📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Kalaburagi ಬ್ರೇಕಿಂಗ್ ನ್ಯೂಸ್

ಬರ ಪರಿಹಾರಕ್ಕಾಗಿ ಸರ್ವ ಪಕ್ಷ ನಿಯೋಗ

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ೫೦೦೦ ಕೋಟಿ ಅನುದಾನ: ಸಿಎಂ

ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಶುಕ್ರವಾರ, ಸೆಪ್ಟೆಂಬರ್ 18, 20262 ನಿಮಿಷ ಓದು9 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಬರ ಪರಿಹಾರಕ್ಕಾಗಿ ಸರ್ವ ಪಕ್ಷ ನಿಯೋಗ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಕಲಬುರಗಿ, ಸೆ.೧೭- ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ವಾರ್ಷಿಕ ೫೦೦೦ ಕೋಟಿ ರೂ. ಅನುದಾನ ಘೋಷಣೆ, ಕೈಗಾರಿಕಾ ಬೆಳವಣಿಗೆ, ಹೊಸ ಉದ್ಯಮಗಳ ಸ್ಥಾಪನೆ, ಪ್ರವಾಸೋದ್ಯಮ ಉತ್ತೇಜನ ಹಾಗೂ ರೈತರ ಆದಾಯ ಹೆಚ್ಚಿಸಲು ಒತ್ತು ನೀಡಲಾಗುವುದು. ಬಡವರಿಗೆ ೫೦,೦೦೦ ನಿವೇಶನ, ಉದ್ಯೋಗ ಸೃಷ್ಟಿಗೆ ರಿಯಾಯಿತಿ ದರದಲ್ಲಿ ಭೂಮಿ, ಕ್ರೀಡಾ ನಗರಿ ಮತ್ತು ಎಐ ಸಿಸಿಟಿವಿ ಅಳವಡಿಕೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ನಗರದ ಐವಾನ್ ಶಾಹಿ ಅತಿಥಿಗೃಹದಲ್ಲಿ ಗುರುವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಗೆ ನಮ್ಮ ಸರ್ಕಾರದಿಂದ ಪ್ರತಿ ವರ್ಷ ೫,೦೦೦ ಕೋಟಿ ರೂ ಅನುದಾನ ನೀಡುತ್ತಿದ್ದೇವೆ. ಈ ಭಾಗದಲ್ಲಿ ಯಾವುದೇ ಸಂಪನ್ಮೂಲ ಕೊರತೆ ಇಲ್ಲ. ಕೈಗಾರಿಕೆ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲು ಗಮನ ಹರಿಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಸ ಹೊಸ ಉದ್ಯಮ ಬರಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದೇವೆ. ರೈತರ ಆದಾಯ ಹೆಚ್ಚಿಸಲು ಪಾರಂಪರಿಕ ಬೆಳೆಗೆ ಒತ್ತು ನೀಡುತ್ತೇವೆ. ಉದ್ಯೋಗ ಸೃಷ್ಟಿಗೆ ರಿಯಾಯಿತಿ ದರದಲ್ಲಿ ಭೂಮಿ ನೀಡುತ್ತಿದ್ದೇವೆ ಎಂದು ಹೇಳಿದರು. ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೆರಿಫೆರಲ್ ರಿಂಗ್ ರಸ್ತೆಗೆ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಭಾಗದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಕಲಬುರಗಿಯಲ್ಲಿ ಸುಸಜ್ಜಿತ ಕ್ರೀಡಾ ನಗರಿ ಸ್ಥಾಪನೆ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ವಸತಿ ರಹಿತ ಬಡವರಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದು, ಈ ಭಾಗದಲ್ಲಿ ಒಟ್ಟು ೫೦ ಸಾವಿರ ನಿವೇಶನಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಧಾರ್ಮಿಕ ಕ್ಷೇತ್ರಗಳಾದ ಗಾಣಗಾಪುರ, ಶ್ರೀ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದೇ ನವಾಜ್, ಬುದ್ಧ ವಿಹಾರ, ಸನ್ನತಿ ಮುಂತಾದ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಕೆಕೆಆರ್‌ಡಿಬಿ ವತಿಯಿಂದ ಅನುದಾನ ನೀಡಲು ಸೂಚಿಸಲಾಗಿದ್ದು, ಬೀದರ್ ಜಿಲ್ಲೆಯ ಬಸವಕಲ್ಯಾಣದ ಅಭಿವೃದ್ಧಿ ಕಾರ್ಯ ಗಳು ಪ್ರಗತಿಯಲ್ಲಿವೆ. ಅಲ್ಲಿ ವಚನ ಮಂಟಪ ಸ್ಥಾಪನೆಗೆ ನಿರ್ಧರಿಸಲಾಗಿದೆ. ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಪ್ರದೇಶ ಹೆಚ್ಚಿಸಲು ಬೃಹತ್ ಮಟ್ಟದಲ್ಲಿ ವೃಕ್ಷ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ್, ಜಗದೇವ್ ಗುತ್ತೇದಾರ್, ಎಂ.ವೈ. ಪಾಟೀಲ್, ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಡಾ. ಕಿರಣ್ ದೇಶಮುಖ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ್ ಮುಂತಾದವರು ಉಪಸ್ಥಿತರಿದ್ದರು. ನನಗೆ ಹೊಡೆಯಲು ಬರ‍್ತೀರಾ..? ಪತ್ರಕರ್ತರ ಪ್ರಶ್ನೆಗಳಿಗೆ ಸಿಎಂ ತಮಾಷೆ ನಗರದ ಐವಾನ್ ಶಾಹಿ ಅತಿಥಿಗೃಹದಲ್ಲಿ ಗುರುವಾರ ಮಧ್ಯಾಹ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿ ಮಾಡುವಾಗ ಪತ್ರಕರ್ತರು ಪ್ರಶ್ನೆ ಕೇಳಲು ನಾ ಮುಂದೆ, ತಾಮುಂದೆ ಎಂದು ಪೈಪೋಟಿ ನಡೆಸಿದಾಗ ಯಾರಿಗೂ ಪ್ರತಿಕ್ರಿಯೆ ನೀಡದೇ ನೀವು ನನಗೆ ಹೊಡೆಯಲು ಬರ‍್ತೀರಾ? ಎಂದು ಹೇಳುವ ಮೂಲಕ ಪತ್ರಕರ್ತರಿಗೆ ತಮಾಷೆ ಮಾಡಿ ಸುದ್ದಿಗೋಷ್ಠಿಯಲ್ಲಿ ನಗೆಯ ಹೊನಲು ಹರಿಸಿದರು. ಮುಖ್ಯಮಂತ್ರಿಗಳಿಗೆ ಪತ್ರಕರ್ತರು ಭೀಮಾ ನದಿಯ ರಾಜ್ಯದ ಹಕ್ಕು ೧೫ ಟಿಎಂಸಿ ನೀರು, ಹೊಸ ಹತ್ತು ಯೋಜನೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಪಡೆಯದೇ ಕೈಗೊಳ್ಳುವ ಕುರಿತು, ಚತುಷ್ಪಥ ರಸ್ತೆ ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದರು. ಒಬ್ಬೊಬ್ಬರಾಗಿ ಪ್ರಶ್ನೆ ಕೇಳಿದರೆ ಹೇಳಬಹುದು. ಎಲ್ಲರೂ ಒಮ್ಮೆಲೆ ಪ್ರಶ್ನೆ ಕೇಳಿದರೆ ಹೇಗೆ? ಎಂದು ಪ್ರತಿಕ್ರಿಯಿಸಲು ಮುಖ್ಯಮಂತ್ರಿಗಳು ಹಿಂದೇಟು ಹಾಕಿದರು. ನಂತರ ಒಬ್ಬೊಬ್ಬರ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ನೀವು ಕೈಯಲ್ಲಿ ಉಳಿ ಹಿಡಿದುಕೊಂಡು ಬಂದಿದ್ದೀರಿ. ನೀವು ನನಗೆ ಹೊಡೆಯಲು ರ‍್ತೀರಿ ಎಂದು ಹೇಳಿದಾಗ ಪತ್ರಕರ್ತರಲ್ಲಿ ನಗೆಯ ಅಲೆ ಉಕ್ಕಿತು. ಬಿಜೆಪಿಗೆ ಬರ ಚರ್ಚೆಗಿಂತ ರಾಜಕೀಯ ಮುಖ್ಯ ಇನ್ನು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ಮುಖ್ಯಮಂತ್ರಿಗಳು, ಬಿಜೆಪಿಯವರಿಗೆ ರಾಜಕೀಯ ಬೇಕು, ಬರದ ಬಗ್ಗೆ ಚರ್ಚೆ ಬೇಡ, ಆದರೂ ಬರದ ವಿಚಾರದ ಬಗ್ಗೆ ಚರ್ಚೆಗೆ ವಿಶೇಷ ಅಧಿವೇಶನ ಕರೆದಿದ್ದೇವೆ. ಕಸ್ತೂರಿ ರಂಗನ್ ವರದಿ, ಬರಗಾಲದ ಬಗ್ಗೆ ಚರ್ಚೆ ಮಾಡುತ್ತೇವೆ. ರೈತರ ಸಾಲಮನ್ನಾ ಮಾಡುವಂತೆ ಬಹಳ ಜನ ಹೇಳುತ್ತಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ ತಿಳಿಸಿದರು. ಅಶೋಕ್ ಅಣ್ಣ, ವಿಜಯೇಂದ್ರ ಅಣ್ಣ ಸೇರಿ ಹಲವರನ್ನು ದೆಹಲಿಗೆ ಕರೆದೊಯ್ಯಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಕೇಳಬೇಕಿದೆ. ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ನಿರ್ಧರಿಸಲಾಗಿದ್ದು, ಎಲ್ಲೆಲ್ಲಿ ಮೋಡಗಳು ಸಿಗುತ್ತೋ ಅಲ್ಲಿ ಈಗಾಗಲೇ ಬಿತ್ತನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು. ಬಿಜೆಪಿಯಿಂದ ಪಿಕ್ ಪ್ಯಾಕೆಟ್ ಯುಪಿಐ ಪಾವತಿ ಮೇಲೆ ತೆರಿಗೆ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ವರ್ತಕರ ಮೇಲೆ ತೆರಿಗೆ ವಿಧಿಸಿದರೆ ಅವರು ಯಾರ ಮೇಲೆ ಹಾಕುತ್ತಾರೆ ಎಂದು ಪ್ರಶ್ನಿಸಿದರು. ನಾವು ಈಗಾಗಲೇ ಟೀಚರ್ ಅವರಿಗೆ ಟಿಆರ್, ಇಂಜನಿಯರ್ ಅವರಿಗೆ ಇಆರ್ ಎಂದು ಕರೆಯಲು ಸೂಚಿಸಲಾಗಿದೆ. ಅದೇ ರೀತಿ ಯುಪಿಯೆ ತೆರಿಗೆ ವಿಷಯದಲ್ಲಿ ಬಿಜೆಪಿಯ ಕೇಂದ್ರ ಸಚಿವರಿಗೆ ಪಿಕ್ ಪ್ಯಾಕೆಟ್‌ರ್ಸ್ ಎನ್ನಬೇಕಾಗಿದೆ. ಎಲ್ಲ ಕೇಂದ್ರ ಸಚಿವರಿಗೆ ಪಿಕ್ ಪಾಕೆಟ್ ವಿಷಯದಲ್ಲಿ ಪಿಹೆಚ್‌ಡಿ ಕೊಡಬೇಕು. ಏಕೆಂದರೆ ಪ್ರತಿನಿತ್ಯ ಇವರು ಪಿಕ್ ಪಾಕೆಟ್ ಮಾಡುತ್ತಿದ್ದಾರೆ. ಇದು ಖಂಡನೀಯ, ನಾವು ಸರ್ಕಾರ ನಿರ್ಧಾರವನ್ನ ಖಂಡಿಸುತ್ತೇವೆ. ಡಿಜಿಟಲ್ ವಹಿವಾಟು ಅಂತ ಹೇಳಿದ್ದರು, ಈಗ ಏಕೆ ಮತ್ತೆ ತೆರಿಗೆ ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads