Specials
ನನ್ನೂರು ಮೊದಲಿನಂತೆ ಇಲ್ಲ.. ಸಾಕಷ್ಟು ಬದಲಾಗಿದೆ
ನೆನಪಿನ ಬುತ್ತಿ

ಬಸವರಾಜ ಚಿನಿವಾರ
ಹಿರಿಯ ಪತ್ರಕರ್ತ
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು3 ವೀಕ್ಷಣೆಗಳು
Ads
ಈಗ ನನ್ನೂರು ಮೊದಲಿನ ಹಾಗೆ ಇಲ್ಲ. ಸಾಕಷ್ಟು ಬದಲಾಗಿದೆ. ಈಗಂತೂ ನಮಗೆ ಎಂತಹ ಸಮಸ್ಯೆ ಆದರೂ ಸಹ ಅಂಗೈಯಲ್ಲಿ ಇರುವ ಮೊಬೈಲ್ನಲ್ಲಿಯೇ ಇಡೀ ಪ್ರಪಂಚದ ಮಾಹಿತಿಯನ್ನು ಪಡೆಯಬಹುದಾಗಿದೆ. ಇಂತಹ ಸಂದರ್ಭದಲ್ಲಿ ಯುವ ಪೀಳಿಗೆಯು ನಮ್ಮಂತೆ ಉನ್ನತ ಶಿಕ್ಷಣದಿಂದ ವಂಚಿತವಾಗಬಾರದು. ಆ ಹಿನ್ನೆಲೆಯಲ್ಲಿ ಶ್ರೀಮತಿ ಗಿರಿಜಾ ತಾಂವಶಿ ಅವರೂ ಸೇರಿದಂತೆ ಎಲ್ಲ ಸಹಪಾಠಿಗಳೂ ಸಹ ಸ್ಪರ್ಧಾತ್ಮಕ ವಿಷಯಗಳಲ್ಲಿ ಗ್ರಾಮದ ಯುವ ಪೀಳಗೆ ಯಶಸ್ಸು ಸಾಧಿಸಲು ಸಹಕಾರ, ನೆರವು ಕೊಡುವ ಅಗತ್ಯವಿದೆ. ಗುರುಪೂರ್ಣಿಮೆ ಸಂದರ್ಭದಲ್ಲಿ, ಆನಂತರದಲ್ಲೂ ಯುವ ಪೀಳಿಗೆಗೆ ಮಾಡಬೇಕಾದ ಕೆಲಸ ಕಾರ್ಯಗಳ ಕುರಿತು ಸಮಾಲೋಚನೆ ಮಾಡಬೇಕಾಗಿರುವುದು ಅಗತ್ಯವಾಗಿದೆ. ಶ್ರೀಮತಿ ಗಿರಿಜಾ ತಾಂವಶಿ ಅವರಿಗೆ ಗುರುಪೂರ್ಣಿಮೆಯಂದು ಭೇಟಿ ಮಾಡಲು ಕಾತುರನಾಗಿದ್ದೇನೆ. ಅವರಿಗೆ ಹೃದಯಪೂರ್ವಕ ಸ್ವಾಗತ ಕೋರುವೆ.
ಎಡದಿಂದ ಐದನೇ ಸ್ಥಾನದಲ್ಲಿ ಕುಳಿತಿರುವ ಶ್ರೀಮತಿ ಗೋದಾವರಿ ದೇಶಪಾಂಡೆ ಅವರು ಮೂಡಲಗಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂಗತಿ ನನಗೆ ಗುರುಪೂರ್ಣಿಮೆ ಕಾರ್ಯಕ್ರಮದ ನಿಮಿತ್ಯ ವಾಟ್ಸಪ್ ಗ್ರುಪ್ ರಚಿಸಿದಾಗ ಗೊತ್ತಾಗಿದ್ದು, ಅದೇ ರೀತಿ ಮೂಡಲಗಿಯಲ್ಲಿ ಇನ್ನೋರ್ವ ಸಹಪಾಠಿ ಶ್ರೀಮತಿ ತಾರಾದೇವಿ ಉದಪುಡಿ ಅವರೂ ಸಹ ಇರುವುದು ನನ್ನ ಸಹಪಾಠಿಗಳಿಂದ ತಿಳಿದುಬಂತು. ನಾನು ೧೯೮೪ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮುಗಿದ ನಂತರ ಶ್ರೀಮತಿ ಗೋದಾವರಿ ಅವರು ನನ್ನ ಸಂಪರ್ಕಕ್ಕೆ ಯಾವಾಗಲೂ ಬಂದಿಲ್ಲ. ಅದಕ್ಕಿಂತ ಮುಂಚೆ ನಾವು ಮಾತ್ರ ಜೀವಸ್ಯ ಕಂಠಸ್ಯ ಆಗಿದ್ದೆವು. ನಾವು ಭೇಟಿ ಮಾಡದ ದಿನಗಳೇ ಇರಲಿಲ್ಲ. ಎಲ್ಲ ಸಹಪಾಠಿಗಳಲ್ಲಿಯೇ ಅತ್ಯಂತ ಆತ್ಮೀಯ ಸಹಪಾಠಿ ಆಗಿದ್ದರು ಈಗಲೂ ಸಹ ನನಗೆ ಹಮ್ಮೆ ಎನಿಸುತ್ತದೆ.
ಶ್ರೀಮತಿ ಗೋದಾವರಿ ಅವರ ಮನೆಯೂ ಸಹ ಮನೆಯ ಹತ್ತಿರವೇ ಸಂಜೀವ್ ಸರ್ (ಇತ್ತೀಚೆಗೆ ನಿಧನರಾದರು). ಅವರ ಮನೆ ಎದುರಿನ ಒಂದು ಹಳೆಯ ಮನೆ. ಗೋಮಾಳದಿಂದ ಸಾರಿಸುವ ಮನೆ. ಚಿಕ್ಕದಾಗಿದ್ದರೂ ಸಹ ಅರಮನೆಯ ರೀತಿ ಚೆನ್ನಾಗಿ ನಿರ್ವಹಿಸಿಕೊಂಡು ಬಂದಿದ್ದರು. ಶ್ರೀಮತಿ ಗೋದಾವರಿ ಅವರ ತಾಯಿ ಶ್ರೀಮತಿ ಪದ್ಮಾವತಿ ಹಾಗೂ ತಂದೆ ಶ್ರೀ ಅನಂತ ಮತ್ತು ಹಿರಿಯ ಅಕ್ಕ ಜಯಶ್ರೀ, ಅಣ್ಣಂದಿರಾದ ಗುರು, ರಾಘು, ತಂಗಿ ಭಾರತಿ ಸೇರಿ ಮನೆಯವರೆಲ್ಲರೂ ನನಗಷ್ಟೇ ಅಲ್ಲ, ಇಡೀ ಓಣಿಗೆ ಬೇಕಾದವರು. ದಸರಾ, ದೀಪಾವಳಿ ಬಂದರೆ ಸಾಕು ಅವರ ಮನೆಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.
ಚೆಸ್ ಆಟ, ಚಕ್ಕಾದಾಟದೊಂದಿಗೆ ಹೆಚ್ಚಿನ ರೀತಿಯಲ್ಲಿ ಪಗಡೆ ಆಟವನ್ನು ಸಹ ಆಡುವುದನ್ನು ಅವರ ಮನೆಯಿಂದಲೇ ಹವ್ಯಾಸ ರೂಢಿಸಿಕೊಂಡಿದ್ದೆವು. ಪ್ರಸಾದ ಎಷ್ಟು ಜನರು ಅವರ ಮನೆಗೆ ಹೋಗುತ್ತಿದ್ದರೋ ಅವರಿಗೆ ಸಿಗುತ್ತಿತ್ತು. ಒಳ್ಳೆಯ ಸಂಸ್ಕಾರವು ನಾನು ಅವರ ಮನೆಯಿಂದ ಕಲಿತಿದ್ದೇನೆ. ನನಗೆ ತಿಳಿದ ಮಾಹಿತಿಯಂತೆ ಶ್ರೀಮತಿ ಗೋದಾವರಿ ಹಾಗೂ ಅವರ ಸಹೋದರ, ಸಹೋದರಿಯರು ತಮ್ಮ ತಂದೆಗೆ ಅಪ್ಪಾ, ಪಪ್ಪಾ ಎನ್ನುತ್ತಿರಲಿಲ್ಲ. ಬದಲಾಗಿ ದಾದಾ ಎಂದೇ ಕರೆಯುತ್ತಿದ್ದರು. ಕಿರಾಣಿ ವ್ಯಾಪಾರಸ್ಥರಾದ ಅವರ ತಂದೆ ಅತ್ಯಂತ ಸಭ್ಯರು. ಪ್ರಾಮಾಣಿಕರು. ಯಾವುದೇ ದುಶ್ಚಟಗಳಿಲ್ಲದ ಸರಳತೆಯ ಸಹನಾಮೂರ್ತಿ ಅವರಾಗಿದ್ದರು. ಎಲ್ಲರೊಂದಿಗೆ ಹಸನ್ಮುಖಿಯಾಗಿಯೇ ಮಾತನಾಡುತ್ತಿದ್ದರು. ಒಂದೇ ಒಂದು ದಿನವೂ ಯಾರೊಂದಿಗೂ ಸಿಟ್ಟಿನಿಂದ ಮಾತನಾಡಿದ್ದು ನೋಡಿಲ್ಲ. ಮನೆತುಂಬ ಮಕ್ಕಳಿದ್ದರೂ ಸಹ ಎಲ್ಲ ಮಕ್ಕಳೊಂದಿಗೂ ಅಕ್ಕರೆಯಿಂದ ಇರುತ್ತಿದ್ದರು. ಅದೇ ರೀತಿ ತಾಯಿಯೂ ಸಹ ಹೊರತಿಲ್ಲ.
ಇನ್ನು ವೈಯಕ್ತಿಕವಾಗಿ ಶ್ರೀಮತಿ ಗೋದಾವರಿ ನನಗೆ ಅತ್ಯಂತ ಆಪ್ತೆ. ಹೈಸ್ಕೂಲ್ನಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಶಾಲೆ ಬಿಟ್ಟ ಮೇಲೆ ಶ್ರೀಮತಿ ಗೋದಾವರಿ ಅವರ ಭೇಟಿ ನಿತ್ಯವೂ ಆಗುತ್ತಿತ್ತು. ಶ್ರೀಮತಿ ಗೋದಾವರಿಗೆ ನನ್ನ ಮನೆಯ ಎದುರು ಇರುವ ಇನ್ನೋರ್ವ ಸಹಪಾಠಿ ಶ್ರೀಮತಿ ಸರಳಾ ಮತ್ತು ಮತ್ತೋರ್ವ ಸಹಪಾಠಿ ಶ್ರೀಮತಿ ಅವಿ (ಸುಶೀಲಾ) (ಹಾಲಿ ಮುಂಬಯಿ ನಿವಾಸಿ ಶ್ರೀಮತಿ ಸುಶೀಲಾ ಧೂಪದ್) ಅವರು ಗೆಳತಿಯರು. ಶ್ರೀಮತಿ ಗೋದಾವರಿಗೆ ಶ್ರೀಮತಿ ಸರಳಾ ಮತ್ತು ಶ್ರೀಮತಿ ಅವಿ ಅವರು ಎರಡು ಕಣ್ಣುಗಳಂತೆ ಇದ್ದರು. ಸದಾ ಮೂವರು ಸೇರಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು.
ಶಾಲೆ ಬಿಟ್ಟ ನಂತರ ಶ್ರೀಮತಿ ಗೋದಾವರಿ ಸೀದಾ ನನ್ನ ಮನೆಯ ಎದುರು ಇರುವ ಶ್ರೀಮತಿ ಸರಳಾ ಕುಲಕರ್ಣಿ ಅವರ ಮನೆಗೆ ಬರುತ್ತಿದ್ದರು. ಶ್ರೀಮತಿ ಸರಳಾ ಗೋದಾವರಿ ಮನೆಗೆ ಬರುತ್ತಿದ್ದಂತೆಯೇ ಮನೆಯಿಂದ ಹೊರಗಡೆ ಬಾಗಿಲಿಗೆ ಬಂದು ನಿಲ್ಲುತ್ತಿದ್ದರು. ಆಗ ಅವರಿಬ್ಬರು ಸರಳಾ ಅವರ ಮನೆಯ ಬಾಗಿಲಿನ ಹತ್ತಿರ ನಿಂತಾಗ ನಾನು ಸಹ ನನ್ನ ಮನೆಯಿಂದ ಹೊರಬಂದು ಅವರೊಂದಿಗೆ ನಿಂತುಕೊಳ್ಳುತ್ತಿದ್ದೆ. ಮೂವರು ಇಡೀ ದಿನ ಶಾಲೆಯಲ್ಲಿ ಎಲ್ಲ ಶಿಕ್ಷಕರು ಹೇಳಿದ ಪಾಠಗಳ ಸಾರಾಂಶವನ್ನು ಮೆಲುಕು ಹಾಕುತ್ತಿದ್ದೆವು. ಈ ಸಂದರ್ಭದಲ್ಲಿ ಅವಿ ಬಂದರೆ ಹೊರಗೆ ನಿಂತು ಮಾತನಾಡುವುದು ಬೇಡ. ಒಳಗೆ ಹೋಗೋಣ ಎನ್ನುತ್ತಿದ್ದರು. ನಮ್ಮ ಚರ್ಚೆಯು ಕೇವಲ ಐದ್ಹತ್ತು ನಿಮಿಷಗಳಲ್ಲಿಯೇ ಮುಗಿಯುತ್ತಿದ್ದುದರಿಂದ ಒಳಗೆ ಹೋಗದೇ ಅಲ್ಲಿಯೇ ಬಾಗಿಲಿನ ಬಳಿ ನಿಂತೇ ಚರ್ಚ ಮಾಡುತ್ತಿದ್ದೆವು. ಆಗ ಶ್ರೀಮತಿ ಅವಿ ಅವರು ಅಲ್ಲಿ ನಿಲ್ಲದೇ ತಮ್ಮ ಮನೆಗೆ ಹೋಗುತ್ತಿದ್ದರು.
ಶ್ರೀಮತಿ ಗೋದಾವರಿಗೆ ನೆನಪಿನ ಶಕ್ತಿ ಅಪಾರವಾಗಿತ್ತು. ಎಲ್ಲ ಶಿಕ್ಷಕರ ಪಾಠದ ಸಾರಾಂಶವನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸುತ್ತಿದ್ದರು. ಆಗ ನಾನು ನನಗೆ ತಿಳಿಯದ ವಿಷಯವನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆ. ಅದೇ ರೀತಿ ಶ್ರೀಮತಿ ಸರಳಾ ಅವರೂ ಸಹ ಶ್ರೀಮತಿ ಗೋದಾವರಿಯಿಂದಲೇ ತಿಳಿಯದ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು.
ಒಂದು ರೀತಿಯಲ್ಲಿ ಶ್ರೀಮತಿ ಗೋದಾವರಿ ಮರೆತು ಹೋದ ಪಾಠಗಳನ್ನು ಮತ್ತೆ ನೆನಪಿಸುವಷ್ಟರ ಮಟ್ಟಿಗೆ ಎಲ್ಲ ಶಿಕ್ಷಕರ ಪಾಠ ಪ್ರವಚನವನ್ನು ವಿವರವಾಗಿ ನಮಗೆ ಹೇಳುತ್ತಿದ್ದರು. ಒಂದು ವೇಳೆ ತನಗೆ ಗೊತ್ತಿರದ ವಿಷಯಗಳನ್ನು ನನ್ನಿಂದ ಹಾಗೂ ಶ್ರೀಮತಿ ಸರಳಾ ಅವರಿಂದ ಮಾತ್ರ ತಿಳಿದುಕೊಳ್ಳುತ್ತಿದ್ದರು. ನಮ್ಮ ಭೇಟಿ ಕೇವಲ ಶಾಲೆ ಬಿಟ್ಟ ನಂತರ ಐದ್ಹತ್ತು ನಿಮಿಷಗಳ ಕಾಲ ಮಾತ್ರ. ಆನಂತರ ಮರುದಿನವೇ ನಾವು ಅದೇ ಸ್ಥಳದಲ್ಲಿ ಸೇರಿ ಯಥಾರೀತಿ ಪಾಠಗಳ ಕುರಿತೇ ಚರ್ಚೆ ಮಾಡುತ್ತಿದ್ದೆವು. ಅದನ್ನು ಬಿಟ್ಟರೆ ನಾವು ಬೇರೆ ವಿಷಯವಾಗಲಿ, ಬೇರೆ ಸ್ಥಳಗಳಲ್ಲಾಗಲಿ ಎಂದಿಗೂ ಶ್ರೀಮತಿ ಗೋದಾವರಿಯವರೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕವೇ ಬರುತ್ತಿರಲಿಲ್ಲ.
ಶ್ರೀಮತಿ ಗೋದಾವರಿ ಎಷ್ಟು ಆತ್ಮೀಯರೋ, ಅಷ್ಟೇ ಅವರ ಮನೆಯವರೂ ಸಹ ಆತ್ಮೀಯರು. ಶ್ರೀಮತಿ ಜಯಕ್ಕ ಒಳ್ಳೆಯ ಹಾಡುಗಳನ್ನು (ಭಕ್ತಿ ಗೀತೆ) ಹಾಡುತ್ತಿದ್ದರು. ಅವರ ಅಣ್ಣಂದಿರಾದ ಶ್ರೀ ಗುರು ಮತ್ತು ಶ್ರೀ ರಾಘು ಅವರೊಂದಿಗೆ ಚೆಸ್ ಆಟ, ಚೆಕ್ಕಾ, ಪಗಡೆ ಆಟಗಳನ್ನು ದಸರಾ, ದೀಪಾವಳಿ ಸಂದರ್ಭದಲ್ಲಿ ಹೆಚ್ಚು ಆಡುತ್ತಿದ್ದೆವು ಒಮ್ಮೊಮ್ಮೆ ಗುಂಡಾ, ಗಜಗದಾಟ, ಕ್ರಿಕೆಟ್ ಆಟಗಳನ್ನೂ ಸಹ ಅವರೊಂದಿಗೆ ಆಡುತ್ತಿದ್ದೆ. ವಾಲಿಬಾಲ್ ಆಟವನ್ನೂ ಸಹ ತೆಗ್ಗಿಯವರ ಸಂದಿಯಲ್ಲಿ ಮತ್ತು ವಿಠೋಭಾ ಗುಡಿಯ ಹತ್ತಿರ ಶ್ರೀರಂಗ ಮತ್ತು ವರ ಅಣ್ಣನ ಜೊತೆ ಶ್ರೀಮತಿ ಗೋದಾವರಿ ಅವರ ಸಹೋದರರೊಂದಿಗೆ ನಾನು ಆಡುತ್ತಿದ್ದೆ.
ಶ್ರೀಮತಿ ಗೋದಾವರಿ ಮನೆ ಹಾಗೂ ಅವರ ಎಲ್ಲ ಸದಸ್ಯರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನನಗೆ ಆಸಕ್ತಿ ಹುಟ್ಟಿಸಿದರು. ಸಂಸ್ಕಾರದೊAದಿಗೆ ಪಾಠ ಪ್ರವಚನಗಳನ್ನೂ ಸಹ ಹೆಚ್ಚು ಅರ್ಥ ಮಾಡಿಕೊಂಡಿದ್ದು ಅವರ ಮನೆಯಿಂದಲೇ. ಹೀಗಾಗಿ ಶ್ರೀಮತಿ ಗೋದಾವರಿ ನನ್ನ ಪಾಲಿಗೆ ಒಂದು ರೀತಿಯಲ್ಲಿ ಸರಸ್ವತಿ ಎಂದರೂ ಸಹ ತಪ್ಪಿಲ್ಲ. ಸಾಹಿತ್ಯಕವಾಗಿ, ಕಾವ್ಯಾತ್ಮಕವಾಗಿ ಮಾತನಾಡುವ ಶೈಲಿ ವಿದ್ಯಾರ್ಥಿನಿ ದೆಸೆಯಿಂದಲೇ ಆಕೆಗೆ ಬಂದಿತ್ತು. ಈಗ ಶಿಕ್ಷಕಿಯಾಗಿ ಅನೇಕ ಕಾವ್ಯಗಳನ್ನು ರಚಿಸಿ ಪ್ರಶಸ್ತಿ ಪಡೆದಿರುವುದನ್ನೂ ಸಹ ಸಹಪಾಠಿಗಳ ವಾಟ್ಸಪ್ ಗುಂಪಿನಲ್ಲಿ ಕಂಡು ಸಂತಸಗೊAಡೆ. ನಿಜವಾಗಿಯೂ ಅಂತಹ ಸಹಪಾಠಿ ನನ್ನ ಶಿಸ್ತಿನ ಜೀವನದ ಒಂದು ಭಾಗವಾಗಿದ್ದಳು. ಹೀಗಾಗಿ ಅವರ ನೆನಪು ಮಾತ್ರ ನನಗೆ ಅಜರಾಮರ. ಅಂತಹ ಸಹಪಾಠಿಯನ್ನು ನಾನು ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ಹೃದಯಪೂರ್ವಕವಾಗಿ ಸ್ವಾಗತಿಸುವೆ.
ಇನ್ನು ಶ್ರೀಮತಿ ಉಷಾ ಕುಲಕರ್ಣಿ ಅವರೂ ಸಹ ಪ್ರೌಢಶಾಲೆಯಲ್ಲಿ ಮೂರು ವರ್ಷಗಳು ಸಹಪಾಠಿ. ಅವರು ಶಾಲೆಯಲ್ಲಿ ಅಷ್ಟೇ ಅಲ್ಲ, ಶಾಲೆಯ ಹೊರಗೂ ಸಹ ನನಗೆ ಚಿರಪರಿಚಿತರು. ಶಾಲೆಯಿಂದ ನಾನು ನನ್ನ ಮನೆಗೆ ಹೋಗುವಾಗ ಗದ್ದುಗೆ ಮಠದ ಸಾವಳಗಿ ಅವರ ಮನೆಯ ಹತ್ತಿರ ಶ್ರೀಪಾದ್ ಅವರ ಮನೆಯ ಪಕ್ಕದ ಸಂದಿಯ ಮನೆಯೇ ಅವರ ಮನೆಯಾಗಿತ್ತು. ಹೀಗಾಗಿ ಅವರೊಂದಿಗೆ ಹಾಗೂ ಅವರ ಕುಟುಂಬದ ಸದಸ್ಯರೊಂದಿಗೆ ನಾನು ಮಾತನಾಡದೇ ಇದ್ದರೂ ಸಹ ಅವರ ದೈನಂದಿನ ಚಟುವಟಿಕೆಗಳು ನನಗೆ ಹೆಚ್ಚು ಹಿಡಿಸುತ್ತಿದ್ದವು. ನಾನು ನನ್ನ ತಮ್ಮ ಶ್ರೀಶೈಲ ಬೆಳಗಿನ ಜಾವ ಹಾಗೂ ಸಂಜೆಯ ವೇಳೆಗೆ ವಾಯು ವಿಹಾರಕ್ಕೆ ಹೋಗುವಾಗ ಅವರ ಮನೆಯ ಕಡೆಗೆ ಕಣ್ಣಾಡಿಸುತ್ತಿದ್ದೆವು. ಮನೆಯ ಮುಂದೆ ಬಣ್ಣ, ಬಣ್ಣದ ಆಕರ್ಷಕ ಚಿತ್ತಾರದ ರಂಗೋಲಿ ಸದಾ ಅವರ ಮನೆ ಮುಂದೆ ಇರುತ್ತಿತ್ತು. ಶ್ರೀಮತಿ ಉಷಾ ಹಾಗೂ ಅವರ ಮನೆಯವರು ನಿತ್ಯವೂ ರಂಗೋಲಿಯನ್ನು ಆಕರ್ಷಕವಾಗಿ ದೊಡ್ಡದಾಗಿ ರಸ್ತೆ ಮೇಲೆ ಹೋಗುವವರೂ ಸಹ ಅತ್ಯಂತ ಆಸಕ್ತಿಯಿಂದ ನೋಡುವ ರೀತಿ ರಂಗೋಲಿಯನ್ನು ಬಿಡಿಸುತ್ತಿದ್ದರು. ಶ್ರೀಮತಿ ಉಷಾ ಕುಲಕರ್ಣಿ ಅವರೇ ಹೆಚ್ಚು ರಂಗೋಲಿ ಬಿಡಿಸುತ್ತಿದ್ದರು.
ಇನ್ನು ಪೂಜೆ, ಪುನಸ್ಕಾರದಲ್ಲಿ ಶ್ರೀಮತಿ ಉಷಾ ಕುಲಕರ್ಣಿ ಅವರು ತಲ್ಲೀನರು. ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಮುತ್ಯಾನ ಗದ್ದುಗೆಯ ದರ್ಶನ ಪಡೆಯುತ್ತಿದ್ದರು. ಸ್ಪುರದ್ರೂಪಿಯಾಗಿದ್ದ ಅವರು ಓದು, ಬರಹದಲ್ಲೂ ಸಹ ಅಷ್ಟೇ ಮುಂದಿದ್ದರು. ಅವರೊಂದಿಗೆ ನಾನು ಎಂದಿಗೂ ಮಾತನಾಡುತ್ತಿರಲಿಲ್ಲ. ಇನ್ನು ದೀಪಾವಳಿಯ ಸಂದರ್ಭದಲ್ಲಿ ಅವರ ಮನೆಯ ಹತ್ತಿರವೇ ಆಕಾಶಬುಟ್ಟಿಯನ್ನು ವಿಶೇಷವಾಗಿ ತಯಾರಿಸಿ ಬಾನಿಗೆ ಬಿಡುತ್ತಿದ್ದರು. ಬಣ್ಣ, ಬಣ್ಣದ ಪೇಪರ್ಗಳನ್ನು ತಂದು ಆ ಹಾಳೆಗಳ ಮೂಲಕ ಬಿದಿರುಗಳನ್ನು ಆಕಾಶಬುಟ್ಟಿಯಂತೆ ಕಟ್ಟಿ, ಆ ಆಕಾಶಬುಟ್ಟಿಯ ಬಿದಿರುಗಳಿಗೆ ಬಣ್ಣ, ಬಣ್ಣದ ಪೇಪರ್ಗಳನ್ನು ಹಚ್ಚುತ್ತಿದ್ದರು. ರಾತ್ರಿ ಆಗುತ್ತಿದ್ದಂತೆಯೇ ಎಲ್ಲರೂ ಮಲಗುವ ಸಮೀಪದಲ್ಲಿಯೇ ಸತ್ತಿಗೇರಿ ಸರ್ ಅವರ ಮನೆಯ ಹಿಂದುಗಡೆ ಇರುವ ಬಾವಿಯ ಕಟ್ಟೆಯ ಮೇಲೆ ಕಟ್ಟಿಗೆಗಳ ಒಲೆಯನ್ನು ಹಚ್ಚಿ, ಆ ಒಲೆಯ ಹೊಗೆಯನ್ನು ಆಕಾಶಬುಟ್ಟಿಯಲ್ಲಿ ತುಂಬುತ್ತಿದ್ದರು. ಆಕಾಶಬುಟ್ಟಿ ಹೊಗೆಯಿಂದ ಪೂರ್ಣ ತುಂಬಿಕೊAಡಾಗ ಆಕಾಶಬುಟ್ಟಿಯ ಬಾಯಿಯ ಹತ್ತಿರ ಒಂದು ಕಕ್ಕಡ ಇದ್ದು, ಆ ಕಕ್ಕಡಕ್ಕೆ (ಪಣತಿ) ಹಚ್ಚಿದಾಗ ಆಕಾಶಬುಟ್ಟಿಯು ರ್ರನೇ ಆಕಾಶದೆತ್ತರಕ್ಕೆ ಹೋಗುತ್ತಿತ್ತು. ಆ ಕಕ್ಕಡದ ಬೆಳಕಿನಲ್ಲಿ ಆಕಾಶದಲ್ಲಿ ಬಣ್ಣ, ಬಣ್ಣದಿಂದ ತಯಾರಿಸಿದ ಆಕಾಶಬುಟ್ಟಿ ಹಾರುವುದನ್ನು ನೋಡಿ ಎಲ್ಲರೂ ಕಣ್ತುಂಬಿಕೊಳ್ಳುತ್ತಿದ್ದರು. ಇದೆಲ್ಲ ಶ್ರೀಮತಿ ಉಷಾ ಅವರ ಮನೆಯ ಕುಟುಂಬದ ಸದಸ್ಯರೂ ಸೇರಿ ಓಣಿಯವರು ಮಾಡುವ ಒಂದು ಸುಂದರ ಕಾರ್ಯಕ್ರಮವಾಗಿತ್ತು.
ಶ್ರೀಮತಿ ಉಷಾ ಕುಲಕರ್ಣಿ ಅವರೊಂದಿಗೆ ಎಂದಿಗೂ ನಾನು ಮಾತನಾಡುವ ಸಂದರ್ಭ, ಸಮಯ ಬಂದಿರಲಿಲ್ಲ. ಹೋಗುವಾಗ, ಬರುವಾಗ ಅವರ ಭೇಟಿ ಆಗುತ್ತಿತ್ತು. ಆದಾಗ್ಯೂ, ಮಾತು, ಕತೆಯಿಲ್ಲದ ಸಹಪಾಠಿ ಅವರಾಗಿದ್ದರು. ವಾಟ್ಸಪ್ ಗುಂಪಿನಲ್ಲಿ ಅವರಿಗೆ ನೋಡಿ ಖುಷಿಯಾಯಿತು. ಉತ್ತಮ ಪ್ರತಿಕ್ರಿಯೆಯನ್ನೂ ಸಹ ಅವರು ಕೊಡುತ್ತಿದ್ದಾರೆ. ಗುರುಪೂರ್ಣಿಮೆ ನಾವು ಆಹ್ವಾನಿಸುವ ಬದಲು ಅವರೇ ಆಹ್ವಾನ ನೀಡುವ ರೀತಿಯಲ್ಲಿ ಸಕ್ರೀಯವಾಗಿದ್ದಾರೆ. ಅವರಿಗೂ ಸಹ ಗುರುಪೂರ್ಣಿಮೆಗೆ ಹಾರ್ದಿಕ ಸ್ವಾಗತ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads