Sedam
ಮಾಧವನ ಅಂತ್ಯಕ್ರಿಯೆ

ಪ್ರೊ.ಶೋಭಾದೇವಿ ಚೆಕ್ಕಿ
ನಿವೃತ್ತ ಪ್ರಾಧ್ಯಾಪಕರು
ಶನಿವಾರ, ಆಗಸ್ಟ್ 8, 20262 ನಿಮಿಷ ಓದು7 ವೀಕ್ಷಣೆಗಳು
Ads
ಮಾಧವನದು ಮಧ್ಯಮ ವರ್ಗದ ಕುಟುಂಬ. ರೇಖಾ ಆತನ ಧರ್ಮಪತ್ನಿ. ಇವರಿಬ್ಬರದು ಅನುರೂಪದ ಜೋಡಿ. ಪರಸ್ಪರ ಅರಿತು, ಪ್ರೀತಿ ವಿಶ್ವಾಸದಿಂದ ಇರುವರು. ಇವರಿಗೆ ಮುದ್ದಾದ ಎರಡು ಹೆಣ್ಣು ಮಕ್ಕಳು ಜನಿಸಿದವು. ದೊಡ್ಡವಳು ವೀಣಾ, ಕಿರಿಯ ಮಗಳು ವಾಣಿ. ಮಿತ ಸಂತಾನ ಹೂವಿನ ಹಾರ, ಅತಿ ಸಂತಾನ ಜೀವನ ಭಾರ ಎಂಬ ಹೇಳಿಕೆಯಂತೆ ಇಬ್ಬರೇ ಮಕ್ಕಳು ಸಾಕು ಎಂದು ನಿರ್ಧರಿಸಿ ಬಿಡುವರು. ಹೆಣ್ಣು ಮಕ್ಕಳು ಯಾವತ್ತಿದ್ದರೂ ಪರರ ಸೊತ್ತು. ಗಂಡು ಮಕ್ಕಳಾದರೆ ಮುಪ್ಪಿಗೆ ಆಸರೆಯಾಗುತ್ತಾರೆ. ವಂಶೋದ್ಧಾರಕನೊಬ್ಬ ಜನಿಸಲಿ ಎಂದು ಮಾಧವನ ತಾಯಿ ತನ್ನ ಅಪೇಕ್ಷೆಯನ್ನು ವ್ಯಕ್ತ ಪಡಿಸಿದಳು. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಶಿಕ್ಷಣ, ಸಂಸ್ಕಾರವನ್ನು ಕೊಟ್ಟು ಬೆಳೆಸುವುದು ಹೆತ್ತವರ ಕರ್ತವ್ಯ. ಗಂಡು ಹೆಣ್ಣು ಎಂದು ತರತಮ ಮಾಡುವುದು ತರವಲ್ಲ. ಹೆಣ್ಣು ಮಕ್ಕಳು ಕೂಡಾ ತಂದೆತಾಯಿಗೆ, ಕುಟುಂಬಕ್ಕೆ ಹೆಸರು ತರುತ್ತಾರೆ. ಮುಪ್ಪಿಗೆ ಊರುಗೋಲಾಗುತ್ತಾರೆ ಎಂದು ಮಾಧವ ತನ್ನ ತಾಯಿಗೆ ಮನವರಿಕೆ ಮಾಡಿದ. ಮಾಧವ ಮತ್ತು ರೇಖಾ ತಮ್ಮ ಇಬ್ಬರೂ ಹೆಣ್ಣು ಮಕ್ಕಳನ್ನು ಕಣ್ಣರೆಪ್ಪೆಯಂತೆ ಕಾಪಾಡಿದರು. ಪ್ರೀತಿಯ ಮಹಾಪೂರವನ್ನೇ ಹರಿಸಿದರು.
ವೀಣಾ ಮತ್ತು ವಾಣಿ ತುಂಬಾ ಬುದ್ಧಿವಂತರು. ಹತ್ತನೆಯ ವರ್ಗದವರೆಗೆ ಪ್ರಥಮ ಶ್ರೇಣಿಯಲ್ಲೇ ಪಾಸಾದರು. ಕಾಲೇಜು ವೆಚ್ಚ ಭರಿಸಲು ಕಷ್ಟವಾದರೂ ಮಾಧವ ತನ್ನ ಇಬ್ಬರೂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಿದ. ವೀಣಾ ಸುಧಾಕರನ ಕೈಹಿಡಿದು ಅಮೇರಿಕಾಕ್ಕೆ ತೆರಳಿದಳು. ವಾಣಿಯ ಮದುವೆಯೂ ಶ್ರೀಮಂತ ಯುವಕ ಶ್ರೀಧರನೊಂದಿಗೆ ಜರುಗಿತು. ಇವರು ನ್ಯೂ ದೆಹಲಿಯಲ್ಲಿ ನೆಲೆಯೂರಿದರು. ವೀಣಾ ಮತ್ತು ವಾಣಿ ದೊಡ್ಡ ಹುದ್ದೆಯನ್ನು ಅಲಂಕರಿಸಿ ದೊಡ್ಡ ಮೊತ್ತದ ಹಣವನ್ನು ಸಂಪಾದಿಸತೊಡಗಿದರು.
ಮಕ್ಕಳ ಏಳ್ಗೆಯನ್ನು ಕಂಡು ಮಾಧವ ರೇಖಾ ತುಂಬಾ ಹೆಮ್ಮೆ ಪಡುವರು. ಹೆತ್ತವರನ್ನು ಕಾಣಲು ಆಗಾಗ್ಗೆ ಬರುತ್ತಿದ್ದ ಇಬ್ಬರೂ ಹೆಣ್ಣು ಮಕ್ಕಳು, ಕೆಲಸದ ಒತ್ತಡದ ನೆಪ ಹೇಳಿ, ಬರುವುದನ್ನೇ ಕಡಿಮೆ ಮಾಡಿದರು. ಬರ ಬರುತ್ತಾ ಫೋನಿ ನಲ್ಲೇ ಕ್ಷೇಮ ಸಮಾ ಚಾರ ವಿಚಾರಿಸತೊಡಗಿದರು.
ರೇಖಾ ಅನಾರೋಗ್ಯದಿಂದ ಬಳಲಿ ಇಹಲೋಕದ ಯಾತ್ರೆಯನ್ನು ಮುಗಿಸಿದಳು. ಪ್ರೀತಿಯ ಪತ್ನಿ ಯನ್ನು ಕಳೆದುಕೊಂಡ ಮಾಧವ ತುಂಬಾ ದು:ಖಿತನಾದ. ಮಾನಸಿಕ ವಾಗಿಯೂ ಕುಗ್ಗಿ ಹೋದ. ಒಂಟಿತನ ಅವನಿಗೆ ಅಸಹನೀಯ ಯಾತನೆ ಯನ್ನುಂಟುಮಾಡಿತು. ಒಬ್ಬ ಮಗಳೂ ತಂದೆಯನ್ನು ಕರೆದೊಯ್ಯಲಿಲ್ಲ. ಬಳಿ ಬಂದು ಸಾಂತ್ವನ ಹೇಳಲಿಲ್ಲ. ಮಾಧವ ವೃದ್ಧಾಶ್ರಮ ಸೇರಿಕೊಂಡ.
ಅಲ್ಲಿ ಇರುವಷ್ಟು ದಿನ ಸಮವಯಸ್ಕರೊಂದಿಗೆ ಸಮಯ ಕಳೆದ. ಸಾವು ಸಮೀಪಿಸು ತ್ತಿರುವಾಗ ಮಕ್ಕಳನ್ನು ನೆನಸಿದ. ಆದರೇನು? ಇಬ್ಬರೂ ಹೆಣ್ಣು ಮಕ್ಕಳು ಫೋನ್ ಮಾಡೋದನ್ನೂ ನಿಲ್ಲಿಸಿ ಬಿಟ್ಟಿದ್ದರು. ಮಾಧವ ಸೀರಿಯಸ್ ಆಗಿದ್ದಾನೆ ಬಂದು ಹೋಗಿ ಎಂದು ವೃದ್ಧಾಶ್ರಮದ ವ್ಯವಸ್ಥಾಪಕರು ಫೋನಾಯಿಸಿದಾಗ ಆವರು ಯಾವುದೆ ಪ್ರತಿಕ್ರಿಯೆ ನೀಡಲಿಲ್ಲ. ಮಾಧವ ಸತ್ತ ಮೇಲೂ ಅಂತಿಮ ಸಂಸ್ಕಾರಕ್ಕೂ ಬರದೆ ಕೃತಘ್ನರಾಗಿಬಿಟ್ಟರು. ಅಮೇರಿಕಾ ದಲ್ಲಿರುವ ವೀಣಾ ಆನ್ಲೈನ್ನಲ್ಲೇ ಒಂದಷ್ಟು ದುಡ್ಡು ಹಾಕಿ ವೃದ್ಧಾಶ್ರಮದವರಿಗೆ ಅಂತ್ಯಕ್ರಿಯೆ ಮಾಡಿ ಮುಗಿಸಲು ತಿಳಿಸಿ ಬಿಟ್ಟಳು. ದೆಹಲಿಯಲ್ಲಿದ್ದ ವಾಣಿ ಕೂಡಾ ತಂದೆಯ ಅಂತಿಮ ದರ್ಶನಕ್ಕೆ ಬರಲಿಲ್ಲ.
ಗಂಡು ಮಕ್ಕಳಾದರೆ ಕೆಲವೊಮ್ಮೆ ನಿಷ್ಕರುಣಿಯಾಗಿರತ್ತಾರೆ. ಹೆಣ್ಣು ಮಕ್ಕಳು ಹಾಗಲ್ಲ. ಮೃದುಸ್ವಭಾವದವರು ಕರುಣಾಮಯಿಗಳು ಆಗಿರುತ್ತಾರೆ. ತಂದೆ ತಾಯಿಯ ಮುಪ್ಪಿಗೂ ಆಸರೆಯಾ ಗುತ್ತಾರೆ. ಆದರೆ ಮಾಧವನ ಇಬ್ಬರೂ ಹೆಣ್ಣು ಮಕ್ಕಳು ಅಮಾನವೀಯತೆ ತೋರಿದ್ದನ್ನು ಕಂಡು ವೃದ್ಧಾಶ್ರಮದವರು ನೊಂದು ಹೋಗುತ್ತಾರೆ. ಸ್ಥಳೀಯರ ನೆರವಿನೊಂದಿಗೆ ಮಾಧವನ ಅಂತ್ಯಕ್ರಿಯೆಯನ್ನು ನೆರವೇರಿಸಿ ಕೃತಾರ್ಥರಾಗುತ್ತಾರೆ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads