📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Sedam

ಸಿಮೆಂಟ್ ಧೂಳಿನ ನಡುವೆ ಹೂವರಳಿಸಿದ ಹೇಮನೂರ

ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಗುರುವಾರ, ಆಗಸ್ಟ್ 13, 20262 ನಿಮಿಷ ಓದು3 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಸಿಮೆಂಟ್ ಧೂಳಿನ ನಡುವೆ ಹೂವರಳಿಸಿದ ಹೇಮನೂರ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಸ್ವರ್ಗದ ಶಿಲ್ಪಿ.. ಈ ಧರೆಗಿಳಿದ ಕಾಳಮ್ಮ ದೇವಿಯ.. ಕೃಪೆಯನು ಪಡೆದ ಹೇ ವಿಶ್ವಕರ್ಮ.. ಇದು ಏನಿದು ನಿನ್ನಯ ಮರ್ಮ ಜಗವಾ ಸೃಷ್ಟಿಸಿದೆ.. ಇಲ್ಲಿ ನೀನೇ ಧರೆಯ ಬ್ರಹ್ಮ.. ಸಿರಸಂಗಿ ಅಥವಾ ಕಾಳಮ್ಮ ತಾಯಿ.. ತೋರಿದಳು ನಿನ್ನಲ್ಲಿ ಪ್ರೇಮ ನಿನ್ನಾ ಕಲೆಯಲ್ಲಿ ಜಗವೊಂದು ಸುಂದರ ಧಾಮ.. ಅರ್ಥಪೂರ್ಣ ವೇದಿಕೆಯೊಂದು ನಿರ್ಮಾಣ ಆಗಿತ್ತು. ಸಾಹಿತ್ಯದ ಸಂಭ್ರಮಕ್ಕೆ ಸೇಡಂ ನಗರಿ ಸಾಕ್ಷಿಯಾಗಲು ಕ್ಷಣಗಣನೆ ಶುರುವಾಗಿತ್ತು. ಸಹಸ್ರಾರು ಜನ ಸಾಹಿತ್ಯಾಸಕ್ತರು ಜಮಾವಣೆಗೊಂಡಿದ್ದರು. ಕನ್ನಡಮಯ ವಾತಾವರಣದಲ್ಲಿ ಮಹಿಳೆಯರು, ಮಕ್ಕಳು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದ್ದರು. ವೇದಿಕೆಯ ಮೇಲೆ ಅತಿಥಿ ಅಭ್ಯಾಗತರು ವಿರಾಜಮಾನರಾಗಿದ್ದರು. ಸಂಗೀತಗಾರರು ಶಿಸ್ತಿನಲ್ಲಿ ತಮ್ಮ ವಾದ್ಯಗಳ ಜೊತೆ ಕುಳಿತುಕೊಂಡಿದ್ದರು. ನುಡಿಪೀಠಕ್ಕೆ ಬಂದು ನಿಂತವರು ನಾಲ್ಕಾರು ಬಾಲಕಿಯರು. ಶುಭ್ರ ದಿರಿಸಿನಲ್ಲಿದ್ದ ಅತ್ಯಂತ ಗಂಭೀರವಾಗಿ ನಿಂತು, ಸಂಗೀತದ ಸಪ್ತಸ್ವರದ ಆಲಾಪ ಆರಂಭವಾಗುವ ಹೊತ್ತು.. ಬಾಲಕಿಯರು ತಮ್ಮ ಸುಮಧುರ ಕಂಠದಲ್ಲಿ ಹಾಡುವುದಕ್ಕೆ ಶುರು ಮಾಡಿದರು. ಗಾಯನ ಕೇಳುತ್ತ ಸಭಾಂಗಣದಲ್ಲಿದ್ದ ಅಷ್ಟೂ ಜನ ಮಂತ್ರಮುಗ್ಧರಾದರು. ತದೇಕ ಚಿತ್ತದಿಂದ ಆಲಿಸುತ್ತಿದ್ದರು. ಅದೂವರೆಗೂ ಕೇಳಿರದ ಹಾಡು. ಗಾಯನ ಹಾಗೆ ತೇಲಿಬಂತು. `ಬನ್ನಿ ಬನ್ನಿ ಸ್ವಾಗತವು ನಿಮಗೆ ರಾಷ್ಟçಕೂಟ ಕೆಲಕೆ ಬನ್ನಿರಿಂದು ಈ ಪುಣ್ಯಧರೆಗೆ ನೃಪತುಂಗ ಮೆರೆದ ನೆಲಕೆ..’ ವಾಹ್.. ಎಂಥಾ ಸೊಗಸಾದ ಗಾನ. ಎಷ್ಟು ಸೊಗಸಾದ ಗಾಯನ. ಹಾಡು ಮುಗಿಯುತ್ತಿದ್ದಂತೆ ಚಪ್ಪಾಳೆಯ ಸುರಿಮಳೆ. ಅನೇಕರಿಗೆ ಬರೀ ಇದು ಗಾನ ಅನಿಸಿರಬಹುದು. ಆದರೆ, ಈ ನೆಲದ ರಾಷ್ಟçಗೀತೆಯ ರೀತಿ ಅದು ಮೂಡಿಬಂದಿತ್ತು. ಅಂದಹಾಗೆ, ಇಂಥದ್ದೊAದು ಅಪರೂಪದ ಮತ್ತು ತುಂಬಾ ಸೊಗಸಾದ ಗೀತೆಯನ್ನು ಬರೆದವರು, ಹಿರಿಯ ಕವಿ ಶ್ರೀ ನರಸಿಂಗರಾವ ಹೇಮನೂರ ರವರು. `ಕಿರು ನಗು’ ಶ್ರೀ ನರಸಿಂಗರಾವ ಹೇಮನೂರ ಅವರ ವ್ಯಕ್ತಿತ್ವದ ಸಂಪತ್ತು. ನೆನಪಿರಲಿ, ಹೇಮನೂರ ಎಂದರೆ, ಸಮಾಧಾನಿ ನೆನಪಿರಲಿ, ಹೇಮನೂರ ಎಂದರೆ, ತಾವಾಯಿತು ತಮ್ಮ ಕೆಲಸವಾಯಿತು. ನೆನಪಿರಲಿ, ಹೇಮನೂರ ಎಂದರೆ, ನುಡಿದರೆ ಮಾಣಿಕ್ಯದ ದೀಪ್ತಿಯಂತೆ. ನೆನಪಿರಲಿ, ಹೇಮನೂರ ಎಂದರೆ, ಮಂದಾರ ಹೂವು. ನೆನಪಿರಲಿ, ಕಲ್ಲರಳಿದ ಹೂವು ಮತ್ತು ಹೂವರಳಿಸಿದ ವಿಶ್ವಕರ್ಮ. ಸೇಡಂ ತಾಲೂಕಿನ ಕುರಕುಂಟಾ ಗ್ರಾಮದಲ್ಲಿ ಭಾರತ ಸರಕಾರ ಅಧೀನದ ಸಿ ಸಿ ಐ (ಸಿಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ) ಹೆಸರಿನ ಸಿಮೆಂಟ್ ಉತ್ಪಾದನಾ ಘಟಕದಲ್ಲಿ ಉದ್ಯೋಗಿಯಾಗಿದ್ದರು. ಮೂಲತಃ ಸುರಪುರ ತಾಲೂಕಿನವರು. ಸಿಮೆಂಟ್ ಧೂಳಿನ ನಡುವೆಯೂ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಬರವಣಿಗೆಯನ್ನು ಅಪ್ಪಿಕೊಂಡಿದ್ದರು. ಸೇಡಂನಲ್ಲಿರುವ ಅನೇಕ ಬರಹಗಾರರ ಜೊತೆ ನಂಟು ಇಟ್ಟುಕೊಂಡಿದ್ದರು. ಭಾನುವಾರ ಬಂದಾಗಲೆಲ್ಲ ರಜೆಯ ಹಿನ್ನೆಲೆಯಲ್ಲಿ ಸೇಡಂ ನಗರಿಗೆ ಬಂದು ಇಲ್ಲಿರುವ ಅನೇಕ ಸಾಹಿತಿಗಳೊಂದಿಗೆ ಬೆರೆಯುತ್ತಿದ್ದರು. ಕನ್ನಡದಲ್ಲಿ ಕವಿತೆಗಳನ್ನು ಬರೆಯುವ ಹುಮ್ಮಸ್ಸು ಅವರಲ್ಲಿತ್ತು. ಅದೇ ಹೊತ್ತಿಗೆ ಸೇಡಂ ನಗರಿಯಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಸಂದರ್ಭದಕ್ಕೆ ಸೇಡಂ ನೆಲದ ಸಂಭ್ರಮವನ್ನೊಳಗೊAಡ ಹಾಡೊಂದನ್ನು ಬರೆದು ಕೊಟ್ಟರು. ನೆನಪಿರಲಿ.. ಆ ಸಂದರ್ಭದಲ್ಲಿ ಸೇಡಂ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು ಸಹ ಶ್ರೀ ನರಸಿಂಗರಾವ ಹೇಮನೂರು ಅವರೆ. ಸಾಹಿತ್ಯ ಸಮ್ಮೇಳನವನ್ನು ಅಕ್ಷರಶಃ ಸಂಭ್ರಮಕ್ಕೊಳ ಗಾಗಬೇಕೆಂದು ಅಹರ್ನಿಶಿ ಶ್ರಮಿಸುತ್ತಿದ್ದವರಲ್ಲಿ ಸರ್ವಶ್ರೀ ಶಿಕ್ಷಣ ಪ್ರೇಮಿ ಬಸವರಾಜ ಪಾಟಿಲ ಸೇಡಂ, ಉಪನ್ಯಾಸಕರಾಗಿದ್ದ ಗುರುಲಿಂಗಪ್ಪ ತಳ್ಳಳ್ಳಿ, ಹಿರಿಯ ಕವಿ ದಿ. ಕೆರಳ್ಳಿ ಗುರುನಾಥರೆಡ್ಡಿ, ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗಿಯಾಗಿದ್ದ ಇನ್ನೋರ್ವ ಹಿರಿಯ ಕವಿ ಪ್ರಭುರಾಜ ಅರಣಕಲ್, ಸಾಹಿತ್ಯದ ಯುವ ಉತ್ಸಾಹಿ ಸಿದ್ದಪ್ಪ ತಳ್ಳಳ್ಳಿ, ಪತ್ರಕರ್ತ ಮತ್ತು ಕಾದಂಬರಿಕಾರ ಆಗಿದ್ದ ದಿ. ವೀರಣ್ಣಗೌಡ ಯಡ್ಡಳ್ಳಿ, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ತತ್ವಪದಗಳನ್ನು ಬರೆಯುತ್ತಿದ್ದ ದಿ. ಬಾಲಚಂದ್ರ ಯಾದವ್, ವೃತ್ತಿಯಲ್ಲಿ ಶಿಕ್ಷಕರಾಗಿದ್ದುಕೊಂಡು ಸಾಹಿತ್ಯದ ನಂಟು ಇಟ್ಟುಕೊಂಡಿದ್ದ ಕೋಡ್ಲಾದ ದಿ. ಶಿವಲಿಂಗಪ್ಪ ಇಂಗಳಗಿ, ಕಲಬುರಗಿಯ ಸಾಹಿತ್ಯ ವಲಯದ ಕೆ.ಎಸ್.ರಾಜ್ (ನಂದಿ), ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದ ದಿ.ಡಾ.ಶಾಂತವೀರ ಬಿ.ಸುಂಕದ, ವೆಂಕಟೇಶ ದೇಶಪಾಂಡೆ ಸೇರಿದಂತೆ ಅನೇಕರು ಇದ್ದರು. ತಾಲೂಕಿನ ಮೊದಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಸುರಪುರ ಮೂಲದ ಹಿರಿಯ ಕವಿ ಕೆ.ಮುದ್ದಣ್ಣನವರು. ಸಮಾರಂಭದ ಆರಂಭಕ್ಕೆ ಸ್ವಾಗತ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು, ಎಷ್ಟು ಪರಿಣಾಮ ಬೀರಿತ್ತು ಎಂದರೆ, ಆ ಹಾಡು ಎಷ್ಟರಮಟ್ಟಿಗೆ ಮನಸ್ಸಿನಲ್ಲಿ ಉಳಿದುಕೊಂಡಿತ್ತು ಎಂದರೆ, ಸೇಡಂ ನೆಲದಲ್ಲಿ ಇವತ್ತಿಗೂ ಅಂದರೆ ನಲವತ್ತು ವರ್ಷದ ನಂತರವೂ ಆ ಹಾಡು ಅನೇಕ ಸಮಾರಂಭಗಳಲ್ಲಿ ಉಲಿಯುತ್ತದೆ. ಗಾನರೂಪದಲ್ಲಿ ನಲಿಯುತ್ತದೆ ಇಷ್ಟು ವರ್ಷ ಗಾನವೊಂದು ಉಲಿಯುತ್ತದೆ ಎಂದರೆ, ಅದು ಕವಿಯ ಹೆಚ್ಚುಗಾರಿಕೆ. ಅಂತಹದ್ದೊAದು ಸೊಗಸಾದ ಸಾಹಿತ್ಯ ರಚನೆ ಮಾಡಿದ ಕವಿ ಶ್ರೀ ನರಸಿಂಗರಾವ ಹೇಮನೂರ ಅವರ ಪ್ರತಿಭೆ. ಆ ಗೀತೆಯ ಜನಪ್ರಿಯತೆ ಕವಿಗೆ ಗೌರವವನ್ನು ತಂದುಕೊಡುತ್ತದೆ. ಕಳೆದ ನಲವತ್ತು ವರ್ಷದಿಂದಲೂ ಈ ಗಾಯನ ಅನುರಣಿಸುವ ಮೂಲಕ ಕವಿಯನ್ನು ಸಂಭ್ರಮಿಸುವAತೆ ಮಾಡಿದೆ. ಅದಾಗಿ ಕೆಲ ವರ್ಷಗಳ ನಂತರ ಕುರಕುಂಟಾದಿAದ ದೇಶದ ಬೇರೆ ಬೇರೆ ಕಡೆ ಸಿಮೆಂಟ್ ಘಟಕಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಇದೇ ಕಲಬುರಗಿ ಮಹಾನಗರಿಯ ನಿವಾಸಿಯಾಗಿದ್ದಾರೆ. ಸಾಹಿತ್ಯದ ನಂಟು ಹಾಗೆ ಇಟ್ಟುಕೊಂಡಿದ್ದಾರೆ. ವಿವಿಧ ಪ್ರಕಾರಗಳಲ್ಲಿ ಬರವಣಿಗೆಯನ್ನು ಮಾಡುತ್ತಿದ್ದಾರೆ. ೮೦ ರ ಇಳಿವಯಸ್ಸಿನಲ್ಲಿ ಹರೆಯದ ಹುಮ್ಮಸ್ಸು ಅವರಲ್ಲಿದೆ. ಈಗಲೂ ಓಡಾಡುತ್ತ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅವರು ಇಂದ್ಯಾಕ ಬಂದಿ ಮತ್ತು ನೆನಪು ನೂರು ನೂರು ತರಹ ಎಂಬೆರಡು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ, ಜ್ಯೋತಿ, ನೃಪತುಂಗನ ನೆಲದಿಂದ, ಮೌನಯಾನ, ವಿಶ್ವರಥ, ವಿಶ್ವರೂಪ, ಸಮರ್ಪಣೆ, ವಿಶ್ವದೊಡೆಯ, ಶತಕ ಕಂಡ ಶ್ರೀಮಠ ಎಂಬ ಕೃತಿಗಳನ್ನು ಎಂಟು ಕೃತಿಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಶ್ರೀ ವೀರಬ್ರಹ್ಮೇಂದ್ರ ಶ್ರೀಗಳ ಕಾಲಜ್ಞಾನ ಕೃತಿಯನ್ನು ಇಂಗ್ಲೀಷಿನಿAದ ಕನ್ನಡಕ್ಕೆ, ಹಿಂದಿ ಮತ್ತು ಉರ್ದು ಭಾಷೆಗಲ್ಲಿ ಬಂದ ನೂರಾರು ಶಾಯರಿ, ಗಜಲ್ ಗಳನ್ನು ಅನುವಾದ ಮಾಡಿದ್ದಾರೆ. ಹಿಂದಿಯ ಹಿರಿಯ ಕವಿ ಗುಲ್ಜಾರ ಹಾಗೂ ಇತರರ ಶಾಯರಿಗಳನ್ನು ಸುಮಾರು ೬೦೦ ಕ್ಕೂ ಹೆಚ್ಚು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಅದಿನ್ನೂ ಪ್ರಿಂಟ್ ಆಗಬೇಕು. ಎಲೆಮರೆಯ ಕಾಯಿಯಂತಿದ್ದ ಅನೇಕ ಸಾಧಕರ ವ್ಯಕ್ತಿ ಚಿತ್ರಗಳ ನೂರಾರು ಲೇಖನಗಳನ್ನು ಬರೆದಿದ್ದಾರೆ. ನಾಡೋಜ ನಾಗಣ್ಣ ಬಡಿಗೇರ, ಸಾತಖೇಡದ ಅಜ್ಞಾತ ಪ್ರತಿಭೆ ನಾಗಪ್ಪ ಕಂಬಾರ, ಕಾಷ್ಠ ಶಿಲ್ಪದಲ್ಲಿ ನೈಪುಣ್ಯ ಸಾಧಿಸಿದ ಸೊನ್ನದ ಕಲ್ಲಪ್ಪ ವಿಶ್ವಕರ್ಮ, ಅಪರೂಪದ ಮೂರ್ತಿ ಶಿಲ್ಪಿ ಕಲಬುರಗಿಯ ಶ್ರೀ ಗುರುನಾಥರಾವ ಮಾಡ್ಯಾಳಕರ್, ಕರ್ಮಯೋಗಿ ಸುರಪುರದ ಮುಂಡರಗಿ ಕೃಷ್ಣಪ್ಪ ಪತ್ತಾರ, ಮರೆತು ಹೋದ ಸ್ವಾತಂತ್ರö್ಯ ಸೇನಾನಿ ತೋಕಟ್ಟಿ ರಂಗಾಚಾರಿ, ಮಾನಯ್ಯ ಬಡಿಗೇರ, ಮೋಹನ ಸೀತನೂರ, ಮಹೋಪಾಧ್ಯಾಯ ಅರ್ಜುನಾಚಾರ್ಯ ತೆಂಗಳಿಕರ್, ಶಹಾಪುರದ ಪೂಜ್ಯ ಶ್ರೀ ಅಜ್ಜೇಂದ್ರ ಮಹಾಸ್ವಾಮೀಜಿಯವರಂಥ ಸಾಧಕರ ಬಗ್ಗೆ ತಮ್ಮ ಅಭಿಮಾನದ ವ್ಯಕ್ತಿತ್ವವನ್ನು ಹೇಮನೂರ ಅಚ್ಚುಕಟ್ಟಾಗಿ ಬರಹಕ್ಕಿಳಿಸಿದ್ದಾರೆ. ಸಾಮಾಜಿಕ, ಧಾರ್ಮಿಕ ವಿಷಯಕ್ಕೆ ಸಂಬAಧಿಸಿದAತೆ, ಹಲವು ಲೇಖನಗಳನ್ನು ಬರೆದಿದ್ದಾರೆ. ಅನೇಕ ಯುವ ಬರಹಗಾರರ ಮತ್ತು ಸಮಕಾಲೀನ ಸಾಹಿತಿಗಳ ಪುಸ್ತಕಗಳಿಗೆ ಮುನ್ನುಡಿ ಬರೆದು ಮಾರ್ಗದರ್ಶನ ಮಾಡಿದ್ದಾರೆ. ಹಾಗೆಯೇ ಬೆನ್ನುಡಿ ಬರೆದು ಹಾರೈಸಿದ್ದಾರೆ. ಶ್ರೀ ಅಭಿನವ ಶ್ರೀಕಂಠ ಮಹಾಸ್ವಾಮಿಗಳ `ಕಾರುಣ್ಯ ಬೋಧೆ’ ಕೃತಿಯ ಅವಲೋಕನ, ಮರೆಯಲಾಗದ ಮಹಾನುಭಾವ ಪ್ರೊ.ವಸಂತ ಕುಷ್ಟಗಿ ಅವರ ಕುರಿತ ಭಾವಪೂರ್ಣ ನಮನ ಲೇಖನ, ಕಾದಂಬರಿಕಾರ ಲಕ್ಷö್ಮಣ ಕೌಂಟೆ ಅವರ ಋಷ್ಯಶೃಂಗ ಕೃತಿಯ ಅವಲೋಕನ, ಸಗರನಾಡಿನ ಎಲ್ ಬಿ ಕೆ ಆಲ್ದಾಳ ಬರೆದ ಮೌನೇಶ್ವರ ಮಹಾತ್ಮೆ ನಾಟಕಕ್ಕೆ ನಲ್ನುಡಿ, ಮತ್ತು ಶ್ರೀ ಅಯ್ಯಪ್ಪಯ್ಯ ಮಹಾತ್ಮೆ ನಾಟಕಕ್ಕೆ, ವಿ ಎಂ ಪತ್ತಾರ ಅವರ ವಚನ ಸಂಕಲನಕ್ಕೆ, ದತ್ತಾತ್ರೇಯ ವಿಶ್ವಕರ್ಮ ಅವರ ಕೃತಿಗೆ, ಅವರ ಬೆಳವಣಿಗೆಗೆ ಕಾರಣರಾದ ಕಾಕಾ ಶ್ರೀ ದೇವೆಂದ್ರಪ್ಪ ಮಾಸ್ತರರ ಕುರಿತು, ಶ್ರೀ ಗುರುನಾಥ ಶಾಸ್ತಿçಗಳ ಕುರಿತು.. ಹೀಗೆ ಒಂದೇ ಎರಡೇ.. ಅನೇಕ ಕೃತಿಗಳ ಕುರಿತು ತಮ್ಮ ಬರಹ ಮೂಡಿಸಿದ್ದಾರೆ. ಕನ್ನಡ ಸಾಹಿತ್ಯದ ಅನೇಕ ಕಾರ್ಯಕ್ರಮಗಳಿಗೆ ತಪ್ಪದೇ ಆಗಮಿಸಿ, ಸಂಘಟಕರಿಗೆ ಶುಭ ಕೋರಿದ್ದಾರೆ. ನಾನು ಕಲಬುರಗಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಆಗಿರುವ ಹೊತ್ತಿನಲ್ಲಿ ಪ್ರತಿ ಭಾನುವಾರ ಆಯೋಜಿಸುತ್ತಿದ್ದ ಕಾರ್ಯಕ್ರಮಗಳಿಗೆ ಭಾಗವಹಿಸುವ ಮೂಲಕ ನಮ್ಮಂಥ ಯುವಕರಿಗೆ ಪ್ರೇರಣಾದಾಯಿ ಆಗಿರುತ್ತಿದ್ದರು. ನಿವೃತ್ತಿಯಾದ ಮೇಲೆ ಮನೆಯಲ್ಲಿ ಟಿವಿ ನೋಡುತ್ತ ಕಾಲಹರಣ ಮಾಡದೇ, ಓದುವ ಮತ್ತು ಬರೆಯುವ ಅಭ್ಯಾಸ ಇಟ್ಟುಕೊಂಡು, ಸಾಹಿತ್ಯದ ನಂಟು ಇನ್ನಷ್ಟು ಪ್ರಖರಗೊಳಿಸಿಕೊಂಡಿದ್ದಾರೆ. ಇತ್ತೀಚೆಗೆ ಹಿಂದಿಯ ಕವಿ ಗುಲ್ಜಾರ್ ಅವರ ಸಾಹಿತ್ಯದ `ಶೇರ್’ಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಐನೂರಕ್ಕೂ ಹೆಚ್ಚು ಗುಲ್ಜಾರ್ ಕವಿಯ ಶೇರ್‌ಗಳನ್ನು ಕನ್ನಡಕ್ಕೆ ತರುವಲ್ಲಿ ಶ್ರಮಿಸುತ್ತಿದ್ದಾರೆ. ಅದು ಕೃತಿಯ ರೂಪ ಪಡೆದುಕೊಳ್ಳಬೇಕಾಗಿದೆ. ಬರವಣಿಗೆಯನ್ನು ಅಪ್ಪಿಕೊಂಡಿರುವ ಅವರಿಗೆ ಎಂಬತ್ತಾದರೂ ಇನ್ನೂ ಯುವ ಉತ್ಸಾಹಿಯಂತೆ ಓಡಾಡುತ್ತಾರೆ. ಕಾರ್ಯಕ್ರಮಗಳನ್ನು ಸಂಘಟಿಸುತ್ತಾರೆ. ಪ್ರೀತಿಯಿಂದಲೇ ಮಾತನಾಡಿಸುವ, ಸ್ನೇಹದಿಂದಲೇ ಎಲ್ಲರೊಂದಿಗೆ ಬೆರೆಯುವ ಹಿರಿಯ ಸಾಹಿತಿ ನರಸಿಂಗರಾವ ಹೇಮನೂರು ಅವರಿಗೆ ಎಂಭತ್ತು ತುಂಬಿದ ಘಳಿಗೆಯಲ್ಲಿ ಸಮಗ್ರ ಸಾಹಿತ್ಯ ಸಮೀಕ್ಷೆಯ `ಮಂದಾರ’ ಎಂಬ ಗ್ರಂಥವೊAದು ಅರ್ಪಿಸುವ ಅಭಿಮಾನಿಗಳ, ಹಿತೈಷಿಗಳ ಸತ್ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದೆ. ಉಲ್ಲಾಸಮಯ ಆಗಿ ಜೀವನವನ್ನು ಸಂಭ್ರಮಿಸುತ್ತಿರುವ ಕವಿ ಹೇಮನೂರು ಅವರಿಗೆ ಆಯುಷ್ಯ, ಆರೋಗ್ಯ ಉನ್ನತವಾಗಿರಲಿ ಹಾಗೂ ಅವರಿಂದ ಇನ್ನಷ್ಟು ಸಾಹಿತ್ಯದ ಸೇವೆ ಮುಂದುವರಿಯಲಿ ಎಂಬುದು ನಮ್ಮಂಥವರ ಪ್ರಾರ್ಥನೆ. - ಮಹಿಪಾಲರೆಡ್ಡಿ ಮುನ್ನೂರ್
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads