📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Kalaburagi

ಎಸ್‌ಐಆರ್ ಅಕ್ರಮ: ಜ್ಞಾನೇಶಕುಮಾರ್ ವಜಾಕ್ಕಾಗಿ ಧರಣಿ

ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಶುಕ್ರವಾರ, ಅಕ್ಟೋಬರ್ 2, 20262 ನಿಮಿಷ ಓದು6 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಎಸ್‌ಐಆರ್ ಅಕ್ರಮ: ಜ್ಞಾನೇಶಕುಮಾರ್ ವಜಾಕ್ಕಾಗಿ ಧರಣಿ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಕಲಬುರ್ಗಿ, ಅ.೨- ಹಲವು ಅಕ್ರಮ ಗಳನ್ನು ನಡೆಸಿರುವ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶಕುಮಾರ ಅವರನ್ನು ವಜಾಗೊಳಿಸಿ. ಎಸ್‌ಐಆರ್ ನಿಲ್ಲಿಸಿ, ತಪ್ಪಾಗಿ ಹೊರಗಿಡಲಾದವರ ಮತದಾನ ಹಕ್ಕುಗಳನ್ನು ಮರುಸ್ಥಾಪಿಸಿ. ಭಾರತ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಒತ್ತಾಯಿಸಿ ನಗರದ ಟೌನ್ ಹಾಲ್ ಮುಂದಿರುವ ಮಹಾತ್ಮಾಗಾಂಧೀಜಿ ಪ್ರತಿಮೆಯ ಮುಂದೆ ಮಹಾತ್ಮಾ ಗಾಂಧೀ ಜಯಂತಿ ಶುಕ್ರವಾರದಂದು ನಾಗರಿಕರ ಹಕ್ಕುಗಳ ರಕ್ಷಣಾ ಆಂದೋಲನದ ಕಾರ್ಯಕರ್ತರು ಸತ್ಯಾಗ್ರಹ ಮಾಡಿದರು. ಪ್ರತಿಭಟನೆಯಲ್ಲಿ ಸಲೀಂ ಅಹ್ಮದ್ ಚಿತ್ತಾಪುರ, ಡಾ. ಮಹೇಶಕುಮಾರ್ ರಾಠೋಡ್, ಕೆ. ನೀಲಾ, ಅಫಜಲ್ ಮಹಿಮೂದ್, ಶರಣಬಸಪ್ಪ ಮಮಶೆಟ್ಟಿ, ಮಹೇಶ್ ಎಸ್.ಬಿ., ಅಬ್ದುಲ್ ಜಬ್ಬಾರ್ ಮುಂತಾದವರು ಪಾಲ್ಗೊಂಡಿದ್ದರು. ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಎತ್ತಿದ ಸಮಸ್ಯೆಗಳ ಕುರಿತು ಸೆಪ್ಟೆಂಬರ್ ೨೩ ರಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು, ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧೀನದಲ್ಲಿ ಚುನಾವಣಾ ಆಯೋಗ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತವೆ. ಇವು ಕೇವಲ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಶೀಲನೆ (ಎಸ್‌ಐಆರ್)ಗೆ ಸೀಮಿತವಲ್ಲ. ಭಾರತ ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಮತ್ತು ಸಮಗ್ರತೆಯ ಬಗ್ಗೆಯೂ ಗಂಭೀರ ಆತಂಕಗಳನ್ನು ಎತ್ತುತ್ತವೆ. ಅವು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯ ವಿರುದ್ಧ ದೋಷಾರೋಪಣೆಯಾಗಿದೆ ಮತ್ತು ಆ ಕಚೇರಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದು ದೂರಿದರು. ಮೂವರಲ್ಲಿ ಇಬ್ಬರು ಚುನಾವಣಾ ಆಯುಕ್ತರು ಕನಿಷ್ಠ ೧೪ ಸಂದರ್ಭಗಳಲ್ಲಿ ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ ಮತ್ತು ಮರುಸ್ಥಾಪನೆ, ಹಾಗೂ ಎಸ್‌ಐಆರ್ ನಡವಳಿಕೆಗೆ ಸಂಬಂಧಿಸಿದ ನಿರ್ಧಾರಗಳಿಗೆ ಆಕ್ಷೇಪಗಳನ್ನು ದಾಖಲಿಸಿದ್ದಾರೆ. ತಮ್ಮ ಒಪ್ಪಿಗೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಗಂಭೀರ ಆತಂಕಗಳನ್ನೂ ವ್ಯಕ್ತಪಡಿಸಿದ್ದಾರೆ. ಈಗ ಬಹಿರಂಗೊಂಡಿರುವ ಅಂಶಗಳು ವಿರೋಧ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ಪದೇ ಪದೇ ಎತ್ತಿದ ಆತಂಕಗಳನ್ನು ದೃಢಪಡಿಸುತ್ತವೆ ಮತ್ತು ಎಸ್‌ಐಆರ್ ಹಾಗೂ ಮತದಾರರ ಪಟ್ಟಿ ನಿರ್ವಹಣೆ ಪಾರದರ್ಶಕ ಹಾಗೂ ವಿಕೇಂದ್ರೀಕೃತ ಎಂಬ ಹೇಳಿಕೆಗಳ ಟೊಳ್ಳುತನವನ್ನು ಬಯಲು ಮಾಡುತ್ತವೆ ಎಂದು ಅವರು ಆರೋಪಿಸಿದರು. ಆ ಇಬ್ಬರು ಆಯುಕ್ತರು ಮತದಾರರ ಡೇಟಾಬೇಸನ್ನು ಕ್ರಮೇಣ ಕೇಂದ್ರೀಕರಣ ಮತ್ತು ರಾಜ್ಯ ಹಾಗೂ ಕ್ಷೇತ್ರ ಮಟ್ಟದ ಶಾಸನಬದ್ಧ ಅಧಿಕಾರಿಗಳ ಪ್ರವೇಶದ ಮೇಲಿನ ನಿಭರ್‌ಂಧಗಳನ್ನು ನಿರ್ದಿಷ್ಟವಾಗಿ ಎತ್ತಿ ತೋರಿಸಿದ್ದಾರೆ. ಇದರ ಪರಿಣಾಮಗಳು ಕೇವಲ ಆಡಳಿತಾತ್ಮಕವಲ್ಲ. ಉದಾಹರಣೆಗೆ ಗೋವಾದಲ್ಲಿ, ೯೭ ಮತದಾರರನ್ನು ಅರ್ಹರು ಎಂದು ಗುರುತಿಸಿದ ತಮ್ಮ ನಿರ್ಧಾರಗಳನ್ನು ದಾಖಲಿಸದಂತೆ ತಂತ್ರಾಂಶ ನಿರ್ಬಂಧಗಳು ಚುನಾವಣಾ ನೋಂದಣಿ ಅಧಿಕಾರಿಗಳನ್ನು ತಡೆದವು ಎಂದು ವರದಿಯಾಗಿದೆ. ಯಾವುದೇ ಮತದಾರರ ಕುರಿತು ಆಕ್ಷೇಪಗಳಿದ್ದರೆ, ಅದನ್ನು ಸಲ್ಲಿಸಲು ಇರುವ ಅರ್ಜಿ ನಮೂನೆ ೭ ರ ಮೂಲಕ ಕೆಲವು ದೇಶವಿರೋಧಿ ಶಕ್ತಿಗಳು ದೇಶದ ಸಹ ನಾಗರೀಕರ ಬಗ್ಗೆ ತಪ್ಪಾಗಿ ಆಕ್ಷೇಪಣೆಗಳನ್ನು ಸಲ್ಲಸಿದ್ದು, ವ್ಯವಸ್ಥಿತ ಸಂಚಿನ ಭಾಗವಾಗಿರುವಂತೆ ಸ್ಪಷ್ಟವಾಗುತ್ತದೆ. ಆದ್ದರಿಂದ ಈ ವಿಷಯ ಎಸ್‌ಐಆರನ್ನು ಮೀರಿ ಬಹಳ ದೂರ ಹೋಗುತ್ತದೆ ಎಂದು ಅವರು ತಿಳಿಸಿದರು. ಇದು ಭಾರತ ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ, ಹಾಗೂ ಸಾರ್ವತ್ರಿಕ ವಯಸ್ಕ ಮತದಾನದ ಮೂಲಭೂತ ಪ್ರಜಾಸತ್ತಾತ್ಮಕ ತತ್ವದ ರಕ್ಷಣೆಗೆ ಸಂಬಂಧಿಸಿದೆ. ಮತದಾನದ ಹಕ್ಕನ್ನು ಅಪಾರದರ್ಶಕ, ಕೇಂದ್ರೀಕೃತ ನಿಯಂತ್ರಿತ ಪ್ರಕ್ರಿಯೆಗಳ ಮೇಲೆ ಅವಲಂಬಿತಗೊಳಿಸುವ ಯಾವುದೇ ವ್ಯವಸ್ಥೆ ಚುನಾವಣಾ ವ್ಯವಸ್ಥೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುತ್ತದೆ. ಭಾರತ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಸ್ವಾತಂತ್ರ‍್ಯ ಇಷ್ಟು ಕೆಳಮಟ್ಟಕ್ಕೆ ಎಂದೂ ಇಳಿದಿರಲಿಲ್ಲ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವ್ಯವಸ್ಥೆಯನ್ನು ಕೆಟ್ಟದಾಗಿ ನಿರ್ವಹಿಸಿ ಸಂಸ್ಥೆಯಲ್ಲಿ ಜನರ ವಿಶ್ವಾಸವನ್ನು ಕುಗ್ಗಿಸಿದ್ದಕ್ಕೆ ಹೊಣೆಗಾರರಾಗಬೇಕು ಎಂದು ಅವರು ಹೇಳಿದರು. ಜ್ಞಾನೇಶ್‌ಕುಮಾರ ಅವರನ್ನು ಅಧಿಕಾರದಿಂದ ತೆಗೆದು ಹಾಕಬೇಕು. ಎಸ್‌ಐಆರ್ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಮತದಾರರ ಪಟ್ಟಿಯಿಂದ ತಪ್ಪಾಗಿ ಹೊರಗಿಡಲಾದ ಎಲ್ಲರ ಮತದಾನ ಹಕ್ಕುಗಳನ್ನು ಮರುಸ್ಥಾಪಿಸಬೇಕು. ಭಾರತ ಚುನಾವಣಾ ಆಯೋಗದ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ಮರುಸ್ಥಾಪಿಸಬೇಕು. ಚುನಾವಣಾ ಆಯುಕ್ತರ ನೇಮಕದ ಪ್ರಸ್ತುತ ವ್ಯವಸ್ಥೆಯನ್ನು ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪ್ರಸ್ತಾವಿತ ಆಯ್ಕೆ ಪ್ರಕ್ರೀಯೆಯಾಗಿ ಬದಲಾಯಿಸಬೇಕು. ಅರ್ಜಿ ನಮೂನೆ ೭ರ ಮೂಲಕ ಆಕ್ಷೇಪ ಗಳನ್ನು ಸಲ್ಲಿಸಿರುವವರು ಯಾರು? ಮತ್ತು ಅವರು ಆ ರೀತಿ ಆಕ್ಷೇಪಗಳನ್ನು ಸಲ್ಲಿಸಿರುವದರ ಹಿನ್ನಲೆಯ ಕುರಿತು ಸಮಗ್ರ ತನಿಖೆಯಾಗಿ, ಸಹ ನಾಗರೀಕರ ಮತದಾನದ ಹಕ್ಕುಗಳನ್ನು ಹಾಗೂ ಆ ಮೂಲಕ ಅವರ ನಾಗರೀಕ ಹಕ್ಕುಗಳಿಗೆ ಧಕ್ಕೆ ಮಾಡಿರುವದಕ್ಕಾಗಿ ಅವರೆಲ್ಲರ ವಿರುದ್ಧ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads