Specials
ಸವಿ ನೆನಪಿನ ಹಿನ್ನೋಟದ ಬುತ್ತಿ

- ಬಸವರಾಜ ಚಿನಿವಾರ
ಹಿರಿಯ ಪತ್ರಕರ್ತರು
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು4 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಯಾದವಾಡದಲ್ಲಿ ಜಿಎನ್ಎಸ್ ಪ್ರೌಢಶಾಲೆಯಲ್ಲಿ ೧೯೮೪ರ ಸಾಲಿನ ಹಳೆಯ ವಿದ್ಯಾರ್ಥಿಗಳ ಸಭೆ ನಾಳೆ
ಅರ್ಥಪೂರ್ಣ ಗುರುಪೂರ್ಣಿಮೆಗೆ ನಿರ್ಧಾರ..!
ಸಹಪಾಠಿ ವಿದ್ಯಾರ್ಥಿನಿಯರ ಸವಿನೆನಪಿನ ಹಿನ್ನೋಟದ ಬುತ್ತಿ..!
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಯಾದವಾಡದ ಗ್ರಾಮದ ಶ್ರೀ ಗುರುನೀಲಕಂಠ ಸ್ವಾಮಿ ಪ್ರೌಢಶಾಲೆಯ ೧೯೮೪ರ ಸಾಲಿನ ಹಳೆಯ ವಿದ್ಯಾರ್ಥಿಗಳು ಸೇರಿ ಅರ್ಥಪೂರ್ಣ ಗುರುಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಆ ನಿಮಿತ್ಯ ಇದೇ ಸೆಪ್ಟೆಂಬರ್ ೬ರಂದು ಬೆಳಿಗ್ಗೆ ಹತ್ತು ಗಂಟೆಗೆ ಗ್ರಾಮದ ಜಿಎನ್ಎಸ್ ಪ್ರೌಢಶಾಲೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಭೆ ಜರುಗಲಿದೆ.
೧೯೮೪ರ ಸಾಲಿನಲ್ಲಿ ಸುಮಾರು ೭೯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದು, ಅವರಲ್ಲಿ ೧೫ ಜನ ವಿದ್ಯಾರ್ಥಿಗಳು ನಿಧನರಾಗಿದ್ದಾರೆ. ಎಲ್ಲ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಅಭಿನಂದಿಸಲು ಗುರುಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ನಿಮಿತ್ಯ ಸರ್ವ ಸಹಪಾಠಿಗಳ ಸಿಹಿ ನೆನಪುಗಳನ್ನು ಪತ್ರಿಕೆಯ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಮೊದಲಿಗೆ ನನ್ನ ಸಹಪಾಠಿ ವಿದ್ಯಾರ್ಥಿನಿಯರ ಕುರಿತು ಸಿಹಿ ನೆನಪಿನ ಹಿನ್ನೋಟದ ಬುತ್ತಿ ಅಂಕಣದ ಮೂಲಕ ಸವಿ ನೆನಪುಗಳನ್ನು ಮೆಲುಕು ಹಾಕಿದ್ದೇನೆ.
ನನ್ನ ಇಡೀ ಮೂರು ವರ್ಷಗಳ ಶಾಲಾ ದಿನಗಳಲ್ಲಿ ಪ್ರತಿಯೊಬ್ಬ ಸಹೋದರಿಯನ್ನು ಕಂಡ ಕುರಿತು ಆ ಸಂದರ್ಭದಲ್ಲಿನ ಸವಿ ನೆನಪುಗಳನ್ನು ಹಂಚಿಕೊಳ್ಳುವೆ. ಬೀಳ್ಕೊಡುಗೆ ಸಮಾರಂಭದಲ್ಲಿನ ಫೋಟೋದಲ್ಲಿ ಇರುವ ರೀತಿಯಲ್ಲಿ ಎಡದಿಂದಲೇ ನನ್ನ ಸಹೋದರಿಯರನ್ನು ನೆನಪಿಸಿಕೊಳ್ಳಲು ಹರ್ಷವೆನಿಸುತ್ತದೆ. ಕು. ಸುನಂದಾ ಕೊನೆಸಾಗರ್ ಅವರಿಗೆ ನಾವೆಲ್ಲ ಪ್ರೀತಿಯಿಂದ ಅವಿ ಎಂದಲೇ ಕರೆಯುತ್ತವೆ. ಅವರ ಅವ್ವ ನನಗೆ ಚಿಗವ್ವ. ಅವರ ಮನೆತನ ಬೇರೆ ಅಲ್ಲ, ನನ್ನ ಮನೆತನ ಬೇರೆ ಅಲ್ಲ. ಅಷ್ಟೊಂದು ಕೊನೆಸಾಗರ್ ಮತ್ತು ಚಿನಿವಾರ ಮನೆತನದ ಬಾಂಧವ್ಯ ಈಗಲೂ ಸಹ ಇದೆ. ಅವಿ ಬಹಳ ಬುದ್ದಿವಂತೆ. ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡವಳು. ಅವರು ಕೇವಲ ಪ್ರೌಢಶಾಲೆಯಲ್ಲಿ ಮೂರು ವರ್ಷ ಅಷ್ಟೇ ಅಲ್ಲ, ಬಾಲ್ಯಾವಸ್ಥೆಯಿಂದಲೂ ನಾನು ಅವರನ್ನು ಬಲ್ಲೆ. ಅವರು ತಂದೆ, ತಾಯಿ ಮೇಲೆ, ಅದರಲ್ಲೂ ತಾಯಿಯ ಮೇಲೆ ಹೊಂದಿದ್ದ ಪ್ರೀತಿ ನನಗಂತೂ ಮಾದರಿಯಾಗಿತ್ತು. ವೈವಾಹಿಕ ಜೀವನದ ನಂತರ ನನಗೆ ಅವರ ಸಂಪರ್ಕ ತಪ್ಪಿತು. ಆದಾಗ್ಯೂ, ಅವರ ರೀತಿ, ನೀತಿ, ನಡತೆ ಮನಸ್ಸಿನಲ್ಲಿ ಹಚ್ಚಹಸಿರಾಗಿತ್ತು. ನಂತರದ ದಿನಮಾನಗಳಲ್ಲಿ ಅವರೊಂದಿಗಿನ ನಿಕಟ ಸಂಪರ್ಕ ತಪ್ಪಿತು.
ಇತ್ತೀಚೆಗೆ ನಾನು ಯಾದವಾಡದ ಮನೆಯ ಮುಂದೆ ಕುಳಿತಿದ್ದೆ. ಆ ಸಂದರ್ಭದಲ್ಲಿ ಅವಿ ಅವಸರದಿಂದ ನನ್ನ ಮುಂದೆ ನನಗೆ ನೋಡುತ್ತ ಹಾದು ಹೋದಳು. ಯಾಕೋ ಮಾತನಾಡಿಸಲಿಲ್ಲ ಎಂದು ಗೊಣಗಿಕೊಂಡೆ. ಯಾಕೆ ಹೀಗೆ ಮಾಡಿದಳು ಎಂದು ಅಸಮಾಧಾನದಿಂದ ಪಕ್ಕದಲ್ಲಿ ಕುಳಿತ ವ್ಯಕ್ತಿಯ ಮುಂದೆ ಹೇಳಿದೆ. ಆ ವ್ಯಕ್ತಿ ಹೋಗಿ ಅವಿ ಅವರಿಗೆ ಹೇಳಿರಬೇಕು. ಎರಡು ನಿಮಿಷದಲ್ಲಿಯೇ ಅವಿ ಮರಳಿ ನನ್ನ ಹತ್ತಿರ ಬಂದಳು. ಯಾಕೋ ಬಸು ನಿನಗೆ ನಾನು ಮಾತನಾಡಿಸಲಿಲ್ಲ ಎಂದಿಯAತೆ ಎಂದಳು. ಹೌದು ಎಂದೆ. ನೀನು ಯಾಕೆ ಮಾತನಾಡಿಸಲಿಲ್ಲ? ಎಂದು ನನಗೆ ಕೇಳಿದಳು. ನೀನು ಅವಸರದಲ್ಲಿ ಇದ್ದೆ. ಹಾಗಾಗಿ ಮಾತನಾಡಿಸಲು ಆಗಲಿಲ್ಲ ಎಂದೆ. ಆಗ ಆಕೆ ನೀನು ಮಾತನಾಡಿಸುತ್ತಿ ಎಂದು ನಾನು ಬಿಟ್ಟೆ ಎಂದಳು. ನಿಜವಾಗಿಯೂ ಆಕೆಯ ಮೇಲೆ ಇದ್ದ ಅಭಿಮಾನ ನನಗೆ ಹೆಚ್ವಾಯಿತು.
ಶ್ರೀಮತಿ ಅವಿ ಕೊನೆಸಾಗರ್ ತನ್ನ ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ತನ್ನ ಅವ್ವನಿಗೆ ಜೀವ ಇರುವವರೆಗೂ ತನ್ನ ಮಗುವಿನ ರೀತಿಯಲ್ಲಿ ಸಲುಹಿದಳು. ನನ್ನ ಅವ್ವನಿಗೆ ಶ್ರೀಮತಿ ಅವಿ ಕೊನೆಸಾಗರ್ ಅವರ ರೀತಿಯಲ್ಲಿಯೇ ಸಲುಹಬೇಕೆಂದುಕೊAಡೆ. ಅದಕ್ಕಾಗಿ ನಾನು ಕಲಬುರ್ಗಿಯಲ್ಲಿನ ನನ್ನ ಶ್ರೀಮತಿ ಹಾಗೂ ನನ್ನ ಮಕ್ಕಳನ್ನು ಬಿಟ್ಟು ಮೂರು ವರ್ಷಗಳ ಕಾಲ ನನ್ನೂರು ಯಾದವಾಡದಲ್ಲಿ ಇದ್ದೆ. ಮೂರು ವರ್ಷಗಳ ಕಾಲ ನನ್ನ ತಾಯಿಯನ್ನು ಶ್ರೀಮತಿ ಅವಿ ಕೊನೆಸಾಗರ್ ತನ್ನ ಅವ್ವನಿಗೆ ನೋಡಿಕೊಂಡ ರೀತಿಯಲ್ಲಿಯೇ ಕಾಳಜಿ ವಹಿಸಿದೆ. ನನ್ನ ದುರಾದೃಷ್ಟ ನನ್ನ ಅವ್ವ ನನ್ನಿಂದ ಶಾಶ್ವತವಾಗಿ ಅಗಲಿದರು. ಅದೇ ರೀತಿ ಇತ್ತೀಚೆಗೆ ಅವಿ ಅವರ ಅವ್ವ ಸಹ ನಮ್ಮಿಂದ ಅಗಲಿದರು. ಆ ಸಂದರ್ಭದಲ್ಲಿ ನನೂ ಸಹ ಯಾದವಾಡದಲ್ಲಿ ಇರಲಿಲ್ಲ. ಆದರೂ ಸಹ ಇಡೀ ಊರಿನ ಜನರು ಮಾತ್ರ ಅವಿ ತನ್ನ ಅವ್ವನಿಗೆ ಸಲುಹಿದ ರೀತಿಯನ್ನು ಕೊಂಡಾಡಿದರು.
ಇನ್ನು ಮಹಾದೇವಿ ಪೂಜಾರ್ ಅವರು ಪಕ್ಕದ ಮನೆಯವರು. ನಾನು ಅವರ ಅವ್ವನಿಗೆ ಚಿಗವ್ವ ಎಂದೇ ಕರೆಯುತ್ತೇನೆ. ಅವರ ದೊಡ್ಡವ್ವ ಶ್ರೀಮತಿ ಈರವ್ವ ಅವರಿಗೆ ನಾನು ಅವ್ವ ಎನ್ನುತ್ತೇನೆ. ನನಗೆ ಮೂವರು ಅವ್ವಗಳು. ಮೊದಲು ನನ್ನ ಹಡೆದವ್ವ. ಎರಡನೇಯದು ನನ್ನ ಆಚೆ ಮನೆಯ ಚಿಕ್ಕಮ್ಮನಿಗೂ ಸಹ ನಾನು ಯಾವಾಗಲೂ ಅವ್ವ ಎಂದೇ ಕರೆಯುತ್ತೇನೆ. ಅದೇ ರೀತಿ ಮಹಾದೇವಿ ಅವರ ದೊಡ್ಡವ್ವನಿಗೂ ಸಹ ನಾನು ಅವ್ವ ಎಂದೇ ಕರೆಯುತ್ತೇನೆ. ನನ್ನ ಎರಡೂ ಚಿನಿವಾರ ಮನೆತನಕ್ಕೂ ಈರಕ್ಕವ್ವನಿಗೂ ಬಿಡಿಸಲಾಗದ ನಂಟು. ನನ್ನ ಎರಡೂ ಮನೆಯ ಸಹೋದರ, ಸಹೋದರಿಯರೂ ಸಹ ಈರವ್ವ ಅವರಿಗೆ ಅವ್ವ ಎಂದೇ ಈಗಲೂ ಸಹ ಕರೆಯುತ್ತಾರೆ.
ನಮ್ಮ ಎರಡೂ ಮನೆಗಳಲ್ಲಿ ಊಟ, ತಿಂಡಿ ಇರದೇ ಇದ್ದರೂ ಸಹ ನಾವು ಬೇರೆ ಎಲ್ಲಿಯೂ ಹೋಗುತ್ತಿರಲಿಲ್ಲ. ನೇರವಾಗಿ ಈರಕ್ಕವ್ವನ ಮನೆಗೇ ಹೋಗುವುದು. ಹೊತ್ತು, ಗೊತ್ತಿಲ್ಲದೇ ಹೋದರೂ ಸಹ ಹೊಟ್ಟೆ ತುಂಬ ಊಟ, ನಾಷ್ಟಾ, ಚಹಾ ಯಾವಾಗಲೂ ಸಿಗುತ್ತಿತ್ತು. ನನ್ನ ಹಳೆಯ ಮನೆ ಹಿತ್ತಿಲಿಗೆ ಹೊಂದಿಕೊAಡAತೆ ಅವರ ಮನೆ ಇದೆ. ಮೊದಲು ನಮ್ಮ ಹಿತ್ತಿಲಿನ ಅವರ ಮನೆಯ ಮಧ್ಯೆ ಗೋಡೆ ಇರಲಿಲ್ಲ. ಹೀಗಾಗಿ ಈರಕ್ಕವ್ವ ನಮ್ಮ ಮನೆಗೆ ಅಲ್ಲಿಂದಲೇ ಬರುವುವುದು ಹೋಗುವುದು ಮಾಡುತ್ತಿದ್ದರು. ಯಾವಾಗ ಅಡ್ಡ ಗೋಡೆ ಬಿತ್ತೋ ಆವಾಗಿನಿಂದ ಅವರು ನಮ್ಮ ಮನೆಗೆ ಸುತ್ತುವರಿದು ಬರುತ್ತಿದ್ದರು.
ಮಹಾದೇವಿ ಅವರ ತಂದೆ ಶಿಕ್ಷಕರು. ನನ್ನ ಚಿಗವ್ವನ ಊರು ಮೆಣಸಿಗಿಯ ಶಾಲೆಯಲ್ಲಿಯೇ ಅವರು ಶಿಕ್ಷಕರು. ನನ್ನ ಶಾಲಾ ಬಿಡುವಿನ ಸಮಯದಲ್ಲಿ ನಾನು ನನ್ನ ಚಿಗವ್ವನ ಊರು ಮೆಣಸಿಗೆಗೆ ಹೋಗುತ್ತಿದ್ದೆ. ಆ ಸಂದರ್ಭಲ್ಲಿ ಮಹಾದೇವಿ ಅವರ ಅಪ್ಪ ಅವರಿಗೆ ಶಾಲೆಯಲ್ಲಿಯೇ ಭೇಟಿ ಮಾಡುತ್ತಿದ್ದರು. ಒಂದು ದಿನ ಬಸು ಅಸೂಟಿಗೆ ಹೋಗೋಣ ಎಂದರು. ನಾನೂ ಒಪ್ಪಿಕೊಂಡೆ. ಇಬ್ಬರೂ ಸೇರಿ ಮೆಣಸಗಿಯಿಂದ ಅಡ್ಡ ದಾರಿಯಲ್ಲಿ (ಸುಮಾರು ಐದು ಕಿ.ಮೀ. ಅಂತರ) ಕಾಲ್ನಡಿಗೆಯಲ್ಲಿಯೇ ಹೋದೆವು. ಮಾರ್ಗ ಮಧ್ಯೆ ಹಳ್ಳವೊಂದು ತುಂಬಿ ಹರಿಯುತ್ತಿತ್ತು. ಇಬ್ಬರೂ ಕಾಲಲ್ಲಿರುವ ಚಪ್ಪಲಿಗಳನ್ನು ಕೈಗೆ ತೆಗೆದುಕೊಂಡು ಮೊಣಕಾಲುದ್ದದ ನೀರನ್ನು ದಾಟಿ ಹೋದೆವು. ಎರಡು ದಿನ ಅವರ ಮನೆಯಲ್ಲಿಯೇ ಇದ್ದ. ಮಹಾದೇವಿ ಅವರ ಅಣ್ಣ ಬಸು, ತಮ್ಮ ಚಿದಾನಂದ್, ತಂಗಿ ಸಹ ನನಗೆ ಅತ್ಯಾಪ್ತರು. ಹೀಗಾಗಿ ಅವರ ಮನೆಯು ನನ್ನ ಮನೆಯೇ ಆಗಿತ್ತು. ಮೆಣಸಗಿಗೆ ಹೋದಾಗ ಮತ್ತೆ ಎರಡ್ಮೂರು ಬಾರಿ ಅಸೂಟಿಗೆ ಹೋಗಿ ಎಲ್ಲರನ್ನೂ ಭೇಟಿ ಮಾಡಿದೆ. ನಿರಂತರ ಸಂಪರ್ಕ ಅವರೊಂದಿಗೆ ಇತ್ತು. ಅವರ ತಂದೆ ಎಲ್ಲರನ್ನೂ ನಗಿಸಿ ತಾವೂ ನಗುತ್ತಿದ್ದರು. ಅಂತಹ ಒಳ್ಳೆಯ ಶಿಕ್ಷಕರು. ಇತ್ತೀಚೆಗೆ ನನಗೆ ಅಸೂಟಿಗೆ ಹೋಗುವುದು ಆಗಿಲ್ಲ.
ಇತ್ತೀಚೆಗೆ ಯಾದವಾಡದ ಜಾತ್ರೆಗೆ ಶ್ರೀಮತಿ ಈರಕ್ಕವ್ವ ಬಂದಿದ್ದರು. ಹುನಗುಂದ ಏಕಪ್ಪ ಮಾಮಾ ಅವರ ಸುಪತ್ರ ರಾಜಾ ಹಾಗೂ ಸುಪುತ್ರಿ ಶ್ರೀಮತಿ ಅಕ್ಕಮ್ಮ ಮನೆಯಲ್ಲಿ ಇದ್ದರು. ನಾನು ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವಾಗ ಖತ್ರಿಯಲ್ಲಿರುವ ಅವರ ಮನೆಗೆ ಭೇಟಿ ಕೊಟ್ಟೆ. ಅಚಾನಕ್ ಶ್ರೀಮತಿ ಮಹಾದೇವಿ ಸೇರಿ ಎಲ್ಲರೂ ಭೇಟಿ ಮಾಡಿದರು. ಅವರೆಲ್ಲರನ್ನೂ ಕಂಡು ನನಗೆ ಸಂತೋಷವಾಯಿತು. ಮೊನ್ನೆ ಫೋನ್ನಲ್ಲಿ ಶ್ರೀಮತಿ ಮಹಾದೇವಿ ಅವರೊಂದಿಗೆ ಮಾತನಾಡಿದೆ. ಮಗಳೊಂದಿಗೆ ಚೆನ್ನಾಗಿರುವೆ ಎಂದರು. ಗುರುಪೂರ್ಣಿಮೆ ಕುರಿತು ತೀವ್ರ ಸಂತಸ ವ್ಯಕ್ತಪಡಿಸಿದರು.
ಇನ್ನು ಶ್ರೀಮತಿ ಸುಶೀಲಾ ಕತ್ತಿ ಅವರಿಗೆ ನಾನು ಎಲ್ಲರಂತೆಯೇ ಅವರಿಗೆ ಅವಿ ಎಂದೇ ಕರೆಯುತ್ತೇನೆ. ಅವರು ಕೇವಲ ಕತ್ತಿ ಮನೆತನಕ್ಕೆ ಅಷ್ಟೇ ಅಲ್ಲ, ಚಿನಿವಾರ ಎರಡೂ ಮನೆತನದ ಮುದ್ದಿನ ಮಾದರಿಯ ಮಗಳು. ನನ್ನ ಅಪ್ಪ, ಅವ್ವ, ಕಾಕಾ, ಆಚೆ ಮನೆ ಅವ್ವ ಸೇರಿದಂತೆ ಎರಡೂ ಮನೆಗಳಲ್ಲಿ ಅವಿ ಅವರ ಮೇಲೆ ಎಲ್ಲಿಲ್ಲದ ಪ್ರೀತಿ. ನಾನು ಅವಿ ಅವರ ಅವ್ವನಿಗೆ ದೊಡ್ಡವ್ವ ಎಂದು ಅವರ ಇಬ್ಬರೂ ಚಿಗವ್ವರಿಗೆ ಚಿಗವ್ವ ಎಂದೇ ಕರೆದೆ. ಅವಿ ಅವರ ಪೂಜೆ, ಪುನಸ್ಕಾರ, ಸಂಸ್ಕಾರ ನಮ್ಮ ಎರಡೂ ಮನೆಗಳಲ್ಲಿ ಬಾಯಿತುಂಬಾ ಹೊಗಳುತ್ತಿದ್ದರು. ಅವಿ ನೋಡಿ ಕಲಿಯಬೇಕು ಎಂದೂ ನಮಗೆಲ್ಲ ಹೇಳುತ್ತಿದ್ದರು.
ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಶ್ರೀಮತಿ ಅವಿ ಅವರು ಆಗರ್ಭ ಶ್ರೀಮಂತರು. ಮನಸ್ಸು ಮಾಡಿದರೆ ಚಿನ್ನಾಭರಣಗಳಲ್ಲಿಯೇ ಮುಳುಗಿ ಏಳುವಂತಹ ಮನೆತನ ಅವರದು. ಆದಾಗ್ಯೂ, ಅವಿ ಅವರಿಗೆ ಯಾವುದೇ ಅಹಂ ಇರಲಿಲ್ಲ. ಎಂದಿಗೂ ಒಡವೆಗಳನ್ನು ಹಾಕಿಕೊಂಡು ಓಡಾಡಿದವರಲ್ಲ. ನಿರಾಡಂಭರ ಸುಂದರಿಯಾಗಿದ್ದರು. ಸೀದಾ, ಸಾದಾ ವ್ಯಕ್ತಿತ್ವದ ಅವಿ ಅವರಿಗೆ ತೋರಿಕೆ, ನಾಟಕೀಯತೆ ಎಂದರೆ ಆಗಿ ಬರುತ್ತಿರಲಿಲ್ಲ. ಅವಿ ಅವರಿಗೆ ನೋಟ್ಸ್ಗಳು ಬೇಕಾದರೆ ನನಗೆ ಕೇಳುತ್ತಿರಲಿಲ್ಲ. ನೇರವಾಗಿ ನನ್ನ ಮನೆಗೆ ಬಂದು ಮಾಡಿನಲ್ಲಿ ಇರುವ ನೋಟ್ಸ್ ತೆಗೆದುಕೊಂಡು ಹೋಗಿ, ಪುನ: ಅದೇ ಸ್ಥಳದಲ್ಲಿ ತಂದಿಡುತ್ತಿದ್ದರು. ಮಾತು ಬೆಳ್ಳಿ, ಮೌನ ಬಂಗಾರದ ರೀತಿಯಲ್ಲಿ ಅವಿ ಅವರ ನಡತೆ. ಹೀಗಾಗಿ ಅವರ ಮನೆಗಿಂತಲೂ ನನ್ನ ಎರಡೂ ಮನೆಯಲ್ಲಿ ಅವಿ ಅವರಂದರೆ ಪಂಚಪ್ರಾಣ.
ಶಾಲಾ ದಿನಗಳಲ್ಲಿ ದನ ಕಾಯುತ್ತಿದ್ದುದರಿಂದ ಅವರ ಕಾಕಾನ ಮಗ ಸದಾ ಅವರೊಂದಿಗೆ ಹೆಚ್ಚು ಒಡನಾಟ ಇತ್ತು. ಮೊದ, ಮೊದಲು ಅವರ ಅಜ್ಜಿ ಅಣ್ಣವ್ವಮ್ಮ ಅವರೊಂದಿಗೆ ಅವರ ಮುಧೋಳ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯ ಏರಿನ ಬಲಬದಿಯಲ್ಲಿರುವ ಅವರ ಹೊಲಕ್ಕೆ ದನಗಳನ್ನು ಕಾಯಲು ಹೋಗುತ್ತಿದ್ದೆ. ಅವರಿಗೆ ವಯಸ್ಸಾದ ಮೇಲೆ ದೂರದ ಹೊಲಕ್ಕೆ ಬರುತ್ತಿರಲಿಲ್ಲ.
ಆ ಕೆಲಸವನ್ನು ಸದಾ ಮಾಡುತ್ತಿದ್ದುದರಿಂದ ಆತನ ಸಂಪರ್ಕ ಹೆಚ್ಚಾಯಿತು. ನಂತರ ಗಂಗಾ ದನ ಕಾಯಲು ಬರುತ್ತಿದ್ದು ದರಿಂದ ಅವನೊಂದಿಗೂ ಒಡನಾಟ ಜಾಸ್ತಿಯಾಯಿತು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads