Literature
ಕಗ್ಗ ದರ್ಶನ

ಡಾ.ಜಗನ್ನಾಥ ತರನಳ್ಳಿ
ಕನ್ನಡ ವಿದ್ವಾಂಸರು, ವಕೀಲರು
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು3 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
೧೫೭. ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ ನರಜಾತಿ ಸಾನುಭೂತಿಯ ಕಲಿಯಲೆಂದು
ಪರರೆಂಬರಿಲ್ಲ ಆತ್ಮಾಂಶರೆಲ್ಲರೆನುತ್ತೆ ಬೆರೆ
ನೀನು ವಿಶ್ವದಲಿ ಮಂಕುತಿಮ್ಮ.
ಈ ಪದ್ಯದಲ್ಲಿ ಪರರು ಎಂಬುವರಿಲ್ಲ; ಎಲ್ಲರೂ ಆತ್ಮಾಂಶಿಗಳೇ. ಆದ್ದರಿಂದ ಸಹಾನುಭೂತಿ, ಪ್ರೀತಿ ಮತ್ತು ವಿಶ್ವಮಾನವೀಯತೆಯಿಂದ ಬದುಕಬೇಕು ಎಂಬುದನ್ನು ತಿಳಿಸಲಾಗಿದೆ. ಕವಿಯು ಇಲ್ಲಿ ಮಾನವೀಯತೆ ಮತ್ತು ಸಹಾನುಭೂತಿಯ ಮಹತ್ವವನ್ನು ತಿಳಿಸುತ್ತಾರೆ. ಪರಬ್ರಹ್ಮನು ಮನುಷ್ಯರನ್ನು ಸೃಷ್ಟಿಸಿರುವುದು ಕೇವಲ ತಮ್ಮ ತಮ್ಮ ಜೀವನವನ್ನು ನಡೆಸುವುದಕ್ಕಾಗಿ ಅಲ್ಲ; ಇತರರ ನೋವು, ನಲಿವುಗಳನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ಸಹಾನುಭೂತಿಯಿಂದ ಬದುಕುವುದನ್ನು ಕಲಿಯಲು. ಈ ಜಗತ್ತಿನಲ್ಲಿ ಯಾರೂ ಸಂಪೂರ್ಣವಾಗಿ ಪರರಲ್ಲ.ಪ್ರತಿಯೊಬ್ಬ ಜೀವಿಯಲ್ಲಿಯೂ ಒಂದೇ ಆತ್ಮ ತತ್ವದ ಅಂಶವಿದೆ. ಆದ್ದರಿಂದ ಇವನು ಪರ,ಇವನು ನಮ್ಮವನು ಎಂಬ ಭೇದ ಭಾವವನ್ನು ಬಿಟ್ಟು ಎಲ್ಲರನ್ನೂ ನಮ್ಮವರಂತೆ ಕಾಣಬೇಕು ಎಂಬುದು ಪದ್ಯದ ಭಾವ. "ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ"- ಪರಬ್ರಹ್ಮನು ಮನುಷ್ಯನನ್ನು ಈ ಜಗತ್ತಿನಲ್ಲಿ ಸೃಷ್ಟಿಸಿರುವ ಉದ್ದೇಶವೇನು?." ನರ ಜಾತಿ ಸಾನುಭೂತಿಯ ಕಲಿಯಲೆಂದು"-ಮನುಷ್ಯರು ಪರಸ್ಪರ ಕಷ್ಟ-ಸುಖಗಳನ್ನು ಅರ್ಥ ಮಾಡಿಕೊಂಡು ಸಹಾನುಭೂತಿಯಿಂದ ಬದುಕುವುದನ್ನು ಕಲಿಯಲೆಂದು. "ಪರರೆಂಬರಿಲ್ಲ ಆತ್ಮಾಂಶರೆಲ್ಲರೆನುತ್ತೆ"- ಈ ಜಗತ್ತಿನಲ್ಲಿ ಯಾರೂ ನಿಜವಾಗಿ ಪರರಲ್ಲ; ಎಲ್ಲರೂ ಒಂದೇ ಪರಮಾತ್ಮನ ಅಂಶಗಳೇ ಎಂದು ತಿಳಿಯಬೇಕು. "ಬೆರೆ ನೀನು ವಿಶ್ವದಲಿ ಮಂಕುತಿಮ್ಮ"- ಆದ್ದರಿಂದ ಮಂಕುತಿಮ್ಮನೆ, ನೀನು ಈ ವಿಶ್ವದಲ್ಲಿ ಎಲ್ಲರೊಂದಿಗೆ ಒಗ್ಗಟ್ಟಿನಿಂದ ಬೆರೆತು ಬದುಕು. ಮನುಷ್ಯನು ಸ್ವಾರ್ಥದಿಂದ ಮಾತ್ರ ಬದುಕದೇ,ಇತರರ ಕಷ್ಟಕ್ಕೆ ಸ್ಪಂದಿಸಬೇಕು. ಅವರ ಸಂತೋಷದಲ್ಲಿ ಸಂತೋಷಪಡಬೇಕು ಮತ್ತು ಎಲ್ಲರನ್ನೂ ಸಮಾನ ಭಾವದಿಂದ ಕಾಣಬೇಕು. ಏಕೆಂದರೆ,ಇಡೀ ವಿಶ್ವದಲ್ಲಿರುವ ಜೀವಿಗಳೆಲ್ಲ ಒಂದೇ ಪರಮಾತ್ಮನ ಅಂಶಗಳಾಗಿವೆ. ಎಲ್ಲರೂ ಒಂದೇ; ಯಾರೋ ಪರರಲ್ಲ. ಆದ್ದರಿಂದ ಪ್ರೀತಿ, ಸಹಾನುಭೂತಿ ಮತ್ತು ಒಗ್ಗಟ್ಟಿನಿಂದ ಬದುಕಬೇಕು ಎನ್ನುವುದಾಗಿದೆ. ಇದನ್ನು ಭಗವದ್ಗೀತೆಯ ನೆಲೆಯಲ್ಲಿ ನೋಡಿದರೂ, "ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿಯೋರ್ಜುನ ಸುಖಂ ವಾ ಯದಿ ವಾ ದು:ಖಂ ಸ ಯೋಗಿ ಪರಮೋ ಮತ:" ಎಂದರೆ, ತನ್ನನ್ನು ಹೋಲಿಕೆಯಾಗಿ ಇಟ್ಟುಕೊಂಡು ಎಲ್ಲಾ ಜೀವಿಗಳನ್ನು ಸಮಾನವಾಗಿ ಕಾಣುವವನು ಇತರರ ಸುಖವನ್ನು ತನ್ನ ಸುಖದಂತೆಯೂ, ಇತರರ ದುಃಖವನ್ನು ತನ್ನ ದುಃಖದಂತೆಯೂ ಭಾವಿಸುವವನು ಶ್ರೇಷ್ಟ ಯೋಗಿ. ಈ ಜಗತ್ತಿನಲ್ಲಿ ಯಾರೂ ಪರರಲ್ಲ; ಎಲ್ಲರಲ್ಲಿಯೂ ಒಂದೇ ಆತ್ಮದತ್ವವಿದೆ. ಇತರರ ಸುಖ- ದುಃಖಗಳನ್ನು ನಮ್ಮದೇ ಸುಖ-ದುಃಖಗಳಂತೆ ಕಾಣುವುದು ನಿಜವಾದ ಮಾನವೀಯತೆ ಎಂಬುದನ್ನು ಗೀತೆಯಲ್ಲಿಯೂ ಹೇಳಲಾಗಿದೆ. ಡಿವಿಜಿಯವರ ಈ ಪದ್ಯವು ವಿಶ್ವಮಾನವೀಯತೆಯ ಉನ್ನತ ಸಂದೇಶವನ್ನು ಸಾರುತ್ತದೆ. ಪರಬ್ರಹ್ಮನು ಮನುಷ್ಯನನ್ನು ಸೃಷ್ಟಿಸಿರುವ ಉದ್ದೇಶವು ಕೇವಲ ಸ್ವಾರ್ಥಪೂರ್ಣ ಜೀವನ ನಡೆಸುವುದಕಲ್ಲ; ಇತರರ ಸುಖ-ದುಃಖಗಳನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ಸಹಾನುಭೂತಿಯಿಂದ ಬದುಕುವುದನ್ನು ಕಲಿಯುವುದಾಗಿದೆ ಎಂಬುದನ್ನು ಕವಿ ತಿಳಿಸುತ್ತಾರೆ. ಸರಳವಾದ ಭಾಷೆಯಲ್ಲಿ ಆಳವಾದ ತಾತ್ವಿಕ ವಿಚಾರವನ್ನು ಹೇಳಿರುವುದು ಈ ಪದ್ಯದ ವಿಶೇಷತೆ. ಸ್ವಾರ್ಥ ಮತ್ತು ಭೇದ ಭಾವಗಳಿಂದ ಕೂಡಿದ ಸಮಾಜಕ್ಕೆ ಸಾನುಭೂತಿ ಸಮಾನತೆ ಮತ್ತು ವಿಶ್ವಬಂಧುತ್ವದ ಮೌಲ್ಯವನ್ನು ಈ ಪದ್ಯ ನೆನಪಿಸುತ್ತದೆ. ಹೀಗಾಗಿ ಇದು ಕೇವಲ ಕಗ್ಗ ಮಾತ್ರವಲ್ಲ; ಉತ್ತಮ ಮಾನವೀಯ ಬದುಕಿಗೆ ಮಾರ್ಗದರ್ಶನ ನೀಡುವ ಜೀವನ ದರ್ಶನವಾಗಿದೆ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads