Specials
ಮೌನ ಗುರು

ಆರತಿ ಕಡಗಂಚಿ
ಅಧ್ಯಾಪಕರು
ಸೋಮವಾರ, ಆಗಸ್ಟ್ 10, 20262 ನಿಮಿಷ ಓದು6 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಪುಸ್ತಕಗಳ ಸಂಖ್ಯೆ ಹೆಚ್ಚುತ್ತಿದೆ. ಗ್ರಂಥಾಲಯ ಗಳು ವಿಸ್ತರಿಸುತ್ತಿವೆ. ಡಿಜಿಟಲ್ ಜಗತ್ತಿನಲ್ಲಿ ಒಂದೇ ಕ್ಷಣದಲ್ಲಿ ಸಾವಿರಾರು ಪುಸ್ತಕಗಳು ನಮ್ಮ ಕೈ ಸೇರುತ್ತಿವೆ. ವಿಶ್ವವಿದ್ಯಾಲಯಗಳು ಪ್ರತಿವರ್ಷ ಸಾವಿರಾರು ಪದವೀಧರರನ್ನು ಸಮಾಜಕ್ಕೆ ನೀಡುತ್ತಿವೆ. ಆದರೂ ಒಂದು ಪ್ರಶ್ನೆ ಕಾಡುತ್ತಿದೆ. ಇಷ್ಟೆಲ್ಲ ಓದಿದ ಸಮಾಜದಲ್ಲಿ ಮಾನವೀಯತೆ ಏಕೆ ಕುಗ್ಗುತ್ತಿದೆ? ವಿವೇಕ ಏಕೆ ಕ್ಷೀಣಿಸುತ್ತಿದೆ? ಸಂಬAಧಗಳು ಏಕೆ ಸೊರಗುತ್ತಿವೆ? ಪಡೆದ ಪದವಿಗೆ ತಕ್ಕಂತೆ ಯಾಕೆ ಸಾಮರ್ಥ್ಯವಿಲ್ಲ? ವಿಶ್ವಾಸ ಎಲ್ಲಿ ಮಾಯವಾಗಿದೆ? ಎಂದು. ಬಹುಶಃ ಸಮಸ್ಯೆ ಓದಿನ ಕೊರತೆಯಲ್ಲ,ಓದಿನ ಉದ್ದೇಶದಲ್ಲಿದೆ. ಇಂದು ಓದುವುದು ಕೇವಲ ಉದ್ಯೋಗದ ಮೆಟ್ಟಿಲು. ಪರೀಕ್ಷೆಯ ಅಂಕ. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ. ಪದವಿ ಪ್ರಮಾಣಪತ್ರಗಳಿಗೆ ಮಿಸಲಾಗಿದೆ. ಇವೆಲ್ಲವೂ ಅಗತ್ಯವೇ ಸರಿ. ಆದರೆ ಇಷ್ಟರಲ್ಲೇ ಓದು ನಿಂತರೆ, ನಾವು ಜ್ಞಾನವನ್ನು ಗಳಿಸುವುದಿಲ್ಲ. ಕೇವಲ ಅರ್ಹತೆಯ ದಾಖಲೆಯನ್ನು ಮಾತ್ರ ಪಡೆಯುತ್ತೇವೆ.
ಡಿಗ್ರಿಗಳ ಪಡೆದವರ ಸಂಖ್ಯೆ ಹೆಚ್ಚಾಗಿದೆ.ಆದರೆ ಮನಸ್ಸಿನೊಳಗೆ ಪ್ರಶ್ನೆ ಕೇಳಿಕೊಳ್ಳುವ ಸಾಮರ್ಥ್ಯ ಹೆಚ್ಚಿದೆಯೇ? ಆತ್ಮಾವಲೋಕನ ಬೆಳೆದಿದೆಯೇ? ಇನ್ನೊಬ್ಬರ ನೋವ ಅರ್ಥಮಾಡಿಕೊಳ್ಳುವ ಸಂವೇದನೆ ಮೂಡಿದೆಯೇ? ಓದಿನ ನಿಜವಾದ ಫಲಿತಾಂಶ ಯಾವುದು?
ಓದು ಎಂದರೆ ಕಣ್ಣುಗಳಿಂದ ಅಕ್ಷರಗಳನ್ನು ದಾಟುವುದಲ್ಲ. ಮನಸ್ಸಿನಿಂದ ಅರ್ಥವನ್ನು ಹುಡುಕುವುದು. ಪುಸ್ತಕದ ಪುಟಗಳನ್ನು ಮುಚ್ಚಿದ ನಂತರವೂ ಅದರ ವಿಚಾರ ನಮ್ಮೊಳಗೆ ಜೀವಂತವಾಗಿದ್ದರೆ, ಅದು ನಿಜವಾದ ಓದು. ನಮ್ಮ ತಪ್ಪುಗಳನ್ನು ತೋರಿಸಿ, ನಮ್ಮ ಅಹಂಕಾರವನ್ನು ಕರಗಿಸಿ,ನಮ್ಮ ಚಿಂತನೆಯ ದಿಕ್ಕು ಬದಲಿಸಿದರೆ, ಆಗ ಪುಸ್ತಕದ ಓದು ನಿಜ ಸಾರ್ಥಕತೆ ತಂದAತೆ. ಓದು ಇತರರನ್ನು ಟೀಕಿಸುವುದಕ್ಕಿಂತ ಮೊದಲು ನಮ್ಮನ್ನು ನಾವು ಪರಿಶೀಲಿಸಿಕೊಳ್ಳಲು ಪ್ರೇರೇಪಿಸಬೇಕು. ಇದೇ ಆತ್ಮಾವಲೋಕನ. ನಿಜವಾದ ಓದು ಪುಸ್ತಕ ಮುಗಿದಾಗ ಕೊನೆಗೊಳ್ಳುವುದಿಲ್ಲ.
ಬದುಕಿನಲ್ಲಿ ಅದರ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಆರಂಭವಾಗುತ್ತದೆ. ಇಂದಿನ ಂI ಯುಗದಲ್ಲಿ ತಿಳಿದುಕೊಳ್ಳುವುದು ಸುಲಭ. ಆದರೆ ತಿಳಿದದ್ದನ್ನು ಬದುಕಾಗಿ ರೂಪಿಸಿಕೊಳ್ಳುವುದು ಕಷ್ಟ. ಮಾಹಿತಿಯ ಹೊಳೆ ಜಗತ್ತನ್ನು ತುಂಬಿದೆ. ಜ್ಞಾನದ ಬುಗ್ಗೆ ಮಾತ್ರ ಇನ್ನೂ ಅಪರೂಪವಾಗಿದೆ. ಮಾಹಿತಿ ನೆನಪನ್ನು ತುಂಬಲಿ, ಜ್ಞಾನ ವ್ಯಕ್ತಿತ್ವವನ್ನು ರೂಪಿಸಬೇಕು.
ಸ್ವಾಮಿ ವಿವೇಕಾನಂದರು ಹೇಳಿದಂತೆ, “ಶಿಕ್ಷಣವೆಂದರೆ ಮನುಷ್ಯನೊಳಗಿರುವ ಪರಿಪೂರ್ಣತೆಯನ್ನು ಹೊರತರಿಸುವ ಪ್ರಕ್ರಿಯೆ.” ಆ ಪರಿಪೂರ್ಣತೆಯನ್ನು ಅಂಕಪಟ್ಟಿ ಅಳೆಯುವುದಿಲ್ಲ. ಡಿಗ್ರಿಯೂ ಅಳೆಯುವುದಿಲ್ಲ. ಅದನ್ನು ಅಳೆಯುವುದು ನಮ್ಮ ಚಿಂತನೆ, ಮೌಲ್ಯಗಳು ಮತ್ತು ಬದುಕಿನ ನಡೆ.
ಇಂದು ಅತ್ಯಂತ ಅಗತ್ಯವಾದುದು ವೇಗವಾಗಿ ಓದುವ ಸಾಮರ್ಥ್ಯವಲ್ಲ, ಆಳವಾಗಿ ಓದುವ ಮನೋಭಾವ. ಓದಿದ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ವಿವೇಕ. ಏಕೆಂದರೆ ಪುಸ್ತಕಗಳು ಜೀವನ ಬದಲಾಯಿಸುವುದಿಲ್ಲ. ಪುಸ್ತಕಗಳಿಂದ ಬದಲಾಗುವ ಮನಸ್ಸು ಜೀವನವನ್ನು ಬದಲಾಯಿಸುತ್ತದೆ.
ಇಂದು ನಾವು ಸಾಮಾಜಿಕ ಜಾಲತಾಣಗಳಲ್ಲಿ ಗಂಟೆಗಟ್ಟಲೆ ಓದುತ್ತೇವೆ. ಆದರೆ ಓದಿದ ವಿಷಯ ಎಷ್ಟು ಹೊತ್ತು ಮನಸ್ಸಿನಲ್ಲಿ ಉಳಿಯುತ್ತದೆ? ಎಷ್ಟು ವಿಚಾರಗಳು ನಮ್ಮ ಬದುಕು ಉತ್ತಮಗೊಳಿಸುತ್ತಿವೆ? ಇದು ನಮ್ಮ ನಿಮ್ಮೇಲ್ಲರಿಗೂ ತಿಳಿದ ವಿಷಯವೇ ಆಗಿದೆ.
ಪುಸ್ತಕಗಳು ಮೌನ ಗುರುಗಳು. ಅವು ಬೈಯುವುದಿಲ್ಲ, ಬಲವಂತ ಮಾಡುವುದಿಲ್ಲ, ಆದರೆ ಬದುಕಿನ ಸತ್ಯಗಳನ್ನು ಅತ್ಯಂತ ಸರಳವಾಗಿ ತಿಳಿಸುತ್ತವೆ. ಮಹನೀಯರ ಜೀವನಚರಿತ್ರೆಗಳು ಸೋಲಿನ ನಂತರ ಎದ್ದು ನಿಲ್ಲುವುದನ್ನು ಕಲಿಸುತ್ತವೆ. ತತ್ವಜ್ಞಾನಿಗಳ ಬರಹಗಳು ಜೀವನದ ಅರ್ಥವನ್ನು ತಿಳಿಸುತ್ತವೆ. ಸಾಹಿತ್ಯ ಕೃತಿಗಳು ಹೃದಯವನ್ನು ಮೃದುಗೊಳಿಸುತ್ತವೆ. ಇತಿಹಾಸ ಭವಿಷ್ಯವನ್ನು ರೂಪಿಸುವ ಜಾಣ್ಮೆಯನ್ನು ನೀಡುತ್ತದೆ.“ಪುಸ್ತಕಗಳು ಸಮಯವನ್ನು ಕೊಲ್ಲುವುದಿಲ್ಲ. ಅಜ್ಞಾನವನ್ನು ಕೊಲ್ಲುತ್ತವೆ.ಗಡಿಯಾರದ ಮುಳ್ಳುಗಳು ಸಾಗುತ್ತವೆ ಎಂಬ ಕಾರಣಕ್ಕೆ ಜೀವನ ಮುಂದುವರಿಯುವುದಿಲ್ಲ. ಪ್ರತಿದಿನ ನಮ್ಮ ಚಿಂತನೆ ಬೆಳೆಯಬೇಕು, ಅರಿವು ವಿಸ್ತರಿಸಬೇಕು, ವ್ಯಕ್ತಿತ್ವ ಅರಳಬೇಕು. ಅದಕ್ಕೆ ಓದು ಅತ್ಯಂತ ಪರಿಣಾಮಕಾರಿ ಸಾಧನ.
ಕಾಲ ಕಳೆಯಲು ಓದಿದರೆ ಪುಸ್ತಕ ಮುಗಿಯುತ್ತದೆ.ಜ್ಞಾನಕ್ಕಾಗಿ ಓದಿದರೆ ಅಜ್ಞಾನ ಮುಗಿಯುತ್ತದೆ. ಮನರಂಜನೆಗಾಗಿ ಓದಿದರೆ ಕೆಲವು ಕ್ಷಣಗಳ ಸಂತೋಷ ಸಿಗುತ್ತದೆ. ಆತ್ಮಾವಲೋಕನಕ್ಕಾಗಿ ಓದಿದರೆ ಜೀವನಪೂರ್ತಿ ದಾರಿದೀಪವಾಗುವ ಅರಿವು ಸಿಗುತ್ತದೆ. ಉತ್ತಮ ಪುಸ್ತಕಗಳು ಉತ್ತರಗಳನ್ನು ಮಾತ್ರ ಕೊಡುವುದಿಲ್ಲ. ಉತ್ತಮ ಪ್ರಶ್ನೆಗಳನ್ನು ಕೇಳಲು ಕಲಿಸುತ್ತವೆ. ನನ್ನ ಬದುಕಿನ ಗುರಿ ಏನು? ನನ್ನ ದುರ್ಬಲತೆಗಳೇನು? ನನ್ನ ಶಕ್ತಿಗಳು ಯಾವುವು? ನಾನು ಯಾರಿಗಾಗಿ ಬದುಕುತ್ತಿದ್ದೇನೆ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮನೋಭಾವ ಬೆಳೆಸುತ್ತದೆ.
ಒಬ್ಬ ವ್ಯಕ್ತಿಯ ಸಂಪತ್ತು ಕಳೆದುಹೋದರೆ ಮತ್ತೆ ಗಳಿಸಬಹುದು. ಆದರೆ ಕಳೆದುಹೋದ ಚಿಂತನೆಯ ಸಮಯವನ್ನು ಮರಳಿ ತರಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿದಿನ ಕೆಲವು ನಿಮಿಷಗಳಾದರೂ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಪುಸ್ತಕಗಳೊಂದಿಗೆ ಕಳೆಯೋಣ.ಓದಿನ ಗುರಿ ಕೇವಲ ಉದ್ಯೋಗವಲ್ಲ, ಅದರೂಂದಿಗೆ ಆತ್ಮಜ್ಞಾನವಾಗಬೇಕು; ಕೇವಲ ಪದವಿಯಲ್ಲ, ಜೊತೆಗೆ ವ್ಯಕ್ತಿತ್ವದ ಬೆಳವಣಿಗೆಯಾಗಬೇಕು. ಓದಿನ ಮೂಲಕ ಸ್ವ ಸಾಮರ್ಥ್ಯ ಮೂಡಿದಾಗ, ಆತ್ಮವಿಶ್ವಾಸ ಚಿಗುರೊಡೆದು ಅಂದುಕೊAಡ ಗುರಿಯೆಡೆಗೆ ಸಾಗಲು, ಸನ್ನದ್ಧನಾಗಲು ಪ್ರೇರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಇಂದೇ ಪ್ರಾರಂಭಿಸೋಣ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads