Column
ಬೋಧಿ ವೃಕ್ಷದ ಬೆಳಕು ಶಿಕ್ಷಕ

- ಪ್ರೊ.ಸಿ.ಎಸ್.ಆನಂದ,
ಪ್ರಧಾನ ಸಂಪಾದಕರು
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು4 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಈ ಜಗತ್ತು ಬಹಳ ದೊಡ್ಡ ದೊಡ್ಡ ಸಂತರನ್ನು, ಚಿಂತಕರನ್ನು, ತತ್ವಜ್ಞಾನಿಗಳನ್ನು, ಶಿಕ್ಷಣ ತಜ್ಞರನ್ನು ಮತ್ತು ಮಹಾ ಸಾಧಕರನ್ನು ಕಂಡಿದೆ.
ಅಂತವರ ಸಾಲಿನಲ್ಲಿ ಅಮರತ್ವ ಪಡೆದವರು ನಮ್ಮ ಭವ್ಯ ಭಾರತ ದೇಶದ ಶ್ರೇಷ್ಠ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ, ರಾಜಕಾರಣಿ, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಪ್ರಮುಖರು. ಇವರು ತಮಿಳುನಾಡಿನ ತಿರುತ್ತಣಿಯಲ್ಲಿ ಸೆಪ್ಟೆಂಬರ್ ೫ -೧೮೮೮ ರಲ್ಲಿ ಬ್ರಾಹ್ಮಣ ಕುಟುಂಬದ ವೀರಸ್ವಾಮಿ ಮತ್ತು ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದರು. ಪ್ರತಿ ವರ್ಷ ಸೆಪ್ಟೆಂಬರ್ ೫ ರಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿAದ ಆಚರಿಸಲಾಗುತ್ತದೆ. ಇಂದು ನಮ್ಮ ರಾಷ್ಟ್ರದ ತುಂಬೆಲ್ಲ ಗುರು ವಂದನೆಯ ದಿನ. ಗುರುವೇ ದೇವರು ಎಂದು ಬಲವಾಗಿ ನಂಬಿರುವ ಸಂಸ್ಕೃತಿ ನಮ್ಮದು. ಗುರು ಎಂದರೆ ದೈವತ್ವ . ಗುರು ಎಂದರೆ ದೀಪದಿಂದ ದೀಪ ಬೆಳಗಿಸುವ ಬೆಳಕು.ಗುರು ಎಂದರೆ ಅರಿವಿನ ಮಂಟಪ. ಗುರು ಪರಂಪರೆ, ಋಷಿ ಪರಂಪರೆ ಹೊಂದಿದ ನಮ್ಮ ರಾಷ್ಟ್ರದಲ್ಲಿ ಶಿಕ್ಷಕನಿಗೆ ಗೌರವದ ಸ್ಥಾನ ನೀಡಲಾಗಿದೆ. ಒಂದು ಸುಭದ್ರ ರಾಷ್ಟ್ರ ಮತ್ತು ಒಂದು ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದಾಗಿದೆ. ಗುರು ಎಂದರೆ ಕೇವಲ ಅಕ್ಷರ ಕಲಿಸುವವರಲ್ಲ, ಬದುಕಿನ ಮೌಲ್ಯಗಳನ್ನು ಮತ್ತು ಸೂಕ್ತ ದಾರಿಯನ್ನು ತೋರಿಸುವ ಮಾರ್ಗದರ್ಶಕ. ಗುರುವಿಗೆ ಜಗತ್ತನ್ನು ಬದಲಿಸುವ ಶಕ್ತಿ ಇದೆ, ಗುರುವಿಗೆ ಸಮಾಜವನ್ನು ಧನಾತ್ಮಕವಾಗಿ ಪರಿವರ್ತನೆ ಮಾಡುವ ಶಕ್ತಿ ಇದೆ. ಗುರು ಎಂದರೆ ಬೋಧಿ ವೃಕ್ಷದ ಮಹಾ ಬೆಳಕು. ಗುರು ಏರಿದ ಎತ್ತರಕ್ಕೆ ಯಾರೂ ಏರಲು ಸಾಧ್ಯವಿಲ್ಲ. ಶಿಕ್ಷಕ ಸದಾ ಅಧ್ಯಯನಶೀಲ, ಸೃಜನಶೀಲ , ಕ್ರಿಯಾಶೀಲ, ಧೀನಸಿಂಧು, ದಯಾಳು ಬಂಧು,ಸ್ವಾಭಿಮಾನದ ಗಣಿ ಮತ್ತು ಸಾವಿರಾರು ಜೀವನ ಮೌಲ್ಯಗಳ ಸಾಧಕ. ಅಕ್ಷರ ಬಲವನ್ನು ನಂಬಿ, ಜ್ಞಾನದ ಬಲವನ್ನು ನಂಬಿ ಬರುವ ವಿದ್ಯಾರ್ಥಿಗಳ ಬಾಳಿನಲ್ಲಿ ವಿದ್ಯೆ ನೀಡುವ ಗುರುವಿನ ಮಹತ್ವವನ್ನು ಎಷ್ಟು ಹೇಳಿದರೂ ಕಡಿಮೆಯೇ. ಒಂದು ವಚನದಲ್ಲಿ ಬಸವಣ್ಣನವರು ಗುರುವಿನ ಕುರಿತು ಹೀಗೆ ಹೇಳಿದ್ದಾರೆ, " ಕಲ್ಲೊಳಗೆ ಹೊನ್ನುಂಟು, ಉದಕದೊಳಗೆ ಅಗ್ನಿಯುಂಟು,ಹಾಲೊಳಗೆ ತುಪ್ಪವುಂಟು, ಅಂತರ್ಯಾಮಿಯಲ್ಲಿ ಶಿವನಿಹನು, ಇದೇನು ಕತ್ತಲೆ ಕಾಣಬಾರದು,ತೋರಬಲ್ಲ ಗುರು ಸುಳಿಯನು ಕೂಡಲಸಂಗಮದೇವ " ಕಲ್ಲಿನಲ್ಲಿ ಕನಕವಿದೆ, ನೀರಿನಲ್ಲಿ ಬೆಂಕಿಯಿದೆ, ಹಾಲಿನಲ್ಲಿ ತುಪ್ಪವಿದೆ. ಅದೇ ರೀತಿ ಜೀವನದಲ್ಲೇ ದೇವನ ದಿವ್ಯ ಚೈತನ್ಯ ಶಕ್ತಿ ಅಡಗಿದೆ. ಅಜ್ಞಾನದ ಕತ್ತಲೆಯನ್ನು ಕಳೆಯುವ ಸದ್ಗುರುಗಳು ಬರುವವರೆಗೆ ದೇವರ ದಿವ್ಯ ದರ್ಶನವಾಗುವುದಿಲ್ಲ ! ಹಾಗೆಯೇ ವ್ಯಕ್ತಿಯಲ್ಲಿರುವ ಶಕ್ತಿಯಾಗಲಿ,ಬುದ್ಧಿವಂತಿಕೆಯಾಗಲಿ , ವಿದ್ಯಾರ್ಥಿಗಳಲ್ಲಿರುವ ಅರಿವಿನ ಜ್ಯೋತಿಯಾಗಲಿ ಪ್ರಕಟವಾಗಬೇಕಾದರೆ ಶಿಕ್ಷಕನ ವಾತ್ಸಲ್ಯಭರಿತ ಮಾರ್ಗದರ್ಶನ ಬೇಕೇ ಬೇಕು. ಆಗ ಒಬ್ಬ ಸಾಮಾನ್ಯ ಮಗುವಿನಲ್ಲಿ ಹುದುಗಿದ ಅಸಾಮಾನ್ಯ ಮಾನವ ಎಂದರೆ ವಿಜ್ಞಾನಿ-ತತ್ವಜ್ಞಾನಿ, ಮೇಧಾವಿ- ರಾಜಕಾರಣಿ, ಯೋಗಿ-ತ್ಯಾಗಿ, ವೀರ -ಧೀರ, ದೇಶ ಭಕ್ತ - ದೇವ ಭಕ್ತರು ಹೊರಹೊಮ್ಮುತ್ತಾರೆ. ರಾಷ್ಟ್ರ ನಿರ್ಮಾಣ, ವಿಶ್ವ ಕಲ್ಯಾಣ ಮಾಡುತ್ತಾರೆ. ಅಂತೆಯೇ ಒಬ್ಬ ಅನುಭಾವ ಕವಿ ಹೇಳುತ್ತಾನೆ - " ಪೃಥ್ವಿಯನ್ನೇ ಹಾಳೆಯನ್ನಾಗಿ, ಸಪ್ತ ಸಾಗರವನ್ನೇ ಶ್ಯಾಯಿಯನ್ನಾಗಿ, ಸಮಸ್ತ ಗಿಡ ಮರಗಳನ್ನೇ ಲೇಖನಿಯನ್ನಾಗಿ ಮಾಡಿ ಗುರುವಿನ ಮಹಿಮೆಯನ್ನು ಬರೆಯಲು ಕುಳಿತರೂ ಅದು ಮುಗಿಯುವುದಿಲ್ಲ ! ಪ್ರಪಂಚದ ಸಮಸ್ತ ಅಧಿಕಾರಿಗಳು, ಮಹಾಜನತೆ ಎಲ್ಲಾ ಒಂದು ಪರಡಿಯಲ್ಲಿರಲಿ , ಶಿಕ್ಷಕ ಒಂದು ಪರಡಿಯಲ್ಲಿರಲಿ , ಆಗಲೂ ಅವರೆಲ್ಲರೂ ಶಿಕ್ಷಕನಿಗೆ ಸರಿತೂಗಲಾರರು..!! ಶಿಕ್ಷಕ ಜಗದ ಜಂಗಮ ; ಅಪರೂಪದ ಗುಲಗಂಜಿ " ನ ಗುರೋರಧಿಕಂ" ಅಂದರೆ ಗುರುವಿಗೆ ಸಮಾನವಾದುದು ಬೇರೊಂದಿಲ್ಲ. " ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ " ಶಿಕ್ಷಕ ದೇವರಿಗೆ ದೇವ, ಮಹಾದೇವ ! ಶಿಕ್ಷಕನ ಹೃದಯದಲ್ಲಿ ಒಬ್ಬ ಶ್ರೇಷ್ಠ ಗುರುದೇವರು ನೆಲೆಸಿರುತ್ತಾರೆ. ಶಿಕ್ಷಕ ಎಂದರೆ ಕೇವಲ ನೌಕರನಲ್ಲ, ಅವನು ಭವ್ಯ ರಾಷ್ಟ್ರದ ನಿರ್ಮಾಪಕನು. " ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯೆತೇ " ಅಂದರೆ , ಜ್ಞಾನಕ್ಕೆ ಸಮನಾದ, ಅಷ್ಟೇ ಪವಿತ್ರವಾದ ವಸ್ತು ಈ ಜಗತ್ತಿನಲ್ಲಿ ಮತ್ತೊಂದಿಲ್ಲ. ಶ್ರದ್ಧೆವುಳ್ಳವ, ಸತತ ಪರಿಶ್ರಮಿ ಜ್ಞಾನವನ್ನು, ವಿದ್ಯೆಯನ್ನು ಮತ್ತು ಅರಿವಿನ ಬೆಳಕನ್ನು ಗುರುವಿನ ಮಾರ್ಗದರ್ಶನದ ಮೂಲಕ ಸಂಪಾದಿಸುತ್ತಾನೆ. ನಾವೆಲ್ಲ ಅಲ್ಪ ಪ್ರಮಾಣದಲ್ಲಿ ಕೇಳಿದ್ದೇವೆ ಮತ್ತು ಓದಿದ್ದೇವೆ - ಸತ್ಯಯುಗ, ತ್ರೇತಾಯುಗ , ದ್ವಾಪರಯುಗ ಮತ್ತು ಕಲಿಯುಗಳ ಕುರಿತು , ಆದರೆ ಈಗ ನಾವು ಬದುಕುತ್ತಿರುವುದು ಜ್ಞಾನ ಯುಗ, ಜಾಗತೀಕರಣದ ಯುಗ, ತಂತ್ರಜ್ಞಾನದ ಯುಗ, ವಿಜ್ಞಾನ ಯುಗ..... ಹಾಗಾಗಿ, ಇಂತಹ ಆಧುನಿಕರಣದ ಸಂದರ್ಭದಲ್ಲಿ ಶಿಕ್ಷಕ ಎಷ್ಟೂ ವಿಷಯಗಳ ಅಧ್ಯಯನ ಮಾಡಿದರೂ ಕಡಿಮೆಯೇ. ಅಂತೆಯೇ ಶಿಕ್ಷಕನಿಗೆ ಸದಾ ಜ್ಞಾನದ ಹಸಿವು, ಕಲಿಯುವ ಮತ್ತು ಕಲಿಸುವ ಹಂಬಲ ಇರಲೇಬೇಕು. ಇಂತಹ ಪವಿತ್ರ ಜ್ಞಾನವನ್ನು,ಅಮರತ್ವದ ವಿದ್ಯೆಯನ್ನು ಉಸಿರಾಡಿಸುವ ಆದರ್ಶ ಶಿಕ್ಷಕ ಅನುಪಮನು, ಅದ್ವಿತೀಯನು ಆಗಿರುತ್ತಾನೆ. ಗುರು -ಶಿಷ್ಯರ ನಡುವಿನ ಭಾವ ಬಾಂಧವ್ಯ ಬಹಳ ದೊಡ್ಡದಿದೆ. ಗುರು ಪ್ರಜ್ಞೆ ಇಂದು ಮತ್ತಷ್ಟು ಜಾಗೃತಗೊಳ್ಳಬೇಕಾದ ಅಗತ್ಯವಿದೆ. ಗುರುವಿನ ಪ್ರಜ್ಞೆ ಮೂಲಕ ಬೆಳಕಿನ ಅನ್ವೇಷಣೆ ಮಾಡಬೇಕಾಗಿದೆ . ಹಿಂದೆAದಿಗಿAತಲೂ ಇಂದು ಶಿಕ್ಷಕನ ಮೇಲೆ ಬಹಳ ಗುರುತರವಾದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಇದೆ. ಕೇವಲ ಪಾಠ ಬೋಧನೆ ಮಾಡದೆ ಬದುಕಿನ ಮೌಲ್ಯಗಳ ಕುರಿತು ಅರಿವು ಮತ್ತು ತಿಳುವಳಿಕೆ ಹೆಚ್ಚಿಸುವ ಕೆಲಸ ಮಾಡಬೇಕು ಬೇಕು. ಶಿಕ್ಷಕ ಹೊಸತನವನ್ನು ಮೈಗೂಡಿಸಿಕೊಂಡು , ಹೊಸ ಆಲೋಚನೆ ಮತ್ತು ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಬಹು ಮುಖ್ಯವಾಗಿ ಈ ನೆಲದಲ್ಲಿ ಶಿಕ್ಷಕನ ಕುರಿತು ಯಾರೇ ಮಾತನಾಡುವಾಗ ಅವರ ಕುರಿತು ಪ್ರೀತಿ ಹೃದಯ ತುಂಬಿ ಬರಬೇಕು. ಸ್ವಾಭಿಮಾನದ ಬದುಕು ಕಟ್ಟಿಕೊಡುವ ಶ್ರೇಷ್ಠ ಶಿಕ್ಷಕನಿಗೆ ಗೌರವಿಸುವುದಕ್ಕೆ ಯಾವ ಹೊಗಳಿಕೆ,ಶಾಲು, ಹಾರ, ಮಾನ- ಸನ್ಮಾನ ಬೇಕಿಲ್ಲ, ಅಂತ:ಕರಣದ ಒಂದೇ ಒಂದು ನಮಸ್ಕಾರ ಸಾಕು ! ಒಂದು ಮಾತಿದೆ, ಒಬ್ಬ ತಂದೆ ಹತ್ತು ಶಿಕ್ಷಕರಿಗೆ ಸಮಾನ ಅದೇ ಒಬ್ಬ ತಾಯಿ ನೂರು ಶಿಕ್ಷಕರಿಗೆ ಸಮಾನ. ಹೌದು, ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ತಾಯಿ ಮೂಲಕ ಪಾಠ ಕಲಿತ ಮಗು ನಿಜಕ್ಕೂ ಧನ್ಯ. ಆ ಮಗು ಈ ನೆಲಕ್ಕೆ ಬಹು ದೊಡ್ಡ ಮಾನ್ಯ ಆಗುವುದರಲ್ಲಿ ಸಂದೇಹವಿಲ್ಲ. ಆದರೆ, ಆ ಮಗುವಿನ ಸರ್ವಾಂಗೀಣ ಬೆಳವಣಿಗೆ ಮತ್ತು ವಿಕಾಸ ಆಗುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಪ್ರಮುಖ ಪಾತ್ರ ಪಾಲಕರು ಮತ್ತು ಪೋಷಕರದೂ ಆಗಿರುತ್ತದೆ.
೨೦ ನೇ ಶತಮಾನದಲ್ಲಿ ನಮ್ಮ ದೇಶ ಕಂಡ ಶ್ರೇಷ್ಠ ಶಿಕ್ಷಕ, ಉಪಕುಲಪತಿ, ತತ್ವಜ್ಞಾನಿ ಮತ್ತು ಮಹಾ ಮುತ್ಸದ್ದಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ನಮ್ಮ ನೆಲಕ್ಕೆ ಸೇರಿದವರು ಎಂಬುದು ನಮಗೆ ಅತೀವ ಹೆಮ್ಮೆ ಮತ್ತು ಗೌರವ. ಅವರು ತಮ್ಮ ಪ್ರಖರ ವಿಚಾರ ಮತ್ತು ಚಿಂತನೆಗಳ ಮೂಲಕ ಸೀಮಾತೀತವಾಗಿ ಬೆಳೆದು ಕಾಲಾತೀತವಾಗಿ ಜನಮಾನಸದ ಹೃದಯದಲ್ಲಿ ನೆಲೆ ಪಡೆದಿರುವರು. ಹಲವಾರು ಮೌಲ್ಯಯುತ ಗ್ರಂಥಗಳನ್ನು ರಚಿಸಿದವರು, ತಮ್ಮ ವಿಶಿಷ್ಟ ಆದರ್ಶ ,ತತ್ವ-ಸಿದ್ಧಾಂತಗಳ ಮೂಲಕ ಪ್ರಮುಖ ವಿದ್ವಾಂಸರಾಗಿ ಗುರುತಿಸಿಕೊಂಡು , ದೇಶ - ವಿದೇಶಗಳಿಂದ ಪದವಿ, ಪ್ರಶಸ್ತಿ ಮತ್ತು ಪುರಸ್ಕಾರ ಪಡೆದವರು .ಅಂತವರ ಜನ್ಮದಿನದ ಸವಿನೆನಪಿಗಾಗಿ ರಾಷ್ಟ್ರದ ಸಮಸ್ತ ಶಿಕ್ಷಕರನ್ನು ಗೌರವಿಸುವ ಈ ದೇಶದ,ಈ ನಾಡಿನ ಪ್ರತಿಯೊಬ್ಬ ಪ್ರಜೆಯ ಭಾವ ಬಾಂದಳದಲ್ಲಿ ಗುರುವಿನ ಕುರಿತು ಮತ್ತಷ್ಟು ಪ್ರೀತಿ,ಅಭಿಮಾನ, ಮತ್ತು ಗೌರವ ಹೆಚ್ಚಾಗಲಿ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads