Literature
ಆಡಿ ಬಾ ನನ ಕಂದ, ಅಂಗಾಲ ತೊಳೆದೇನ

ಜಯಶ್ರೀ ಭ.ಭಂಡಾರಿ. ಬಾದಾಮಿ.
ಲೇಖಕಿ
ಗುರುವಾರ, ಆಗಸ್ಟ್ 13, 20262 ನಿಮಿಷ ಓದು9 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಅಮ್ಮನೆಂದರೆ ನೆಮ್ಮದಿಯ ಆಗರ, ಅಮ್ಮನ ಮಡಿಲೆಂದರೆ ಪರಮಾತ್ಮನಿಗಿಂತ ಮಿಗಿಲು. ಅಮ್ಮಾ ಎಂದರೆ ಮೈ ಮನವೆಲ್ಲ ಹೂವಾಗುವುದಮ್ಮಾ ಎರಡಕ್ಷರದಲಿ ಏನಿದೆಯೋ. ಕಾಣೆ.. ಅಮ್ಮಾ.. ಅಮ್ಮಾ.....
ಈ ಅಮ್ಮ ಬಣ್ಣನೆಗೆ ಸಿಗದವಳು.ಸದಾ ಕಕ್ಕುಲಾತಿಯ ಕರುಳು.ತನ್ನನೆ ಸುಟ್ಟುಕೊಂಡು ನೋವನುಂಗಿ ನಗುವಳು ಜಗವ ನಗಿಸುವಳು.
ತನಗಾಗಿ ಹಠವ ಮಾಡಳು. ಸದಾ ಸಂತೃಪ್ತಿಯನು ತೋರುವಳು. ಇಲ್ಲಗಳ ಸಂತೆಯಲ್ಲಿ ನಿಂತಿದ್ದರೂ ಸಂತಸ ಬೀರುವಳು. ಕೊರತೆಗಳ ಕೊರಗನು ದಾಟಿಕೊಂಡು ಮೇಲೆಳುವಳು. ಸಂಸಾರದ ನೊಗಕೆ ಹಗಲಿರುಳು ಕೊರಳ ನೀಡಿ ದಣಿಯದೆ ಮುನ್ನುಗ್ಗುವಳು.ತನಗಾಗಿ ಬದುಕ ಮರೆತವಳು. ಮಕ್ಕಳ ಹಿತದಲ್ಲಿ ತನ್ನ ಹಿತ ಕಂಡವಳು.ಮಗು ಹೊಟ್ಟೆ ತುಂಬ ಉಂಡರೆ ತನ್ನ ಹಸಿವನ್ನೆ ಮರೆತು ಸಗ್ಗವಾಗುತ್ತಾಳೆ. ತಂದೆಯಾದವನು ಹೊರಗೆ ದುಡಿದು ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡು ಭಾವಿ ಭವಿಷ್ಯತ್ತಿನ ರೂವಾರಿಯಾಗುತ್ತಾನೆ. ತನಗಾಗಿ ಏನನ್ನು ಕೊಳ್ಳದೆ ಎಲ್ಲವನ್ನು ಮಕ್ಕಳಿಗಾಗಿ ಖರೀದಿ ಮಾಡುತ್ತಾನೆ. ತನ್ನ ಹೆಗಲ ಮೇಲೆ ಕೂಡಿಸಿಕೊಂಡು ಜಗತ್ತನ್ನೇ ತೋರಿಸುತ್ತಾನೆ. ಅಪ್ಪನೆಂದರೆ ಆಕಾಶ ಅಂತ ಸುಮ್ಮನೆ ಹೇಳಿಲ್ಲ. ತಾಯಿ ಮಗುವಿನ ಹೊಟ್ಟೆ ನೆತ್ತಿ ನೋಡಿ ಮಮತೆಯಿಂದ ಬೆಳೆಸುತ್ತಾಳೆ ತಂದೆಯಾದವನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಒಬ್ಬ ಜವಾಬ್ದಾರಿಯುತ ಮನುಷ್ಯನನ್ನಾಗಿ ಮಾಡುತ್ತಾನೆ. ಬಡತನವೇನಿದ್ದರೂ ನಮ್ಮ ಪಾಲಿಗೆ ಇರಲಿ ನಮ್ಮ ಮಕ್ಕಳು ಬಡತನ ಸೋಕದಂತೆ ಬೆಳೆಯಲಿ ಎಂದು ತಮ್ಮ ನೋವು ದುಃಖಗಳನ್ನ ಹಿಂದಕ್ಕೆ ಇರಿಸಿ ಅವರನ್ನು ಚೆನ್ನಾಗಿ ಬೆಳೆಸುತ್ತಾರೆ. ಅವರಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಹೆಣಗುತ್ತಾರೆ. ಮಕ್ಕಳಿಗೆ ಸಾಕ್ಸ್ ಶೂ ಯುನಿಫಾರ್ಮ್ ಸ್ಕೂಲ್ ಬ್ಯಾಗ್ ಏನೆಲ್ಲಾ ಕೊಡಿಸುತ್ತಾನೆ ತಾನು ಮಾತ್ರ ಹವಾಯಿ ಚಪ್ಪಲಿ ಧರಿಸಿ ಸಾದಾ ಸೀದಾ ಬಟ್ಟೆ ಹಾಕುತ್ತಾನೆ. ತಾವು ಕಡಿಮೆ ಉಂಡರು ಚಿಂತೆ ಇಲ್ಲ ಮಕ್ಕಳು ಮಾತ್ರ ಹೊಟ್ಟೆ ತುಂಬಾ ಉಣ್ಣಬೇಕು ಹಾಗೂ ಅವರು ಕೇಳಿದ್ದನ್ನೆಲ್ಲ ತಂದುಕೊಟ್ಟು ಸಂತೃಪ್ತಿ ಪಡುತ್ತಾರೆ. ಇಷ್ಟೆಲ್ಲ ಮಾಡಿದಾಗ್ಲೂ ಕೂಡ ಬೆಳೆದು ದೊಡ್ಡವರಾದ ಮಕ್ಕಳು ತಂದೆ ತಾಯಿಗಳ ಮುಸ್ಸಂಜೆಯಲ್ಲಿ ಅವರನ್ನು ಯಾಕೆ ನೋಡಿಕೊಳ್ಳುವುದಿಲ್ಲ ಎಂಬುದೇ ಯಕ್ಷಪ್ರಶ್ನೆ.
"ಮಕ್ಕಳ ಕೊಡು ಶಿವನೇ ಮತ್ತೊಂದು ನಾವಲ್ಲೆ.,
ಹತ್ತು ಮಂದ್ಯಾಗ ಹರಿ ನೀರ ತರುವಂತ
ಮುತ್ತೈದೆತನ ಕೊಡು ಶಿವನೇ."..
"ಆಡಿ ಬಾ ನನ್ನ ಕಂದ ಅಂಗಾಲ ತೊಳೆದೆನ
ತೆಂಗಿನ ತಿಳಿ ನೀರ ತಕ್ಕೊಂಡು
ಬಂಗಾರದ ಮಾರಿ ತೊಳೆದೆನ."..
ಜಾನಪದ ತಾಯಿ ಕೋರುತ್ತಾಳೆ. ಈ ತಾಯಿಗೆ ಮಕ್ಕಳೆಂದರೆ ಅದೆಷ್ಟು ಪ್ರೀತಿ. ತನ್ನ ರಕ್ತ ಹಂಚಿಕೊAಡು ಹುಟ್ಟಿದ ಮಗುವಿಗೆ ಕೊಂಚ ಕೂಡ ಕಷ್ಟ ತಾಗದಂತೆ ಬೆಳೆಸುತ್ತಾಳೆ.
ಏನಿವಳ ಮಹಿಮೆ?.....ಯಾರು ತುಂಬಿದರು ಈ ಬಣ್ಣನೆಗೆ ಸಿಗದ ಗುಣಗಳನು.ತಾಳಿ ಕಟ್ಟಿಸಿಕೊಂಡು ತಾಳ್ಮೆಯಿಂದ ಗಂಡನ ಹೆಗಲೇಣಿಯಾಗಿ ಬದುಕಿನುದ್ದಕ್ಕೂ ಉತ್ಸಾಹದ ಒರತೆಯಾಗುತ್ತಾಳೆ. ಇಡೀ ಸಂಸಾರಕ್ಕೆ ಕಿಂಚಿತ್ ನೋವಬಾರದಂತೆ ಸಲಹುತ್ತಾಳೆ. ಬಳ್ಳಿಗೆ ಕಾಯಿ ಭಾರವೆ ಎಂಬAತೆ ಎಲ್ಲ ಮಕ್ಕಳನ್ನು ಸಮನಾಗಿ ಪೋಷಿಸುತ್ತಾಳೆ.ಹತ್ತು ಮಕ್ಕಳಿದ್ದರೂ ಸೈ. ಆದರೆ ದುರದೃಷ್ಟವೆಂದರೆ ಹತ್ತು ಮಕ್ಕಳಿದ್ದರೂ ಒಬ್ಬ ತಾಯಿಯನ್ನ ನೋಡಿಕೊಳ್ಳಲಾಗುತ್ತಿಲ್ಲ. ಸಾಹಸಕೆ, ಧೈರ್ಯಕೆ ತನ್ನನೆ ಒಡ್ಡಿಕೊಳ್ಳುತ್ತಾಳೆ. ಬಂದದ್ದೆಲ್ಲ ಬರಲಿ ದೇವನ ಒಲುಮೆ ಇರಲಿ ಎಂದು ಸದಾ ದೇವರಲಿ ಕೋರುತ್ತಾಳೆಯೆ ವಿನಃ ಕೊರಗಲಾರಳು.
ಜಗತ್ತನ್ನು ಮರೆತು ಇರಬಹುದು ತಾಯಿಯನ್ನು ಮರೆತು ಕ್ಷಣ ಇರಲಾಗದು. ಸೃಷ್ಠಿಯ ಅದಮ್ಯಚೇತನಕೆ ಈ ತಾಯಿ ಇವಳಿಗೆ ಅದಾವ ಹೋಲಿಕೆ ಸಾಟಿ ಹೇಳಿ?
ಒಂದು ಜೀವದ ಸೃಷ್ಠಿಗೆ ತನ್ನ ಜೀವವನ್ನೆ ಪಣವಾಗಿಸುತ್ತಾಳೆ. ಬಸಿರು ಬಾಣಂತನ ಅಂತ ತನ್ನ ದೇಹವನ್ನೆ ದಂಡಿಸುವಲ್ಲಿ ವಿನೂತನ ಸುಖ ಅನುಭವಿಸುತ್ತಾಳೆ. ಮಗುವಿನ ಲಾಲನೆ ಪಾಲನೆಯಲ್ಲಿ ತನ್ನ ತಾ ಮರೆಯುತ್ತಾಳೆ. ಸಂಸಾರದ ಏನೇ ಜಂಜಡವಿದ್ದರೂ ಮಗುವಿಗೆ ತಾಕದಂತೆ ಸೋಕದಂತೆ ಬೆಳೆಸುತ್ತಾಳೆ. ಮಗುವಿನ ಪ್ರತಿಹಂತದ ಬೆಳವಣಿಗೆಯಲ್ಲಿ ಆಸರೆಯಾಗಿ ನಿಲ್ಲುತ್ತಾಳೆ.
ತಾಯಿಯೇ ದೇವರು: ದೇವರು ತಾನು ಎಲ್ಲಕಡೆ ಇರಲಾಗುವುದಿಲ್ಲವೆಂದೆ ಪ್ರತಿಮನೆಗೂ ತಾಯಿಯನ್ನು ಸೃಷ್ಠಿಸಿದನಂತೆ.ಮಾತೃದೇವೋ ಭವ ಎಂಬ ವಾಣಿ ಸದಾ ಎಲ್ಲಕಡೆ ಜನಜನಿತವಾಗಿದೆ.
ಅವಳು ನೋಡಲು ಹೇಗೆ ಇರಲಿ ಮಾಸಿದ ಸೀರೆಯೆ ಇರಲಿ ಗುಣದಲ್ಲಿ ವಾತ್ಸಲ್ಯಮಯಿ. ಅಮ್ಮನೆಂದರೆ ಆನಂದ, ಅಮ್ಮನೆಂದರೆ ಅಂಬರ,ಅಮ್ಮನೆAದರೆ ದಿವ್ಯೌಷಧ, ಅಮ್ಮನೆಂದರೆ ಅಮೃತ, ಅಮ್ಮನೆಂದರೆ ಕಡಲು, ಅಮ್ಮನೆಂದರೆ ನೆಮ್ಮದಿಯ ಆಗರ, ಅಮ್ಮನ ಮಡಿಲೆಂದರೆ ಪರಮಾತ್ಮನಿಗಿಂತ ಮಿಗಿಲು.
ಜಾನಪದದಲ್ಲಿ ಅಮ್ಮನಿಗೆ ಸಾಕಷ್ಟು ತ್ರಿಪದಿ ರೂಪದ ಹಾಡುಗಳಿವೆ.
"ತಾಯಿ ಇಲ್ಲದ ತವರಿಗೆ ಹೋಗದಿರು
ನನ್ನ ಮನವೇ, ನೀರಿಲ್ಲದ ಕೆರೆಗೆ ಕರು ಹೋಗಿ ಬಂದAತೆ ಎಲೆ ಮನವೇ..
"ಹಾಲುಂಡ ತವರಿಗೆ ಏನೆಂದು ಹರಸಲೇ
ಹೊಳೆ ದಂಡೆಲಿರುವ ಕರಕೀಯ ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ."
ಹೀಗೆ ತಾಯಿ ಹಾಗೂ ತವರಿನ ಕುರಿತು ಸಾಕಷ್ಟು ಹಾಡುಗಳು ಸಿಗುತ್ತವೆ. ತನ್ನೆಲ್ಲ ನೋವು, ನಲಿವುಗಳಿಗೆ ಶಬ್ದರೂಪ ನೀಡಿ ಹಾಡಿ ದುಃಖ ಮರೆಯುತ್ತಿದ್ದಳು. ಆಗಿನ ಕಾಲದಲ್ಲೂ ತಾಯಿ ಸುಖವನ್ನು ಪಡೆದವಳೇ ಅಲ್ಲ.ನೋವನ್ನು ಸೆರಗಿನಲ್ಲಿ ಕಟ್ಟಿಕೊಂಡು ಬದುಕಿದವಳು. ಇಂದಿನ ಆಧುನಿಕ ಯುಗದಲ್ಲಿ ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.
ವೃದ್ಧಾಶ್ರಮಗಳು ಹೆಚ್ಚಾಗುತ್ತಲೇ ಸಾಗಿವೆ. ಎಷ್ಟೆಲ್ಲಾ ದುಡಿದು ಶ್ರಮಪಟ್ಟು ಆಸ್ತಿ ಮಾಡಿಟ್ಟು ಮಕ್ಕಳನ್ನು ಓದಿಸಿ ಬೆಳೆಸಿದರೂ ಕೂಡ ವೃದ್ಧಾಪ್ಯದಲ್ಲಿ ಮಕ್ಕಳ ಆಸರೆ ಮೊಮ್ಮಕ್ಕಳ ಆಟ ಪಾಠ ಅವರಿಗೆ ಸಿಗುತ್ತಿಲ್ಲ. ಎಷ್ಟೋ ಮಕ್ಕಳು ವಿದೇಶಗಳಲ್ಲಿ ನೆಲೆಸಿ ತಮ್ಮ ಹೆತ್ತವರನ್ನು ಮರೆತು ಬಿಡುತ್ತಾರೆ ಅವರ ಕೊನೆಗಾಲದಲ್ಲಿಯೂ ಕೂಡ ಬರಲಾಗದ ದುಸ್ಥಿತಿ ಬಂದೊದಗಿದೆ. ತಂದೆ ತಾಯಿಗಳು ಮಾನಸಿಕ ತೊಳಲಾಟಕ್ಕೆ ಗುರಿಯಾಗುತ್ತಿದ್ದಾರೆ. ಮುಸ್ಸಂಜೆಯ ಬಾಳಿನಲ್ಲಿ ಬದುಕು ದುಸ್ತರವಾಗಿ ಕಣ್ಣೀರಾಗುತ್ತಿದ್ದಾರೆ. ಎಷ್ಟೋ ಹಿರಿಯರು ಅನಾಥವಾಗಿ ಸಾಯುವುದನ್ನ ಕಣ್ಣಾರೆ ಕಾಣುತ್ತಿದ್ದೇವೆ. ಮನುಷ್ಯನ ಜೀವಕೆ ಬೆಲೆಯೇ ಇಲ್ಲದಂತಾಗಿದೆ. ವಸ್ತುಗಳನ್ನು ಹೆಚ್ಚಾಗಿ ಪ್ರೀತಿಸುವ ಜನ ಬಂದುತ್ವವನ್ನು ಕಡೆಗಣಿಸುತ್ತಿದ್ದಾರೆ. ಅಲ್ಲವೇ.. ಅಪ್ಪ ಅಮ್ಮ ಕಟ್ಟಿಸಿದ ಮನೆಯಲ್ಲಿ ಮಕ್ಕಳು ಬದುಕುತ್ತಾರೆ ಮಕ್ಕಳು ಕಟ್ಟಿಸಿದ ಮನೆಯಲ್ಲಿ ತಂದೆ ತಾಯಿಗಳು ಬದುಕಲು ಆಗುತ್ತಿಲ್ಲ. ಕಾರಣ ವಯಸ್ಸಾದವರು ಮನೆಯಲ್ಲಿದ್ದರೆ ಮನೆಯ ಸ್ವಚ್ಛತೆ ಸೌಂದರ್ಯ ಹಾಳಾಗುತ್ತದೆ. ತಮಗೂ ಒಂದು ದಿನ ವಯಸ್ಸಾಗುತ್ತದೆ ಅನ್ನೋದನ್ನ ಈ ಮಕ್ಕಳು ಮರೆತೆ ಬಿಟ್ಟಿದ್ದಾರೆ. ಮೊದಲಿನ ಅವಿಭಕ್ತ ಕುಟುಂಬ ಪದ್ಧತಿ ನಿಜಕ್ಕೂ ಸ್ಮರಣೀಯ ಹಾಗೂ ಶ್ಲಾಘನೀಯ.
ಇಂದಿನ ವಿಭಕ್ತ ಕುಟುಂಬ ಪದ್ಧತಿ ಶೋಚನೀಯ ಹಾಗೂ ಅಡ್ಡಿ ಆತಂಕಗಳಿAದ ಕೂಡಿದೆ. ಆದರೆ ವಿಭಕ್ತ ಕುಟುಂಬಗಳಲ್ಲಿ ನಾವು ಚೆನ್ನಾಗಿದ್ದೇವೆ ಅಂತ ಅಂದುಕೊAಡಿದ್ದಾರೆ. ಆದರೆ ಅವರ ಮಾನಸಿಕ ಸ್ವಾಸ್ಥ ಹಾಗೂ ದೈಹಿಕ ಸ್ವಾಸ್ಥ ಹಾಳಾಗುತ್ತಿರುವುದನ್ನು ಅವರು ಕಡೆಗಣಿಸುತ್ತಿದ್ದಾರೆ. ಇರುವ ಒಂದೇ ಅಥವಾ ಎರಡು ಮಕ್ಕಳು ಹಠಮಾರಿಗಳಾಗಿ ಬೆಳೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಒಂಟಿತನದ ಬದುಕು. ವಿಭಕ್ತ ಕುಟುಂಬಗಳಲ್ಲಿ ತಂದೆ ತಾಯಿಗಳು ಇಬ್ಬರು ದುಡಿಯುವುದರಿಂದ ಮಕ್ಕಳು ಮನೆಯಲ್ಲಿ ಏಕಾಂಗಿತನ ಅನುಭವಿಸುತ್ತಾರೆ ಅಲ್ಲದೆ ಅವರಿಗೆ ತಂದೆ ತಾಯಿಗಳ ಪ್ರೀತಿ ಸಿಗದೇ ವಂಚಿತರಾಗುತ್ತಿದ್ದಾರೆ. ಎಲ್ಲವೂ ಕೆಲಸದ ಅಳುಗಳ ಮೇಲೆ ನಿರ್ಧರಿತವಾಗಿ ಮಕ್ಕಳ ಜೀವನ ಅಯೋಮಯವಾಗಿದೆ. ಅಜ್ಜ ಅಜ್ಜಿಯರ ಸಾಮೀಪ್ಯವಂತೂ ದೂರದ ಮಾತು ಆದರೆ ಸಾವೃದ್ಧಾಪ್ಯದಲ್ಲಿ ತಂದೆ ತಾಯಿಗಳಿಗೆ ಮಕ್ಕಳ ಮೊಮ್ಮಕ್ಕಳ ಸಾಮಿಪ್ಯ ಬೇಕೇ ಬೇಕು. ಮೊಮ್ಮಕ್ಕಳ ಆಟ ಪಾಠ ನೋಡುತ್ತಾ ಅವರ ಬದುಕಿನ ಮುಸ್ಸಂಜೆ ಆರಾಮದಾಯಕವಾಗಿರುತ್ತದೆ. ಅಂತೆಯೇ ಮೊಮ್ಮಕ್ಕಳು ಕೂಡ ಅಜ್ಜ ಅಜ್ಜಿಯರ ಜೊತೆಗೆ ಬೆಳೆದರೆ ಅವರಿಗೂ ಆಯಾಗಳ , ಕೇರಟೇಕರಗಳ ಕಿರಿಕಿರಿಯ ಸಾಮಿಪ್ಯದಿಂದ ಮುಕ್ತವಾಗಿ ಆರಾಮವಾಗಿ, ಆರೋಗ್ಯವಾಗಿ ಬೆಳೆಯುತ್ತಾರೆ. "ಕೂಡಿ ಬಾಳಿದರೆ ಸ್ವರ್ಗ ಸುಖ." ಎಂಬ ನಾಣ್ಣುಡಿ ಎಂದಿಗೂ ಸುಳ್ಳಾಗಲಾರದು. "ಹಿರಿಯರನ್ನು ಗೌರವಿಸಿದರೆ ದೇವರನ್ನು ಪೂಜಿಸಿದಂತೆಯೇ" ಸರಿ. ಇಂದು ಈ ಸಂಗತಿಯನ್ನು ನಮ್ಮ ಆಧುನಿಕ ಪೀಳಿಗೆ ತಿಳಿದುಕೊಂಡು ಜಾಗೃತವಾಗಬೇಕಿದೆ. ವೃದ್ಧಾಶ್ರಮಕ್ಕೆ ತಂದೆ ತಾಯಿಗಳನ್ನು ದೂಡಿ ಕೈ ತೊಳೆದುಕೊಳ್ಳುವ ಕೆಟ್ಟ ಪದ್ದತಿ ಸಮಾಜದಿಂದ ನಿರ್ನಾಮವಾಗಬೇಕು ಕೂಡು ಕುಟುಂಬ ಎಲ್ಲರಿಗೂ ಮಾನಸಿಕ ನೆಮ್ಮದಿ, ಉತ್ಸಾಹ ,ಬದುಕಿನ ಭರವಸೆ ತುಂಬಿಕೊಡುತ್ತವೆ ನೆನಪಿರಲಿ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads