Specials
ಜನಪದ: ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ
ಜಯ ನುಡಿ

ಜಯಶ್ರೀ ಭ.ಭಂಡಾರಿ. ಬಾದಾಮಿ.
ಲೇಖಕಿ
ಭಾನುವಾರ, ಸೆಪ್ಟೆಂಬರ್ 20, 20262 ನಿಮಿಷ ಓದು2 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಬೆಳಗಾಗೆದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ ಭೂಮಿ ತಾಯಿಯನ್ನ ಎದ್ದೊಂದು ಗಳಿಗೆ ನೆನೆದೇನ"
ಮಣ್ಣಿನಲ್ಲಿ ಹುಟ್ಟಿ ಮಣ್ಣಿನಲ್ಲಿ ಬೆಳೆದು ಜಗತ್ತಿಗೆ ಅಣ್ಣ ನೀಡುವ ಭೂಮಿ ತಾಯಿಗೆ ನಮಸ್ಕರಿಸುವುದೇ ಇದರ ಮೂಲ ಸಾರ. ಹಳ್ಳಿಯ ಜನಪದ ಸಂಸ್ಕೃತಿಯಲ್ಲಿ ಬೆಸೆದುಕೊಂಡಿರುವ ಸಾಂಪ್ರದಾಯಿಕ ಗೀತೆ ಇದು. ಜನಪದರಿಗೆ ಎತ್ತು, ಬಂಡಿ, ಗದ್ದೆ ಹೊಲ ಇವು ಅವರ ಜೀವನದ ಹಾಸು ಹೊಕ್ಕುಗಳಾಗಿದ್ದವು.
ಜನಪದ ಸಾಹಿತ್ಯವೂ ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ-ಗಾದೆ, ಒಗಟು, ಒಡಪು, ಕಥೆ, ಗೀತೆ, ಕಥನಗೀತೆ ಪ್ರಮುಖವಾಗಿವೆ. ಇಡೀ ಜಗತ್ತಿನ ಸಾಹಿತ್ಯದ ಮೂಲವನ್ನೇಲ್ಲ ಜನಪದಸಾಹಿತ್ಯದಲ್ಲಿ ಕಾಣಬಹುದು. ಅದಕ್ಕೆ ಬಿ.ಎಂ. ಶ್ರೀ ಅವರು ಜನಪದಸಾಹಿತ್ಯವನ್ನು 'ಜನವಾಣಿ ಬೇರು; ಕವಿವಾಣಿ ಹೂವು' ಎಂದು ಕರೆದಿದ್ದಾರೆ.
ಜನಪದ ಗೀತೆಗಳು
೧.ಅಚ್ಚ ಕೆಂಪಿನ ಬಳೆ ಪಚ್ಚೆ ಹಸುರಿನ ಬಳೆ
ಎನ್ನ ಹಡೆದವ್ವಗೆ ಬಲು ಆಸೆ/ಭಾಗ್ಯದ
ಬಳೆಗಾರ ಹೋಗಿ ಬಾ ನನ್ನ ತವರೀಗೆ
೨.ಆರುಸೇರಿನ ಸರಗಿ ಅರಗಿಲ್ಲದ ಕಟ್ಟಾಣಿ
ನತ್ತು ಬೇಡಿದರೆ ನಗುವಂಥ/ ರಾಯರನು
ನಿಂತು ಬೇಡೇನಿ ಶಿವನಲ್ಲಿ
೩.ಓಲೆ ಒಳ್ಳೇದು ಒಳಗೆ ಚಿನ್ನವಿಲ್ಲ
ಸೀರೆ ಒಳ್ಳೇದು ಸೆರಗಿಲ್ಲ/ತಾಯಮ್ಮ
ರಾಯರೊಳ್ಳೆವ್ರು ಗುಣವಿಲ್ಲ
೪.ಹೋಗಿ ಬಾರೆ ಹೊನ್ನೋಲೆ ಕಿವಿಯೋಳೆ
ಕೆನ್ನೇಲಿ ಸೂರ್ಯ ಹೊಳೆಯೋಳೆ/ ಸೊಸೆಮುದ್ದು
ತೌರು ಒಳ್ಳೇದೆಂದು ಇರಬೇಡ
೫. ಆಡಿ ಬಾ ನನ್ನ ಕಂದ ಅಂಗಾಲ ತೊಳೆದೆನ, ತೆಂಗಿನ ತಿಳಿ ನೀರು ತಕ್ಕೊಂಡು ಬಂಗಾರದ ಮಾರಿ ತೊಳೆದೇನ.
೬ ಹೆಣ್ಣು ಹಡಿಯಲಿ ಬೇಡ, ಹೆರವರಿಗೆ ಕೊಡಬೇಡ ಹೆಣ್ಣು ಹೋಗುವಾಗ ಅಳಬೇಡ.
ಜನಪದ ವೈದ್ಯ : ಮಕ್ಕಳಿಗೆ ಇಸುಬು ಆಗದಿರಲೆಂದು ತಾಮ್ರದ ಕಡಗಗಳನ್ನು ಕಾಲಿಗೆ ಹಾಕುತ್ತಾರೆ. ಮಕ್ಕಳಲ್ಲಿ ಮಂಗನ ಬಾವು ಕಾಣಿಸಿಕೊಂಡಾಗ ಚಿನ್ನದ ಸ್ಪರ್ಶ ಗ್ರಂಥಿಗಳ ಊತವನ್ನು ಕಡಿಮೆ ಮಾಡುತ್ತದೆ. ಊಟದ ಸಮಯದಲ್ಲಿ ಅತಿ ಸೂಕ್ಷ್ಮವಾದ ಚಿನ್ನದ ತಗಡನ್ನು ಸೇವಿಸುತ್ತಿದ್ದರೆ, ರೋಗ ನಿರೋಧಕ ಶಕ್ತಿ, ಬಾಹ್ಯಬಲ ದ್ವಿಗುಣಗೊಳ್ಳುತ್ತದೆ. ಬೆಳ್ಳಿತಟ್ಟೆಯಲ್ಲಿ ದಿನವೂ ಊಟ ಮಾಡಿದರೆ ಆರೋಗ್ಯ ವೃದ್ದಿಸುತ್ತದೆ. ಸುವರ್ಣ ಭಸ್ಮವನ್ನು ನಿತ್ಯವೂ ಸೇವಿಸಿದೆ,ಅದು ಶರೀರದ ಮುಪ್ಪನ್ನು ತಡೆಯುತ್ತದೆ. ಹೊಟ್ಟೆ ನೋವಿಗೆ ಉಪ್ಪು ನೀರನ್ನು ಕುಡಿಯಬೇಕು. ಜ್ವರಕ್ಕೆ ಜೀರಿಗೆ ಕಷಾಯ ಒಳ್ಳೆಯದು ಭೇದಿಯಾದಾಗ ಮೆಂತ್ಯೆಕಾಳನ್ನು ಮಜ್ಜಿಗೆಯನ್ನಲ್ಲಿ ಅರ್ಧದಿನ ನೆನೆಸಿ ತಿನ್ನಬೇಕು. ತಕ್ಷಣದ ಉಪಶಮನಕ್ಕೆ ಮಜ್ಜಿಗೆ ಅನ್ನ ಒಳ್ಳೆಯದು. ನೆಗಡಿಯಾದಾಗ ಮೆಣಸು-ಬೆಳ್ಳುಳ್ಳಿ ಕಾರದಲ್ಲಿ ಬಿಸಿಬಿಸಿ ಅನ್ನವನ್ನು ತಿನ್ನಬೇಕು, ಚರ್ಮರೋಗದವರು ದಿನವೂ ಬೇವಿನ ಸೊಪ್ಪಿನ ಸ್ನಾನದೊಂದಿಗೆ, ಬೇವಿನ ಎಲೆಗಳನ್ನು ಸೇವಿಸ ಬೇಕು. ಕೆಮ್ಮಿದ್ದವರು ಒಂದು ವಿಳ್ಳೆದೆಲೆ ಒಂದುಕಾಳು ಉಪ್ಪು, ಒಂದು ಲವಂಗದೊAದಿಗೆ ಸೇರಿಸಿಕೊಂಡು ನಿಧಾನಕ್ಕೆ ಆ ಎಲೆಯ ರಸ ಹೀರುತ್ತಾ ಕಡಿದರೆ ಬೇಗನೆ ವಾಸಿಯಾಗುತ್ತದೆ.
ಜೇನುತುಪ್ಪವನ್ನು ಅರ್ಧ ಗಂಟೆ ಮುಖಕ್ಕೆ ಲೇಪಿಸಿಕೊಂಡು ನಂತರ ಮುಖ ತೊಳೆದರೆ ಮುಖದ ಸೌಂದರ್ಯ ವರ್ಧಿಸುತ್ತದೆ. ಪಪ್ಪಾಯಿ,ಕಬ್ಬನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ ಹೊಞೆ್ಟಯಲ್ಲಿರುವ ಜಂತುಹುಳ ನಿರ್ನಾಮವಾಗುತ್ತವೆ. ಬಾಯಿರುಚಿ ಕೆಟ್ಟಾಗ ಉಪ್ಪುಸಾರಿನ ಕಾರವನ್ನು ಮಾಡಿಕೊಂಡು ಊಟ ಮಾಡಿದರೆ ನಾಲಿಗೆ ರುಚಿ ಮೊದಲಿನಂತಾಗುತ್ತದೆ ಸಸ್ಯಹಾರ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಬೆಳ್ಳುಳ್ಳಿ-ಈರುಳ್ಳಿ ಸೇವನೆ ಶರೀರದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗಲಕಾಯಿಯನ್ನು ವಾರಕ್ಕೆ ಒಮ್ಮೆಯಾದರೂ ಊಟದಲ್ಲಿ ಬಳಸಿದರೆ ಮಧುಮೇಹ ಬರಲಾರದು
ಮಳೆಯ ಹಾಡುಗಳು
೧.ಮಾದಯ್ಯ ಬರುವಾಗ ಮಾಳೆಲ್ಲ ಘಮ್ಮೆಂದೊ
ಮಾಳದಲಿ ಗರಿಕೆ ಚಿಗುರ್ಯಾವು /ಮಾದೇವ
ಮೂಡ್ಲಲ್ಲಿ ಮಳೆಯು ಸುರಿದಾವು
೨.ಉತ್ತು ಬಂದಣ್ಣ ಮುತ್ತಿನ್ಕಂಭ ಸೇರಿ
ಉತ್ತು ಬಂದೆ ಶಿವನೆ ಮಳೆಯಿಲ್ಲ /ಎಂದರೆ
ಮುತ್ತೀನ ಮಂಜು ಹರಿದಾವು
೩.ಊರಿಗೆ ಮಳೆ ಹೋದೊ ಏರು ಕಟ್ಟೋ ಕಂದಯ್ಯ
ಊರ ಮುಂದಿನ ಬಸವಣ್ಣೆ /ಕೈ ಮುಗಿದು
ಏರು ಕಟ್ಟೋ ಮುದ್ದು ಮುಖದವನೇ
ಜನಪದ ಗೀತೆಗಳಲ್ಲಿ ಒಡಹುಟ್ಟಿದವರು
೧.ಅಕ್ಕತಂಗೇರ ಬಣ್ಣ ಅವರಿ ಹೂವಿನ ಬಣ್ಣ
ಕುಬುಸದ ಬಣ್ಣ ಕುತನೀಯ/ಹಡೆದಂಥ
ನಾರಿ ನಿನ ಬಣ್ಣ ರವಿಚಿನ್ನ
೨.ಹೆಣ್ಣೀನ ಜನುಮಾಕೆ ಅಣ್ಣತಮ್ಮರು ಬೇಕು
ಬೆನ್ನ ಕಟ್ಟುವರು ಸಭೆಯೊಳಗೆ/ಸಾವಿರ
ಹೊನ್ನ ಕಟ್ಟುವರು ಉಡಿಯೊಳಗ
೩.ಎನಗ ಯಾರಿಲ್ಲಾಂತ ಮನದಾಗ ಮರುಗಿದರ
ಪರನಾಡಲೊಬ್ಬ ಪ್ರತಿಸೂರ್ಯ/ನನ್ನಣ
ಬಿದಿಗೆ ಚಂದ್ರಾಮ ಉದಿಯಾದ.
೪.ಸೊಲ್ಲಾಪುರದಣ್ಣಗ ನಿಲ್ಲದಲೆ ಬರಹೇಳ
ಸೀರ್ಯೊಲ್ಲೆ ಅವನ ಕುಬುಸವಲ್ಲ/ಅಣ್ಣನ
ಮಾರಿ ನೋಡುವ ಮನಸಾಗಿ
೫.ಸರದಾರ ಬರುವಾಗ ಸುರಿದಾವ ಮಲ್ಲೀಗಿ
ದೊರೆ ನನ್ನ ತಮ್ಮ ಬರುವಾಗ /ಯಾಲಕ್ಕಿ
ಗೊನಿ ಬಾಗಿ ಹಾಲ ಸುರಿದಾವ
ಜನಪದ ನಂಬಿಕೆಗಳು: ಓಲೆ ಮುತ್ರೈದೆಯ ಆಸ್ತಿ ಶುಭಕಾರಿ. ನಾಸಿಕಾಭರಣದಿಂದ ಸ್ತ್ರೀಯರಿಗೆ ಶುಭ,ಶ್ರೇಷ್ಠತ್ವ,ಗಂಡನ ಪ್ರೀತಿ ಅನುರಾಗ ಸದಾ ಲಭ್ಯ. ಮಾಂಗಲ್ಯಕ್ಕೆ ಬೆಲೆ ಕೊಟ್ಟವಳು ಗಂಡನಿಗೂ ಮರ್ಯಾದೆ ಕೊಡುತ್ತಾಳೆ. ತಾಳಿ ಸಿಕ್ಕಿದರೆ ತುಂಬಾ ಅದೃಷ್ಟ. ಮದುವೆಗೆ ಮುಂಚೆ ಹೆಣ್ಣು ಮಕ್ಕಳು ಕರಿ ಬಳೆ ತೊಡಬಾರದು. ಮುಖದ ಮೇಲೆ ಮೊಡವೆಗಳಿದ್ದರೆ ಅವುಗಳ ನಿವಾರಣೆಗೆ ಬಲಗೈ ಮಧ್ಯದ ಬೆರಳಲ್ಲಿ ತಾಮ್ರದ ಉಂಗುರ ಧರಿಸಬೇಕು. ಹುಚ್ಚು ಹಿಡಿದವರ ಕೈಗೆ ಮಂತ್ರಿಸಿದ ಕಬ್ಬಿಣದ ಬಳೆಯನ್ನ ಹಾಕುತ್ತಾರೆ. ಉಡುದಾರವನ್ನು ಚಾಕುವಿನಿಂದ ಕೊಯ್ಯಬಾರದು. ಮದುವೆ ಮನೆಯಲ್ಲಿ ಬಾಸಿಂಗ ಮುರಿದರೆ ಅಪಶಕುನ. ಕಿವಿ ಮೂಗನ್ನು ಚುಚ್ಚಿಸುವಾಗ ಕೊಬ್ಬರಿ ಮುರಿಯ ಬೇಕು. ಕರ್ಣಾಭರಣಗಳು ವಾತ-ಪಿತ್ತ, ಶ್ಲೇಷಗಳಿದ ಉಂಟಾಗುವ ದೋಷವನ್ನು ನಾಶ ಮಾಡುತ್ತವೆ. ಮೂಗುತಿಯನ್ನ ತೌರಿನವರೆ ಮಾಡಿಸಿಕೊಡುವುದು ಪದ್ದತಿ. ತಾಳಿ ಸಿಕ್ಕಿದರೆ ತುಂಬಾ ಅದೃಷ್ಟ. ಹೀಗೆ ಪ್ರತಿಯೊಂದುರಲ್ಲಿ ವಿಶಿಷ್ಟತೆಯನ್ನು ಆಚರಿಸಿಕೊಂಡು ಬರುವವರು ಜನಪದ ರಾಗಿದ್ದಾರೆ.
ಜನಪದ ಸಾಹಿತ್ಯವು ಜನಸಾಮಾನ್ಯರಿಂದ ಹುಟ್ಟಿ, ಬಾಯಿಂದ ಬಾಯಿಗೆ ಹರಡಿ, ಸಮುದಾಯದಲ್ಲಿ ಬೆಳೆದು ಬಂದ ಜೀವಂತ ಸಾಹಿತ್ಯವಾಗಿದೆ. ಇದು ಮೌಖಿಕ ಪರಂಪರೆ, ಸಾಮೂಹಿಕ ಸೃಷ್ಟಿ, ಅನಾಮಿಕತೆ ಮತ್ತು ಸ್ವಾಭಾವಿಕ ಜೀವನದ ನೋವು-ನಲಿವುಗಳ ಪ್ರತಿಬಿಂಬವಾಗಿದೆ. ಬೀಸುವಾಗ,ಕುಟ್ಟುವಾಗ ರಾಶಿ ಮಾಡುವಾಗ ಹೀಗೆ ಜನಪದರು ತಮ್ಮ ನೋವು ನಲಿವುಳನ್ನ ಹಾಡಿನ ಮೂಲಕ ಹೇಳುತ್ತಾ ನೋವು ದುಃಖಗಳನ್ನು ಮರೆಯುತ್ತಿದ್ದರು. ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡು ಹೊಸ ರೂಪ ಪಡೆದುಕೊಳ್ಳುವ ಸ್ವಾತಂತ್ರ್ಯ ಇದರಲ್ಲಿದೆ. ಇದು ಸದಾ ಸ್ಪಂದಿಸುವ ಜೀವಂತ ಅನುಭವಗಳಾಗಿದ್ದು, ಬದುಕಿನ ಪ್ರತಿ ಹಂತವನ್ನು ಒಳಗೊಂಡಿದೆ.
ಜೀವನಾನುಭವದ ಪ್ರತಿಬಿಂಬವೇ ಜನಪದ ಸಾಹಿತ್ಯ.ಜನಸಾಮಾನ್ಯರ ಕಷ್ಟ-ಸುಖ, ಸಂಸ್ಕೃತಿ, ನಂಬಿಕೆ ಮತ್ತು ಸಂಪ್ರದಾಯಗಳು ಇದರಲ್ಲಿ ಸರಳವಾಗಿ ಮೂಡಿಬಂದಿರುತ್ತವೆ. ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ (ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಬದ್ರವಾಗಿ ಊಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ. ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿ ಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬAಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯ ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿ ನುಡಿಗಳು ಎನ್ನಬಹುದು.
ಮಾನವ ತನ್ನ ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆಯಿಂದ ನಿಸರ್ಗವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಜ್ಞಾನ ವಿಜ್ಞಾನವನ್ನು ಸಂವರ್ಧನೆ ಮಾಡಿಕೊಂಡು ಸುಖ ಸಂತೋಷವನ್ನು ಅನುಭವಿಸತೊಡಗಿದನು. ಮಾತು-ಕಥೆ, ಹಾಡು-ಪಾಡು, ಕುಣಿತ-ಮೆರೆತ, ಹಬ್ಬ-ಹರಿದಿನ, ಆಟೋಟಗಳು ನಂಬಿಕೆ ಸಂಪ್ರದಾಯಗಳು, ಆಚರಣೆ ಆರಾಧನೆಗಳೆಲ್ಲವನ್ನೂ ಬದುಕಿನೊಂದಿಗೆ ಬೆಸೆದುಕೊಂಡನು. ಬದುಕಿನ ಪ್ರತಿಯೊಂದು ಕ್ರಿಯೆಯೂ ಸಹ್ಯವಾಗುವಂತೆ ತನ್ನನ್ನು ತಾನು ತೊಡಗಿಸಿಕೊಂಡನು. ಅದರ ಫಲವೋ ಎಂಬAತೆ ಮೌಖಿಕ, ವಾಚಿಕ, ಕಂಠಸ್ಥ, ಥೋಡೀ ಸಂಪ್ರದಾಯವು ಎಲ್ಲಿಯೂ ಸ್ಥಗಿತವಾಗದೆ ಪರಂಪರಾಗತವಾಗಿ ಮುಂದುವರೆಯಿತು. ಪುರಾಣ, ಐತಿಹ್ಯ, ಗೀತೆ, ಕಥೆ, ಗಾದೆ, ಒಗಟು, ಲಾವಣಿ, ಭಾಷೆ, ನಂಬಿಕೆ, ವಿಭಿನ್ನ ಆಚರಣೆ, ವೈದ್ಯ, ವ್ಯವಸಾಯ, ಅಡಿಗೆ, ಬೇಟೆ, ಆಟ, ಮಂತ್ರ-ಮಾಟ ಮುಂತಾದ ಕಲೆಗಳು ಸಮೃದ್ಧವಾಗಿ ಬೆಳೆಯುತ್ತಾ, ಅವಿನಾಭಾವವಾಗಿ ಬದುಕಿನೊಂದಿಗೆ ಬೆರೆತು ಪಿತ್ರಾರ್ಜಿತ ಆಸ್ತಿಯಂತೆ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಾ ಬಂದಿತು. ಪರಂಪರಾನುಗತವಾಗಿ ಬಂದ ಆಚಾರ, ವಿಚಾರ, ಪದ್ಧತಿ, ರೂಢಿ, ಉಡುಗೆ ತೊಡುಗೆ, ಆಟ ಪಾಠ, ಹಾಡು ಹಸೆ ಎಲ್ಲವೂ ಜನಪದ. ಈ ಎಲ್ಲವನ್ನೂ ಒಳಗೊಂಡಿದ್ದು ಜಾನಪದ. ಹಾ. ಮಾ. ನಾಯಕರು ಹೇಳುವಂತೆ ಜಾನಪದ ಒಂದು ಚಕ್ರದ ಪರಿಧಿಯಾದರೆ, ಅದರ ಒಳಗಿನ ಪ್ರತಿಯೊಂದು ಪುಟಗಳು ಜನಪದ. ಅಂದರೆ ಜಾನಪದ ಪರಿಧಿಯೊಳಗೆ ಎಲ್ಲಾ ಜನಪದವೂ ಅಡಕವಾಗಿದೆ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads