇವರಿಟ್ ನಟ. ಅವರ ಹೇರ್ ಸ್ಟೈಲ್ ಫಾಲೋ ಮಾಡಿದ್ದೆ. ಅವರು ಮೈಕೈ ತುಂಬಿಕೊಂಡಿದ್ದವರು. ನಾನು ನರಪೇತಲ ! ನಾಟಕದಲ್ಲಿ ಅನಂತನಾಗ್ ಇದ್ದಾರೆ ಅಂದರೆ ಅದೆಂಥದೇ ಆಗಲಿ ಅಗ್ಲೀ ನೋಡಬೇಕೆಂದು ಹಾತೊರೆದೆ.
ಆ ನಾಟಕದಲ್ಲಿ ಕಪ್ಪುಗೌನು ಧರಿಸಿದ ವಕೀಲರ ಪಾತ್ರವನ್ನು ಅನಂತನಾಗ್ ಮಾಡಿದ್ದರು. ಅದಿಷ್ಟು ಬಿಟ್ಟರೆ ಉಳಿದುದ್ದೇನೂ ನೆನಪಿಲ್ಲ.ಆ ಮೇಲೆ ಅನಂತನಾಗ್ ನಟನೆಯ, ಶಂಕರನಾಗ್ ನಿರ್ದೇಶನದ ಮಿಂಚಿನ ಓಟ, ಆಕ್ಸಿಡೆಂಟ್ ಮೊದಲಾದ ಸಿನಿಮಾಗಳನ್ನು ನೋಡುತ್ತಾ ಬಂದೆ. ಅನಂತನಾಗ್ ಎಷ್ಟೇ ಸ್ಫುರದ್ರೂಪಿ, ಅತ್ಯುತ್ತಮ ನಟನಾದರೂ ನನ್ನ ಫೆವರೇಟ್ ಅಂದರೆ, ಶಂಕರನಾಗ್ ಅವರೇ ಆಗಿದ್ದರು. ಆದರೂ ನಟನೆಯಲ್ಲಿ ಶಂಕರನಾಗ್ ಅವರಿಗಿಂತಲೂ ಗ್ರೇಟ್. ಹೋಲಿಕೆ ಸಲ್ಲದು. ಇಬ್ಬರೂ ಭಿನ್ನಸ್ವಭಾವದವರು. ಬೆಳದಿಂಗಳ ಬಾಲೆ ಕಾಲದ ಯುವಕರಾದ ನನ್ನಂಥವರಿಗೂ, ಮುಂಗಾರುಮಳೆ, ಗಾಳಿಪಟ ಸಮಯದ ಮಿಲೆನಿಯಲ್ ಕಿಡ್ಸ್ಗೂ, ಕೆಜಿಎಫ್ ಕಾಲದ ಜೆನ್ ಜೀ ಕಿಡ್ಸ್ಗೂ ಫೇವರಿಟ್ ಆಗಿ ಉಳಿದಿರುವ, ಔಟ್ ಡೇಟೆಡ್ ಆಗದೇ ನಿಂತಿರುವ ನಟ ಅಂದರೆ ಅದು ಅನಂತನಾಗ್.
ಅವರ ಅಭಿಮಾನಿಗಳಲ್ಲಿ ಗಂಡಸರಿಗಿಂತಲೂ ಹೆಣ್ಣುಮಕ್ಕಳೇ ಅಧಿಕವಾಗಿದ್ದಾರೆ. ಬಯಲುದಾರಿ, ಬೆಂಕಿಯ ಬಲೆ, ಮುದುಡಿದ ತಾವರೆ ಅರಳಿತು, ಇಬ್ಬನಿ ಕರಗಿತು, ಅರುಣರಾಗ.. ಈ ಸಮಯದಿಂದ ಹುಟ್ಟಿಕೊಂಡ ಕ್ರಶ್ ಅದು. ಬಾಲಿವುಡ್ನಲ್ಲಿ ಅಮಿತಾಭ್ ಹೇಗೆ ಫಿಟ್ ಅಂಡ್ ಫೈನ್ ವೃದ್ಧರಾಗಿದ್ದಾರೋ, ನಮ್ಮ ಅನಂತನಾಗ್ ಅಷ್ಟೇ ಚೆಂದದ ಸಾಲ್ಟ್ ಎಂಡ್ ಪೆಪ್ಪರ್ ತಲೆಗೂದಲು, ಗಡ್ಡ-ಮೀಸೆಯ ಚೆಂದದ ಓಲ್ಡ್ ಮ್ಯಾನ್.. ಅಲ್ಲಲ್ಲ ಯಂಗ್ಮ್ಯಾನ್ ಆಗಿದ್ದಾರೆ. ಕುರ್ತಾ ಹಾಕಿದ್ರೂ ಚೆಂದ, ಸೂಟ್ ಹಾಕಿದ್ರೂ ಚೆಂದ, ಸೀದಾಸಾದಾ ಫಾರ್ಮಲ್ ಶರ್ಟ್ ಪ್ಯಾಂಟ್ ಹಾಕಿ ಇನ್ ಶರ್ಟ್ ಮಾಡಿದ್ರೂ ಚೆಂದ. ಇಂದಿಗೂ ಆ ದೊಡ್ಡ ಕಣ್ಣುಗಳು ಸಾವಿರ ಮಾತನಾಡುತ್ತವೆ. ಹಣೆಮೇಲೆ ಜಾರುವ ಕೂದಲ ರಾಶಿ ಮಾತಾಡುತ್ತದೆ. ನಟನೆ ಮಾಡಿದ್ದೇ ಗೊತ್ತಾಗದಂತೆ ನಟಿಸಿಬಿಡುವ, ಅಷ್ಟು ಸುಲಭಕ್ಕೆ ಯಾರಿಂದಲೂ ಅನುಕರಿಸಲಾಗದ ಶೈಲಿ ಹೊಂದಿರುವ ಅನಂತ್ಗೆ ಅನಂತ್ರೇ ಸಾಟಿ.
ಕನ್ನಡಿಗರ ಹರಕೆಯ ಫಲ ಎಂಬಂತೆ ಅವರಿಗೆ ಪದ್ಮಭೂಷಣ ಘೋಷಣೆಯಾದಾಗ ಸಂತೋಷಪಟ್ಟ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಈಗ ಭಾರತೀಯ ಚಲನಚಿತ್ರ ರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ದಾದಾಸಾಹೇಬ ಪ್ರಶಸ್ತಿ ಲಭಿಸಿದೆ.
ಈ ಸಂತಸದಲ್ಲಿ ಅವರ ಚಿತ್ರಗಳ ಬಗ್ಗೆ, ಅವರ ಸಿನಿಜರ್ನಿಯ ಬಗ್ಗೆ ಹಲವಾರು ನೆನಪುಗಳು ಹರಿದಾಡಿದವು. ಅವರ ನಟನೆಯ ಅತ್ಯುತ್ತಮ ದೃಶ್ಯಗಳೆಲ್ಲವೂ ಕಣ್ಮುಂದೆ ಬಂದು ಹೋದವು. ಬೆಳದಿಂಗಳ ಬಾಲೆ, ಉಂಡೂಹೋದ ಕೊಂಡೂ ಹೋದ, ಹೆಂಡ್ತಿಗೇಳ್ಬೇಡಿ, ಉದ್ಭವ, ಗಣೇಶನ ಸರಣಿ ಚಿತ್ರಗಳು, ಹೆಸರಿಸುತ್ತಾ ಹೋದರೆ ಮುಗಿಯದ ಪಟ್ಟಿ. ಸೀರಿಯಸ್ ಪಾತ್ರಗಳಿಂದ ಸಾಂಸಾರಿಕ ಪಾತ್ರಗಳಿಗೆ ಹೊರಳಿ, ಅಲ್ಲಿಂದ ಹಾಸ್ಯಪಾತ್ರಗಳಿಗೆ ಜಿಗಿದು, ನೋಡನೋಡುತ್ತಿದ್ದಂತೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅತ್ಯಂತ ಬೇಡಿಕೆಯ ಪೋಷಕ ನಟನಾಗಿ ಇಂದಿಗೂ ಬೇಡಿಕೆ ಉಳಿಸಿಕೊಂಡು ಸಾಗುತ್ತಿರುವ ಬಗೆ ಅಚ್ಚರಿ ಹುಟ್ಟಿಸುತ್ತದೆ.
ಅನಂತನಾಗ್ ನಟಿಸಿರುವ ಚಿತ್ರಗಳು, ನಿರ್ವಹಿಸಿದ ಪಾತ್ರಗಳು, ನಿಜಜೀವನದಲ್ಲಿ ಕಟ್ಟಿಕೊಂಡು ಬಂದ ವ್ಯಕ್ತಿತ್ವ ಅವರ ಅಭಿಮಾನಿಗಳನ್ನೂ ಅದೇ ರೀತಿ ಸ್ಥಿಮಿತದಲ್ಲಿ ಇಡುವಲ್ಲಿ ಯಶಸ್ವಿಯಾಗಿದೆ.
ಅನಂತನಾಗ್ ಯಾವ ಸ್ಟಾರ್ಗೂ ಕಮ್ಮಿ ಇಲ್ಲದ ನಟ. ಸ್ಟಾರ್ ನಟರೇ. ಆದರೆ ಅವರು ಸಿನಿಮಾವನ್ನು ಪ್ರೊಫೆಷನ್ ಎಂಬಂತೆ ಪರಿಗಣಿಸಿ, ಪ್ಯಾಶನೇಟ್ ಆಗಿ ನಿರ್ವಹಿಸುತ್ತಾ ಬಂದ ನಟ. ಎಲ್ಲ ಉದ್ಯೋಗಗಳಂತೆ ಇದೂ ಒಂದು ಉದ್ಯೋಗ ಎಂಬಷ್ಟೇ ಸಹಜವಾಗಿ ಮಾಡ್ಕೊಂಡು ಬಂದವ್ರು. ಅಭಿಮಾನಿಗಳನ್ನು ಎಷ್ಟು ಹತ್ತಿರ ಇಡಬೇಕು.. ಎಷ್ಟು ದೂರ ಇಡಬೇಕು ಅನ್ನೋದರ ಸ್ಪಷ್ಟತೆ ಇದ್ದವರು. ಅದ್ಭುತವಾಗಿ ಐವತ್ತು ವರ್ಷಗಳ ಸಿನಿಜರ್ನಿ ಪೂರೈಸಿದರು.
ಸೋಲು ಗೆಲುವುಗಳು ಅವರನ್ನು ಬಾಧಿಸಲಿಲ್ಲ. ಅವರು ಸ್ಪರ್ಧೆಗೆ ಬೀಳಲಿಲ್ಲ. ಭ್ರಮೆಗೆ ಒಳಗಾಗಲಿಲ್ಲ. ಹೀಗಾಗಿ ಅನಂತನಾಗ್ ಅವರಿಗೆ ಹೋಲಿಸುವ ಇನ್ನೊಬ್ಬರು ಸಿಗೋದಿಲ್ಲ. ಅವರ ಅಭಿಮಾನಿಗಳೆಲ್ಲಾ ಕ್ಲಾಸ್.
ಆದ್ದರಿಂದಲೇ ಅನಂತನಾಗ್ ಅವರನ್ನು ಗುರು, ಅಣ್ಣ, ಬಾಸ್ ಇತ್ಯಾದಿ ಇತ್ಯಾದಿ ಬಳಸಿ ಕರೆದದ್ದು ಕಾಣುವುದಿಲ್ಲ. ಎಷ್ಟೇ ಪ್ರೀತಿ ಇದ್ದರೂ ಏಕವಚನ ಬಳಸುವುದಿಲ್ಲ. ಅನಂತನಾಗ್ ಸಿನಿಮಾ ಪ್ರಪಂಚದ ಅತಿಸಭ್ಯ ರಾಯಭಾರಿ. ಅವರ ಅಭಿಮಾನಿಗಳೂ ಸಭ್ಯರು. ಅಪರೂಪದ ಕೆಲವು ವ್ಯಕ್ತಿಗಳ ಜತೆ ನನ್ನದೊಂದು ಫೊಟೋ ಬೇಕು ಅನಿಸುವುದು ಸಹಜ. ಆ ಲಿಸ್ಟಿನಲ್ಲಿ ಅನಂತನಾಗ್ ಒಬ್ಬರು.
ಆ ಘಳಿಗೆ ನನಗೆ ದೊರೆತಿದ್ದು, ನಾನು ಕಲಬುರಗಿ ರಂಗಾಯಣದ ನಿರ್ದೇಶಕನಾಗಿದ್ದಾಗ. ಮೈಸೂರು ರಂಗಾಯಣದ ಬಹುರೂಪಿ ನಾಟಕೋತ್ಸವ ಉದ್ಘಾಟಿಸಲು ಅನಂತನಾಗ್ ಬಂದಿದ್ದರು. ನಾನೂ ಆಹ್ವಾನಿತನಾಗಿದ್ದೆ. ಹೀಗಾಗಿ ಅವರೊಂದಿಗೆ ಮುಕ್ತವಾಗಿ ಮಾತನಾಡುವ ಅವಕಾಶ ಲಭಿಸಿತ್ತು. ಅವರೊಳಗೊಬ್ಬ ತತ್ವಜ್ಞಾನಿ ಇದ್ದಾರೆ ಎಂದು ಅವರೊಂದಿಗೆ ಮಾತನಾಡಿದ ಯಾರಿಗಾದರೂ ಅನಿಸುವುದು ಸಹಜ.
ಅನಂತನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಒಲಿದಿದ್ದಾರೆ.
ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads