📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
National

ಅನಂತನಾಗ್ ದಾದಾಸಾಹೇಬ್: ಕಲಾ ಪಯಣಕ್ಕೆ ಫಾಲ್ಕೆ ಗರಿ

ಸುಧೀರ್ ಬಿರಾದರ್

ಸುಧೀರ್ ಬಿರಾದರ್

ಪತ್ರಕರ್ತ

ಮಂಗಳವಾರ, ಸೆಪ್ಟೆಂಬರ್ 22, 20262 ನಿಮಿಷ ಓದು39 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಅನಂತನಾಗ್ ದಾದಾಸಾಹೇಬ್: ಕಲಾ ಪಯಣಕ್ಕೆ ಫಾಲ್ಕೆ ಗರಿ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಫಾಲ್ಕೆ ಗೌರವ ಕರ್ನಾಟಕಕ್ಕೆ ಸಮರ್ಪಣೆ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು (೨೦೨೪ನೇ ಸಾಲಿನ ಪ್ರಶಸ್ತಿ) ಪ್ರದಾನ ಮಾಡಲಾಗಿದೆ. ಸೆಪ್ಟೆಂಬರ್ ೨೨, ೨೦೨೬ ರಂದು ಗುಜರಾತ್‌ನ ಕೆವಾಡಿಯಾದಲ್ಲಿ (ಏಕತಾ ನಗರ) ನಡೆದ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಅಪಾರ ಕೊಡುಗೆ ನೀಡಿರುವ ಅವರು, ಈ ಪ್ರಶಸ್ತಿಯನ್ನು ಸ್ವೀಕರಿಸಿದ ಎರಡನೇ ಕನ್ನಡ ನಟ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ (೧೯೯೫ ರಲ್ಲಿ ಡಾ. ರಾಜ್‌ಕುಮಾರ್ ಅವರಿಗೆ ಈ ಪ್ರಶಸ್ತಿ ಸಂದಿತ್ತು). ಗೌರವಪೂರ್ವಕ ಅಭಿನಂದನೆ: ಅನಂತ್ ನಾಗ್ ಅವರು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಆಗಮಿಸಿದಾಗ ಅಲ್ಲಿದ್ದ ಇಡೀ ಚಿತ್ರರಂಗದ ಗಣ್ಯರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು ಭಾವನಾತ್ಮಕ ಭಾಷಣ: ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅನಂತ್ ನಾಗ್ ಅವರು ಭಾವುಕರಾದರು. "ಈ ಪ್ರಶಸ್ತಿ ನನಗೆ ಮಾತ್ರ ಸೇರಿದ್ದಲ್ಲ; ನನ್ನ ಜೊತೆ ಕೆಲಸ ಮಾಡಿದ ನಿರ್ಮಾಪಕರು, ನಿರ್ದೇಶಕರು, ತಾಂತ್ರಿಕ ವರ್ಗ ಹಾಗೂ ನನ್ನ ಪಾತ್ರಗಳನ್ನು ಐದೂವರೆ ದಶಕಗಳಿಂದ ಪ್ರೀತಿಸಿದ ಕೋಟ್ಯಂತರ ಜನರಿಗೆ ಇದು ಸಲ್ಲುತ್ತದೆ" ಎಂದರು. ಕರ್ನಾಟಕಕ್ಕೆ ಸಮರ್ಪಣೆ: ತಮ್ಮ ಈ ಯಶಸ್ಸಿಗೆ ಕಾರಣವಾದ ಕರ್ನಾಟಕ ಮತ್ತು ಕನ್ನಡ ಜನತೆಗೆ ಪ್ರಶಸ್ತಿಯನ್ನು ಸಮರ್ಪಿಸಿದರು. ಕಲಾತ್ಮಕ ಚಿತ್ರಗಳು ಮತ್ತು ವಾಣಿಜ್ಯ ಸಿನಿಮಾಗಳೆರಡರಲ್ಲೂ ಮುಕ್ತವಾಗಿ ನಟಿಸಲು ಕರ್ನಾಟಕದ ಸಾಂಸ್ಕೃತಿಕ ವಾತಾವರಣ ತಮಗೆ ಪ್ರೇರಣೆ ನೀಡಿತು ಎಂದು ಅವರು ಸ್ಮರಿಸಿದರು. ಒಬ್ಬ ನಟನನ್ನು ನೆನಪಿಸಿಕೊಳ್ಳಲು ಅವನು ಮಾಡಿದ ಸಿನಿಮಾಗಳ ಸಂಖ್ಯೆಯೇ ಮುಖ್ಯವಾಗಬೇಕಿಲ್ಲ. ಅವನು ಪರದೆಯ ಮೇಲೆ ಸೃಷ್ಟಿಸಿದ ಪಾತ್ರಗಳು ಎಷ್ಟು ಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದವು ಎಂಬುದೇ ನಿಜವಾದ ಅಳತೆ. ಆ ಅರ್ಥದಲ್ಲಿ ಅನಂತ ನಾಗ್ ಎಂಬ ಹೆಸರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕೇವಲ ಒಬ್ಬ ನಟನ ಹೆಸರಲ್ಲ; ಅದು ಸಹಜ ಅಭಿನಯದ ಒಂದು ವಿಶಿಷ್ಟ ಶಾಲೆ. ಐದು ದಶಕಗಳಿಗೂ ಮೀರಿದ ಅವರ ಕಲಾ ಪಯಣಕ್ಕೆ ಇದೀಗ ಭಾರತೀಯ ಚಿತ್ರರಂಗದ ಅತ್ಯುನ್ನತ ಜೀವಮಾನ ಸಾಧನೆಯ ಗೌರವಗಳಲ್ಲಿ ಒಂದಾದ ೨೦೨೪ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ಕೇಂದ್ರ ಸರ್ಕಾರ ಸೆ.೧೬, ೨೦೨೬ರಂದು ಈ ಘೋಷಣೆ ಮಾಡಿದ್ದು, ಸೆ.೨೨ರಂದು ಗುಜರಾತ್‌ನ ಕೆವಡಿಯಾದಲ್ಲಿ ನಡೆಯಲಿರುವ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಗುತ್ತದೆ. ಈ ಗೌರವ ಪಡೆದ ಎರಡನೇ ಕನ್ನಡ ನಟ ಎಂಬ ವಿಶೇಷ ಸ್ಥಾನವೂ ಅನಂತ ನಾಗ್ ಅವರಿಗೆ ದೊರೆಯುತ್ತಿದೆ. ಇದಕ್ಕೂ ಮೊದಲು ಡಾ.ರಾಜ್‌ಕುಮಾರ್ ಅವರಿಗೆ ೧೯೯೫ರಲ್ಲಿ ಈ ಗೌರವ ಲಭಿಸಿತ್ತು. ಆದರೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಅನಂತ ನಾಗ್ ಅವರ ಪಯಣದ ಅಂತಿಮ ಅಧ್ಯಾಯವಲ್ಲ. ವಾಸ್ತವವಾಗಿ, ಅವರ ಬದುಕಿನ ಹಲವು ಅಧ್ಯಾಯಗಳನ್ನು ಒಟ್ಟಿಗೆ ಓದಿದಾಗ ಮಾತ್ರ ಈ ಗೌರವದ ಅರ್ಥ ಇನ್ನಷ್ಟು ಆಳವಾಗಿ ಗೋಚರಿಸುತ್ತದೆ. ಶಿರಾಳಿಯಿಂದ ಮುಂಬೈವರೆಗೆ : ೧೯೪೮ರ ಸೆಪ್ಟೆಂಬರ್ ೪ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಳಿಯಲ್ಲಿ ಜನಿಸಿದ ಅನಂತ ನಾಗ್ ಅವರ ಬಾಲ್ಯ ಕರಾವಳಿಯ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದಿತು. ಅವರ ಕುಟುಂಬ ಕೊಂಕಣಿ ಭಾಷಿಕ ಹಿನ್ನೆಲೆಯದ್ದು. ನಂತರ ವಿದ್ಯಾಭ್ಯಾಸಕ್ಕಾಗಿ ವಿವಿಧ ಸ್ಥಳಗಳಲ್ಲಿ ಓದಿದ ಅವರು, ಮುಂದಿನ ದಿನಗಳಲ್ಲಿ ಮುಂಬೈಗೆ ತೆರಳಿದರು. ಸಿನಿಮಾ ಅವರ ಬದುಕಿಗೆ ನೇರವಾಗಿ ಬಂದು ಬಾಗಿಲು ತಟ್ಟಲಿಲ್ಲ. ಮೊದಲು ಬಂದದ್ದು ರಂಗಭೂಮಿ. ಮುಂಬೈಯ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅನಂತ ನಾಗ್, ಕೊಂಕಣಿ, ಕನ್ನಡ ಹಾಗೂ ಮರಾಠಿ ನಾಟಕಗಳಲ್ಲಿ ಅಭಿನಯಿಸಿದರು. ರಂಗಭೂಮಿ ಅವರಿಗೆ ಕೇವಲ ಅವಕಾಶ ನೀಡಲಿಲ್ಲ; ಪಾತ್ರವನ್ನು ಅರ್ಥಮಾಡಿಕೊಳ್ಳುವ ಶಿಸ್ತು, ಸಂಭಾಷಣೆಯ ತೂಕ, ದೇಹಭಾಷೆ ಮತ್ತು ಪ್ರೇಕ್ಷಕರ ಎದುರು ನಿಲ್ಲುವ ಆತ್ಮವಿಶ್ವಾಸವನ್ನು ಕಲಿಸಿತು. ನಂತರ ಬೆಳ್ಳಿತೆರೆಗೆ ಬಂದಾಗ ಇದೇ ರಂಗಭೂಮಿಯ ಅನುಭವ ಅವರ ಅಭಿನಯದ ಅಡಿಪಾಯವಾಯಿತು. ‘ಸಂಕಲ್ಪ’ದಿAದ ಆರಂಭವಾದ ಪಯಣ: ೧೯೭೩ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ ‘ಸಂಕಲ್ಪ’ ಅವರ ಚಿತ್ರರಂಗದ ಆರಂಭಿಕ ಪ್ರಮುಖ ಹೆಜ್ಜೆ. ನಂತರ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ‘ಅಂಕುರ’ ಮೂಲಕ ಹಿಂದಿ ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದರು. ‘ಅಂಕುರ’ ಅನಂತ ನಾಗ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು: ಅದು ಕೇವಲ ಮತ್ತೊಂದು ಸಿನಿಮಾ ಆಗಿರಲಿಲ್ಲ. ಭಾರತದ ಸಮಾನಾಂತರ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾದ ಶ್ಯಾಮ್ ಬೆನಗಲ್ ಅವರೊಂದಿಗೆ ಅನಂತ ನಾಗ್ ಅವರ ಕಲಾತ್ಮಕ ಸಂಬAಧಕ್ಕೆ ಅದು ಆರಂಭವಾಯಿತು. ಬಳಿಕ ‘ನಿಶಾಂತ್’, ‘ಮಂಥನ್’, ‘ಕೊಂಡುರಾ’, ‘ಕಲ್ಯುಗ್’ ಮುಂತಾದ ಚಿತ್ರಗಳಲ್ಲೂ ಅವರ ಅಭಿನಯ ಗಮನ ಸೆಳೆಯಿತು. ವಾಣಿಜ್ಯ ಸಿನಿಮಾಗಳಲ್ಲಿ ಜನಪ್ರಿಯತೆ ಗಳಿಸುವುದು ಒಂದು ಸವಾಲಾದರೆ, ಕಲಾತ್ಮಕ ಸಿನಿಮಾಗಳಲ್ಲಿ ಪಾತ್ರದ ಆಂತರಿಕತೆಯನ್ನು ಕಟ್ಟಿಕೊಡುವುದು ಮತ್ತೊಂದು ಸವಾಲು. ಅನಂತ ನಾಗ್ ಈ ಎರಡೂ ಪ್ರಪಂಚಗಳ ನಡುವೆ ನಿರಂತರವಾಗಿ ಸಂಚರಿಸಿದರು. ‘ಹಂಸಗೀತೆ’ಯಿAದ ನಟನ ಸಾಮರ್ಥ್ಯದ ಮತ್ತೊಂದು ಮುಖ: ಜಿ.ವಿ. ಅಯ್ಯರ್ ನಿರ್ದೇಶನದ ‘ಹಂಸಗೀತೆ’ ಅನಂತ ನಾಗ್ ಅವರ ಅಭಿನಯ ಸಾಮರ್ಥ್ಯವನ್ನು ಮತ್ತಷ್ಟು ಗಟ್ಟಿಯಾಗಿ ಗುರುತಿಸಿದ ಚಿತ್ರಗಳಲ್ಲಿ ಒಂದು. ಪಾತ್ರದ ಒಳಗಿನ ತಲ್ಲಣವನ್ನು ಹೊರಗಿನ ಅಬ್ಬರಕ್ಕಿಂತ ಹೆಚ್ಚಾಗಿ ಕಣ್ಣಿನ ನೋಟ, ಧ್ವನಿಯ ಏರಿಳಿತ ಮತ್ತು ದೇಹಭಾಷೆಯ ಮೂಲಕ ಕಟ್ಟಿಕೊಡುವ ಶೈಲಿ ಅನಂತ ನಾಗ್ ಅವರಲ್ಲಿ ಕ್ರಮೇಣ ಗಾಢವಾಯಿತು. ಲಕ್ಷ್ಮಿ ಅವರೊಂದಿಗೆ ಅವರು ಅಭಿನಯಿಸಿದ ‘ಚಂದನದ ಗೊಂಬೆ’, ‘ನಾ ನಿನ್ನ ಬಿಡಲಾರೆ’, ‘ಮಕ್ಕಳಿರಲವ್ವ ಮನೆ ತುಂಬಾ’ ಸೇರಿದಂತೆ ಹಲವು ಚಿತ್ರಗಳು ಆ ಕಾಲದ ಪ್ರೇಕ್ಷಕರಲ್ಲಿ ಜನಪ್ರಿಯವಾದವು. ಸಹೋದರ ಶಂಕರ್ ನಾಗ್ ಜೊತೆಗಿನ ಅಪೂರ್ವ ಅಧ್ಯಾಯ: ಅನಂತ ನಾಗ್ ಅವರ ಸಿನಿಮಾ ಪಯಣವನ್ನು ಅವರ ಕಿರಿಯ ಸಹೋದರ ಶಂಕರ್ ನಾಗ್ ಅವರ ಉಲ್ಲೇಖವಿಲ್ಲದೆ ಪೂರ್ಣಗೊಳಿಸಲಾಗದು. ಇಬ್ಬರೂ ನಟರಾಗಿ, ಸೃಜನಶೀಲರಾಗಿ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ವಿಶೇಷ. ‘ಮಿಂಚಿನ ಓಟ’, ‘ಜನ್ಮ ಜನ್ಮದ ಅನುಬಂಧ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಕ್ಸಿಡೆಂಟ್’ ಸೇರಿದಂತೆ ಹಲವು ಯೋಜನೆಗಳಲ್ಲಿ ಸಹೋದರರು ಒಟ್ಟಾಗಿ ಕೆಲಸ ಮಾಡಿದರು. ಶಂಕರ್ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ನಲ್ಲಿಯೂ ಅನಂತ ನಾಗ್ ಕಾಣಿಸಿಕೊಂಡರು. ಆ ಧಾರಾವಾಹಿ ಆರ್.ಕೆ. ನಾರಾಯಣ್ ಅವರ ಕಥೆಗಳನ್ನು ಆಧರಿಸಿತ್ತು. ಭಾರತೀಯ ಕಿರುತೆರೆ ಇತಿಹಾಸದಲ್ಲಿ ಅದು ನೆನಪಿನಲ್ಲಿ ಉಳಿದ ಕೃತಿಗಳಲ್ಲೊಂದು. ನಾಯಕನಿಂದ ಪೋಷಕ ನಟನ ತನಕ ಪಾತ್ರ ಬದಲಾದರೂ ನಟ ಬದಲಾಗಲಿಲ್ಲ, ಚಿತ್ರರಂಗದಲ್ಲಿ ವಯಸ್ಸಿನೊಂದಿಗೆ ನಾಯಕನ ಪಾತ್ರಗಳು ಕಡಿಮೆಯಾಗುವುದು ಸಹಜ. ಆದರೆ ಅನಂತ ನಾಗ್ ಅವರ ವಿಶೇಷತೆ ಎಂದರೆ ಪಾತ್ರದ ಗಾತ್ರ ಕಡಿಮೆಯಾದಾಗಲೂ ಅಭಿನಯದ ಗಾತ್ರ ಕಡಿಮೆಯಾಗಲಿಲ್ಲ. ೧೯೯೦ರ ದಶಕದಲ್ಲಿ ಅವರು ಹಾಸ್ಯಭರಿತ ಪಾತ್ರಗಳಲ್ಲಿಯೂ ಹೊಸ ಜನಪ್ರಿಯತೆ ಪಡೆದರು. ‘ಗಣೇಶನ ಮದುವೆ’, ‘ಗೋಲ್‌ಮಾಲ್ ರಾಧಾಕೃಷ್ಣ’, ‘ಗೌರಿ ಗಣೇಶ’ ಚಿತ್ರಗಳು ಅನಂತ ನಾಗ್ ಅವರ ಕಾಮಿಡಿ ಟೈಮಿಂಗ್‌ಗೂ ಸಾಕ್ಷಿಯಾದವು. ಒಬ್ಬ ನಟನಿಗೆ ಗಂಭೀರ ಪಾತ್ರ ಮಾಡಲು ಸಾಧ್ಯವಿದೆ ಎಂಬುದು ಒಂದು ಸಾಮರ್ಥ್ಯ. ಅದೇ ನಟನಿಗೆ ಪ್ರೇಕ್ಷಕರನ್ನು ನಗಿಸುವ ಸಾಮರ್ಥ್ಯವಿರುವುದು ಮತ್ತೊಂದು. ಅನಂತ ನಾಗ್ ಎರಡನ್ನೂ ತೋರಿಸಿದರು. ಪಾತ್ರ ಚಿಕ್ಕದಾದರೂ ನೆನಪು ದೊಡ್ಡದಾಗಬಹುದು: ನಂತರದ ವರ್ಷಗಳಲ್ಲಿ ಅನಂತ ನಾಗ್ ಮುಖ್ಯ ನಾಯಕನ ಪಾತ್ರದಿಂದ ಪೋಷಕ ಪಾತ್ರಗಳತ್ತ ಸಾಗಿದರು. ಆದರೆ ಅವರ ಪ್ರವೇಶವೇ ಅನೇಕ ಸಿನಿಮಾಗಳಲ್ಲಿ ಒಂದು ರೀತಿಯ ಭರವಸೆಯಾಗಿ ಪರಿಣಮಿಸಿತು. ಕಥೆಯ ಕೇಂದ್ರದಲ್ಲಿರದ ಪಾತ್ರವೂ ಅವರ ಅಭಿನಯದಿಂದ ತನ್ನದೇ ತೂಕ ಪಡೆದುಕೊಳ್ಳುತ್ತಿತ್ತು. ಇದು ಬಹುಶಃ ಅವರ ಪಯಣದ ಅತ್ಯಂತ ದೊಡ್ಡ ಪಾಠ. ನಟನ ಮಹತ್ವ ಪಾತ್ರದ ಉದ್ದದಲ್ಲಿ ಇರುವುದಿಲ್ಲ; ಪಾತ್ರಕ್ಕೆ ನೀಡುವ ಜೀವಂತಿಕೆಯಲ್ಲಿ ಇರುತ್ತದೆ. ‘ಕೆಜಿಎಫ್’ ಪೀಳಿಗೆಯ ಪ್ರೇಕ್ಷಕರಿಗೂ ಅನಂತ ನಾಗ್: ಹೊಸ ತಲೆಮಾರಿನ ಪ್ರೇಕ್ಷಕರು ಅನಂತ ನಾಗ್ ಅವರನ್ನು ಮರೆತಿರಲಿಲ್ಲ. ೨೦೧೮ರಲ್ಲಿ ಬಿಡುಗಡೆಯಾದ ‘ಕೆಜಿಎಫ್: ಚಾಪ್ಟರ್ ೧’ ನಂತಹ ದೊಡ್ಡ ಪ್ರಮಾಣದ ಆಧುನಿಕ ಸಿನಿಮಾದಲ್ಲಿಯೂ ಅವರು ಕಾಣಿಸಿಕೊಂಡರು. ಇದು ಅವರ ಪಯಣದ ಮತ್ತೊಂದು ವಿಶೇಷತೆಯನ್ನು ತೋರಿಸುತ್ತದೆ. ಒಂದೆಡೆ ಶ್ಯಾಮ್ ಬೆನಗಲ್ ಅವರ ಸಮಾನಾಂತರ ಸಿನಿಮಾ, ಮತ್ತೊಂದೆಡೆ ಹಳೆಯ ಕನ್ನಡದ ಜನಪ್ರಿಯ ಚಿತ್ರಗಳು; ಒಂದು ಕಡೆ ‘ಮಾಲ್ಗುಡಿ ಡೇಸ್’, ಮತ್ತೊಂದು ಕಡೆ ಹೊಸ ತಲೆಮಾರಿನ ಭವ್ಯ ಚಿತ್ರಗಳು. ಕಾಲ ಬದಲಾಯಿತು. ಚಿತ್ರಮಾಧ್ಯಮ ಬದಲಾಯಿತು. ಪ್ರೇಕ್ಷಕರ ರುಚಿ ಬದಲಾಯಿತು. ಆದರೆ ಅನಂತ ನಾಗ್ ಅವರ ನಟನೆಯ ಅಗತ್ಯತೆ ಮಾತ್ರ ಉಳಿಯಿತು. ದೂರದರ್ಶನದಲ್ಲೂ ವಿಭಿನ್ನ ಛಾಪು: ಅನಂತ ನಾಗ್ ಅವರ ಕಲಾ ಪಯಣ ಬೆಳ್ಳಿತೆರೆಗೆ ಮಾತ್ರ ಸೀಮಿತವಾಗಿಲ್ಲ. ‘ಮಾಲ್ಗುಡಿ ಡೇಸ್’ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಗೂ ಅವರು ತಲುಪಿದರು. ವಿವಿಧ ದೂರದರ್ಶನ ಯೋಜನೆಗಳಲ್ಲಿ ಕಾಣಿಸಿಕೊಂಡರು. ಅದರಲ್ಲಿಯೂ ಅವರ ಅಭಿನಯದ ಮೂಲ ಸ್ವಭಾವ ಒಂದೇ ಅತಿರೇಕವಿಲ್ಲದ ಅಭಿವ್ಯಕ್ತಿ. ಪ್ರಶಸ್ತಿಗಳ ಹಿಂದೆ ಇರುವ ದೀರ್ಘ ಸಾಧನೆ: ಅನಂತ ನಾಗ್ ಅವರಿಗೆ ವಿವಿಧ ಹಂತಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಗೌರವಗಳು ಸಂದಿವೆ. ಅವರು ಐದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಇತ್ತೀಚಿನ ವರದಿಗಳು ದಾಖಲಿಸಿವೆ. ಫಿಲ್ಮ್ಫೇರ್ ಪ್ರಶಸ್ತಿಗಳಲ್ಲಿಯೂ ಅವರು ಹಲವು ಬಾರಿ ಗೌರವಿಸಲ್ಪಟ್ಟಿದ್ದಾರೆ. ೨೦೧೩ರಲ್ಲಿ ಕರ್ನಾಟಕ ಸರ್ಕಾರವು ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ನೀಡಿ ಗೌರವಿಸಿತು. ೨೦೨೫ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಗೌರವವೂ ಅವರಿಗೆ ದೊರೆಯಿತು. ರಾಷ್ಟ್ರಪತಿ ಭವನದ ದಾಖಲೆಗಳೂ ಅನಂತ ನಾಗ್ ಅವರನ್ನು ಐದು ದಶಕಗಳ ಕಾಲ ಕನ್ನಡ ಚಿತ್ರರಂಗ ಹಾಗೂ ಭಾರತೀಯ ಸಿನಿಮಾಕ್ಕೆ ಕೊಡುಗೆ ನೀಡಿದ ಹಿರಿಯ ನಟ ಎಂದು ದಾಖಲಿಸಿವೆ. ಈ ಎಲ್ಲ ಗೌರವಗಳ ಸರಣಿಯ ಮತ್ತೊಂದು ದೊಡ್ಡ ಕೊಂಡಿಯಾಗಿ ಈಗ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರ್ಪಡೆಯಾಗಿದೆ. ಫಾಲ್ಕೆ ಗೌರವ: ಒಬ್ಬ ನಟನಿಗಷ್ಟೇ ಅಲ್ಲ, ಒಂದು ಅಭಿನಯ ಪರಂಪರೆಗೆ: ದಾದಾಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ನೀಡಲಾಗುವ ಈ ಗೌರವವು ಭಾರತೀಯ ಚಿತ್ರರಂಗದಲ್ಲಿ ಜೀವಮಾನ ಸಾಧನೆಗೆ ನೀಡುವ ಅತ್ಯುನ್ನತ ರಾಷ್ಟ್ರೀಯ ಮಾನ್ಯತೆಯಾಗಿದೆ. ಅನಂತ ನಾಗ್ ಅವರಿಗೆ ಈ ಗೌರವ ದೊರೆಯುತ್ತಿರುವುದನ್ನು ಕೇವಲ ‘ಒಬ್ಬ ಕನ್ನಡ ನಟನಿಗೆ ರಾಷ್ಟ್ರದ ಗೌರವ’ ಎಂಬ ಒಂದೇ ಸಾಲಿನಲ್ಲಿ ಮುಗಿಸಲು ಸಾಧ್ಯವಿಲ್ಲ. ಇದು ಕನ್ನಡ ಚಿತ್ರರಂಗದ ಹಲವು ದಶಕಗಳ ಸೃಜನಶೀಲ ಪ್ರಯಾಣದೊಂದಿಗೆ ಬೆಸೆದುಕೊಂಡಿರುವ ಕಲಾವಿದನಿಗೆ ಸಿಕ್ಕಿರುವ ರಾಷ್ಟ್ರೀಯ ಮಾನ್ಯತೆ. ಡಾ.ರಾಜ್‌ಕುಮಾರ್ ನಂತರ ಈ ಗೌರವ ಪಡೆಯುತ್ತಿರುವ ಕನ್ನಡದ ಎರಡನೇ ನಟ ಎಂಬ ಇತಿಹಾಸವೂ ಇದಕ್ಕೆ ಮತ್ತೊಂದು ಆಯಾಮ ನೀಡುತ್ತದೆ. ಅನಂತ ನಾಗ್ ಎಂಬ ಅಭಿನಯದ ಭಾಷೆ : ಅನಂತ ನಾಗ್ ಅವರ ಅಭಿನಯವನ್ನು ವಿಶ್ಲೇಷಿಸಿದಾಗ ಪದೇಪದೇ ಎದುರಾಗುವ ಒಂದು ಪದ-ಸಹಜತೆ. ಆದರೆ ಸಹಜವಾಗಿ ಕಾಣುವುದು ಸುಲಭವಲ್ಲ. ಕ್ಯಾಮೆರಾ ಎದುರು ಅತಿಯಾಗಿ ಅಭಿನಯಿಸದೆ, ಪಾತ್ರದ ಭಾವನೆಯನ್ನು ಪ್ರೇಕ್ಷಕರಿಗೆ ತಲುಪಿಸುವುದು ದೊಡ್ಡ ಕಲೆ. ಕಣ್ಣಿನ ಒಂದು ನೋಟದಲ್ಲಿ ನೋವು ಹೇಳುವುದು, ಮಾತಿನ ಮಧ್ಯದ ಮೌನದಲ್ಲಿ ಗೊಂದಲ ವ್ಯಕ್ತಪಡಿಸುವುದು, ಸಣ್ಣ ನಗುವಿನಲ್ಲಿ ಸಂಬAಧದ ಆತ್ಮೀಯತೆ ಮೂಡಿಸುವುದು ಇವೆಲ್ಲವೂ ಅವರ ಅಭಿನಯದ ಭಾಗ. ಅದಕ್ಕಾಗಿಯೇ ಅನಂತ ನಾಗ್ ಅವರ ಕೆಲವು ಪಾತ್ರಗಳನ್ನು ಪ್ರೇಕ್ಷಕರು ವರ್ಷಗಳ ನಂತರವೂ ನೆನಪಿಸಿಕೊಳ್ಳುತ್ತಾರೆ. ಒಂದೇ ದಾರಿಯಲ್ಲಿ ಸಾಗದ ಕಲಾವಿದ: ಅನಂತ ನಾಗ್ ಅವರ ಪಯಣದ ಅತ್ಯಂತ ವಿಭಿನ್ನ ಅಂಶವೆAದರೆ ಅವರು ಒಂದೇ ರೀತಿಯ ಸಿನಿಮಾಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ರಂಗಭೂಮಿ ಇತ್ತು. ಸಮಾನಾಂತರ ಸಿನಿಮಾ ಇತ್ತು. ಜನಪ್ರಿಯ ವಾಣಿಜ್ಯ ಸಿನಿಮಾ ಇತ್ತು. ಪ್ರೇಮಕಥೆ ಇತ್ತು. ಕುಟುಂಬ ಕಥೆ ಇತ್ತು. ಹಾಸ್ಯ ಇತ್ತು. ಗಂಭೀರ ಪಾತ್ರ ಇತ್ತು. ಕಿರುತೆರೆ ಇತ್ತು. ಹೊಸ ತಲೆಮಾರಿನ ಭವ್ಯ ಚಿತ್ರಗಳೂ ಇದ್ದವು. ಭಾಷೆಯ ಗಡಿಗಳನ್ನೂ ಅವರು ದಾಟಿದರು. ಕನ್ನಡದ ಜೊತೆಗೆ ಹಿಂದಿ ಸೇರಿದಂತೆ ಹಲವು ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದರು. ಇತ್ತೀಚಿನ ವರದಿಗಳ ಪ್ರಕಾರ ಅವರ ಚಿತ್ರಪಯಣ ೩೦೦ಕ್ಕೂ ಹೆಚ್ಚು ಸಿನಿಮಾಗಳನ್ನು ಒಳಗೊಂಡಿದೆ. ಹೀಗಾಗಿ ಅನಂತ ನಾಗ್ ಅವರನ್ನು ಒಂದು ನಿರ್ದಿಷ್ಟ ‘ಇಮೇಜ್’ನಲ್ಲಿ ಬಂಧಿಸುವುದು ಕಷ್ಟ. ಪರದೆಯ ಮೇಲಿನ ಮುಖವಲ್ಲ; ಕಾಲದೊಂದಿಗೆ ನಡೆದ ಕಲಾವಿದ: ಐದು ದಶಕಗಳ ಹಿಂದೆ ಚಿತ್ರರಂಗಕ್ಕೆ ಬಂದ ಯುವಕನೊಬ್ಬ ಇಂದು ಭಾರತೀಯ ಸಿನಿಮಾದ ಅತ್ಯುನ್ನತ ಜೀವಮಾನ ಗೌರವ ಪಡೆಯುವ ಹಂತಕ್ಕೆ ಬಂದಿದ್ದಾನೆ. ಈ ಪಯಣದಲ್ಲಿ ಬದಲಾಗಿದ್ದು ಕಾಲ. ಬದಲಾಗಿದ್ದು ತಂತ್ರಜ್ಞಾನ. ಬದಲಾಗಿದ್ದು ಸಿನಿಮಾ ನಿರ್ಮಾಣದ ವಿಧಾನ. ಬದಲಾಗಿದ್ದು ಪ್ರೇಕ್ಷಕರ ಅಭಿರುಚಿ. ಆದರೆ ಪಾತ್ರದ ಸತ್ಯವನ್ನು ಹುಡುಕುವ ನಟನ ಜವಾಬ್ದಾರಿ ಬದಲಾಗಲಿಲ್ಲ. ಅನಂತ ನಾಗ್ ಅವರ ಕಲಾ ಬದುಕನ್ನು ಒಂದೇ ವಾಕ್ಯದಲ್ಲಿ ಹೇಳಬೇಕಾದರೆ-ಅವರು ಸಿನಿಮಾಗಳಲ್ಲಿ ನಟಿಸಿದವರಲ್ಲ; ಸಿನಿಮಾಗಳು ಬದಲಾಗುತ್ತಿದ್ದಂತೆ ಅಭಿನಯದ ಅರ್ಥವನ್ನೂ ತಮ್ಮೊಂದಿಗೆ ಸಾಗಿಸಿಕೊಂಡು ಬಂದ ಕಲಾವಿದ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆ ದೀರ್ಘ ಪಯಣದ ಅಂತಿಮ ಮುದ್ರೆ ಅಲ್ಲ: ಅದು ಕನ್ನಡದ ಒಬ್ಬ ನಟನ ಅಭಿನಯಕ್ಕೆ ಭಾರತೀಯ ಚಿತ್ರರಂಗ ನೀಡಿದ ರಾಷ್ಟ್ರೀಯ ಗೌರವದ ಶಿಖರಗಳಲ್ಲಿ ಒಂದು. ಮತ್ತು ಅನಂತ ನಾಗ್ ಅವರ ಪಯಣ ನಮಗೆ ಹೇಳುವ ಅತ್ಯಂತ ಸುಂದರ ಸತ್ಯವೆಂದರೆ-ಪಾತ್ರಗಳು ಮುಗಿಯಬಹುದು. ಸಿನಿಮಾಗಳು ಮುಗಿಯಬಹುದು. ಆದರೆ ನಿಜವಾದ ಅಭಿನಯ ಪ್ರೇಕ್ಷಕರ ನೆನಪಿನಲ್ಲಿ ಮುಂದುವರಿಯುತ್ತಲೇ ಇರುತ್ತದೆ. ಅನಂತ ನಾಗ್ ಅವರ ಐದು ದಶಕಗಳ ಕಲಾ ಪಯಣ ಅದಕ್ಕೆ ಜೀವಂತ ಸಾಕ್ಷಿ.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads