Sedam
ಸೇಡಂನಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಶ್ರೀಶೈಲ ಜಗದ್ಗುರುಗಳ ಸಾನಿಧ್ಯ

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರು
ಶನಿವಾರ, ಅಕ್ಟೋಬರ್ 3, 20262 ನಿಮಿಷ ಓದು9 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಸೇಡಂ : ಅಂತರಂಗ ಶುದ್ಧಿಯ ಸಾಧನವೇ ಇಷ್ಟಲಿಂಗ ಪೂಜೆ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.
ನಗರದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದ ಬಳಿಕ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು, ಇಷ್ಟಲಿಂಗ ಪೂಜೆ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಅಂತರಂಗ ಶುದ್ಧಿಗೊಳಿಸುವ ಸಾಧನೆಯಾಗಿದೆ ಎಂದು ಹೇಳಿದರು.
ಇಷ್ಟಲಿಂಗ ಪೂಜೆಯೊಂದಿಗೆ ಮನುಷ್ಯನ ನಡೆ, ನುಡಿಗಳಲ್ಲೂ ಭಕ್ತಿ ಪ್ರತಿಬಿಂಬಿಸಬೇಕು. ಸತ್ಯ, ಶುದ್ಧ ಕಾಯಕ, ದಾಸೋಹ ಹಾಗೂ ಸದಾಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಧರ್ಮದ ಸಾರ್ಥಕತೆ ಕಾಣುತ್ತದೆ ಎಂದರು.
ಅಹಂಕಾರ, ದ್ವೇಷ, ಅಸೂಯೆ ತೊರೆದು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು. ಮಕ್ಕಳಿಗೆ ವಿದ್ಯೆಯ ಜತೆಗೆ ಸಂಸ್ಕಾರ, ಧಾರ್ಮಿಕ ಮೌಲ್ಯ ಹಾಗೂ ಮಾನವೀಯತೆಯನ್ನು ಕಲಿಸುವುದು ಹಿರಿಯರ ಕರ್ತವ್ಯವಾಗಿದೆ ಎಂದು ನುಡಿದ ಶ್ರೀಶೈಲ ಪೀಠದ ಜಗದ್ಗುರುಗಳು, ಬಾಲ್ಯದಿಂದಲೇ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಹಾಗೂ ಸದಾಚಾರದ ಅರಿವು ಮೂಡಿಸುವುದು ಅಗತ್ಯ. ಯುವ ಪೀಳಿಗೆ ಆಧ್ಯಾತ್ಮಿಕ ಚಿಂತನೆಯತ್ತ ಒಲವು ತೋರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇಲ್ಲಿನ ಮಾತೆಯರು ಹಾಗೂ ಯುವತಿಯರು ಇಷ್ಟಲಿಂಗ ಪೂಜೆಯಲ್ಲಿ ಶ್ರದ್ಧೆಯಿಂದ ಭಾಗವಹಿಸಿದ್ದು, ಸಂತಸ ಮೂಡಿಸಿದೆ ಎಂದು ಹೇಳಿದರು.
ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಶಿವಶಂಕರೇಶ್ವರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ದಿಗ್ಗಾವಿಯ ಪಂಚಗೃಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯರು, ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ, ತೊಟ್ನಳ್ಳಿಯ ಮಹಾತೇಶ್ವರ ಮಠದ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರು, ಚಿಟಗುಪ್ಪಾದ ಶ್ರೀ ಮರುಳಸಿದ್ಧ ಶಿವಾಚಾರ್ಯರು, ಮಳಖೇಡದ ಶ್ರೀ ಕೋಟ್ಟೂರೇಶ್ವರ ಶಿವಾಚಾರ್ಯರು, ಜಾಕನಳ್ಳಿಯ ಶ್ರೀ ಅಭಿನವ ಗವಿಸಿದ್ದಲಿಂಗೇಶ್ವರ ಶಿವಾಚಾರ್ಯರು, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಸೇರಿದಂತೆ ಅನೇಕರಿದ್ದರು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads